Asianet Suvarna News Asianet Suvarna News

ಹೊಸ ತಲೆಮಾರಿನ ಟೀಂ ಇಂಡಿಯಾ ಅನಾವರಣ!

ಒಂದೂವರೆ ತಿಂಗಳ ಕಾಲ ನಡೆದ ಸರಣಿಯು ಭಾರತ ತಂಡದ ಆಡಳಿತ ಹಾಗೂ ಅಭಿಮಾನಿಗಳಲ್ಲಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿತು. ಮುಂದಿನ ಕೆಲ ವರ್ಷಗಳ ಕಾಲ ಟೆಸ್ಟ್‌ ಕ್ರಿಕೆಟ್‌ ಅನ್ನು ಆಳುವ ಸುಳಿವನ್ನು ಜೈಸ್ವಾಲ್‌, ಗಿಲ್‌ ಸೇರಿ ಕೆಲ ಯುವ ಆಟಗಾರರು ನೀಡಿದರು.

New Generation Team India ready for new challenge kvn
Author
First Published Mar 11, 2024, 10:15 AM IST

ಬೆಂಗಳೂರು(ಮಾ.11): ನಿರೀಕ್ಷೆಯಂತೆಯೇ ಇಂಗ್ಲೆಂಡ್‌ ವಿರುದ್ಧ ಭಾರತ ಪ್ರಾಬಲ್ಯ ಮೆರೆದು ಸರಣಿ ವಶಪಡಿಸಿಕೊಂಡಿದ್ದು ಅಭಿಮಾನಿಗಳಿಗೆ ಖುಷಿ ನೀಡಿತು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಈ ಸರಣಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಭವಿಷ್ಯ ಉಜ್ವಲವಾಗಿದೆ ಎನ್ನುವುದನ್ನು ತೋರಿಸಿಕೊಟ್ಟಿತು.

ಹಲವು ರೀತಿಗಳಲ್ಲಿ ಈ ಸರಣಿ ಭಾರತ ತಂಡಕ್ಕೆ ಸವಾಲು ಎನಿಸಿತ್ತು. ತಂಡದ ಅತಿಮುಖ್ಯ ಸದಸ್ಯ ವಿರಾಟ್‌ ಕೊಹ್ಲಿ ಇಡೀ ಸರಣಿಯಿಂದಲೇ ದೂರ ಉಳಿದರು. ರೋಹಿತ್‌ ಶರ್ಮಾ ಜೊತೆ ಇನ್ನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ತಾಳ್ಮೆಯ ಬಗ್ಗೆ ಅನುಮಾನವಿತ್ತು. ಚೇತೇಶ್ವರ್‌ ಪೂಜಾರ ಬಹಳ ವರ್ಷ ಗಟ್ಟಿಯಾಗಿ ನಿಂತಿದ್ದ 3ನೇ ಕ್ರಮಾಂಕದಲ್ಲಿ ಶುಭ್‌ಮನ್‌ ಗಿಲ್‌ ಯಶಸ್ವಿಯಾಗಬಲ್ಲರೇ ಎನ್ನುವ ಕುತೂಹಲವೂ ಇತ್ತು. ಇನ್ನು ತಂಡ ನೆಚ್ಚಿಕೊಂಡಿದ್ದ ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌ರಂತಹ ಆಟಗಾರರು ಗಾಯಗೊಂಡು ಬಹುತೇಕ ಪಂದ್ಯಗಳನ್ನು ತಪ್ಪಿಸಿಕೊಂಡರು. ಅವರ ಸ್ಥಾನಗಳಲ್ಲಿ ಆಡುವ ಆಟಗಾರರು ತಂಡಕ್ಕೆ ನೆರವಾಗಲಿದ್ದಾರೆಯೇ?, ರಿಷಭ್‌ ಪಂತ್‌ ಇಲ್ಲದ ಮಧ್ಯಮ ಕ್ರಮಾಂಕದ ಕಥೆ ಏನು? ಹೀಗೆ ಅನೇಕ ಪ್ರಶ್ನೆಗಳು ಎಲ್ಲರ ತಲೆಯಲ್ಲಿತ್ತು.

ಒಂದೂವರೆ ತಿಂಗಳ ಕಾಲ ನಡೆದ ಸರಣಿಯು ಭಾರತ ತಂಡದ ಆಡಳಿತ ಹಾಗೂ ಅಭಿಮಾನಿಗಳಲ್ಲಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿತು. ಮುಂದಿನ ಕೆಲ ವರ್ಷಗಳ ಕಾಲ ಟೆಸ್ಟ್‌ ಕ್ರಿಕೆಟ್‌ ಅನ್ನು ಆಳುವ ಸುಳಿವನ್ನು ಜೈಸ್ವಾಲ್‌, ಗಿಲ್‌ ಸೇರಿ ಕೆಲ ಯುವ ಆಟಗಾರರು ನೀಡಿದರು.

ಟೀಂ ಇಂಡಿಯಾ ಮುಟ್ಟಿದ್ದೆಲ್ಲಾ ಚಿನ್ನ..! ಎಲ್ಲಾ ಮಾದರಿಯಲ್ಲೂ ರೋಹಿತ್ ಪಡೆ ನಂ.1

ಜೈಸ್ವಾಲ್‌, ಗಿಲ್‌ ಧಮಾಕ: ಶಿಖರ್‌ ಧವನ್‌, ಮುರಳಿ ವಿಜಯ್‌ ತೆರೆಮರೆಗೆ ಸರಿದ ಬಳಿಕ ಆರಂಭಿಕನ ಸ್ಥಾನಕ್ಕೆ ಭಾರತ ಹಲವು ಆಟಗಾರರು ಪರೀಕ್ಷಿಸಿತು. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಯಶಸ್ವಿ ಜೈಸ್ವಾಲ್‌ ಆರಂಭಿಕನ ಸ್ಥಾನವನ್ನು ಹಲವು ವರ್ಷಗಳ ಕಾಲ ತಮ್ಮಲ್ಲೇ ಉಳಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ. ಇಂಗ್ಲೆಂಡ್‌ ಮೇಲೆ ಅವರು ಸವಾರಿ ಮಾಡಿದ ರೀತಿ ಕ್ರಿಕೆಟ್‌ ಜಗತ್ತನ್ನೇ ಬೆರಗಾಗಿಸಿದೆ. 2 ದ್ವಿಶತಕ, 3 ಅರ್ಧಶತಕ ಸೇರಿ ಒಟ್ಟು 712 ರನ್‌ ಚಚ್ಚಿದ ಜೈಸ್ವಾಲ್‌ ಸರಣಿಯುದ್ದಕ್ಕೂ ಹಲವು ದಾಖಲೆಗಳನ್ನು ಬರೆದರು. ಸರಣಿಯಲ್ಲಿ ಒಟ್ಟು 26 ಸಿಕ್ಸರ್‌ ಸಿಡಿಸಿದ 22ರ ಎಡಗೈ ಬ್ಯಾಟರ್‌ ವೀರೇಂದ್ರ ಸೆಹ್ವಾಗ್‌ರ ಆಟ ನೆನಪಾಗುವಂತೆ ಮಾಡಿದ್ದು ಸುಳ್ಳಲ್ಲ.

ಇನ್ನು ಶುಭ್‌ಮನ್‌ ಗಿಲ್‌, 3ನೇ ಕ್ರಮಾಂಕಕ್ಕೆ ಸೂಕ್ತರೇ ಎನ್ನುವ ಪ್ರಶ್ನೆಗೂ ಉತ್ತರ ದೊರೆಯಿತು. ಸರಣಿಯ ಆರಂಭದಲ್ಲಿ ರನ್‌ ಗಳಿಸಲು ಕಷ್ಟಪಟ್ಟ ಗಿಲ್‌, ಬಳಿಕ ಲಯ ಕಂಡುಕೊಂಡರು. 9 ಇನ್ನಿಂಗ್ಸಲ್ಲಿ ತಲಾ 2 ಶತಕ ಹಾಗೂ ಅರ್ಧಶತಕಗಳೊಂದಿಗೆ 452 ರನ್ ಕಲೆಹಾಕಿ ಸರಣಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ದೇಸಿ ಕ್ರಿಕೆಟ್‌ನಲ್ಲಿ ಕಳೆದೆರಡು ವರ್ಷದಲ್ಲಿ ರಾಶಿ ರಾಶಿ ರನ್‌ ಸಿಡಿಸಿ ಟೀಂ ಇಂಡಿಯಾದಲ್ಲಿ ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಸರ್ಫರಾಜ್‌ ಖಾನ್‌, ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡರು. 5 ಇನ್ನಿಂಗ್ಸಲ್ಲಿ ಅವರಿಂದ 3 ಅರ್ಧಶತಕ ಮೂಡಿಬಂತು. ದೇವದತ್‌ ಪಡಿಕ್ಕಲ್‌ಗೆ ಆಡಲು ಸಿಕ್ಕಿದ್ದು ಒಂದೇ ಇನ್ನಿಂಗ್ಸ್‌. ಅವರ ಸೊಗಸಾದ ಬ್ಯಾಟಿಂಗ್‌ ನೋಡಿ ಖುಷಿ ಪಡದವರೇ ಇಲ್ಲ. ರೋಹಿತ್‌ ಶರ್ಮಾ ನಿವೃತ್ತಿ ಬಳಿಕ ಪಡಿಕ್ಕಲ್‌ಗೆ ಆರಂಭಿಕನ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ.

'ಸೀರೆಲಿ ಹುಡುಗೀರ ನೋಡಲೇಬಾರದು....': RCB ಡ್ರೀಮ್ ಗರ್ಲ್ ಪೆರ್ರಿಯ ದೇಸಿ ಲುಕ್ ವೈರಲ್

ಜುರೆಲ್‌ ಮಿಂಚು: ಕೆ.ಎಸ್‌.ಭರತ್‌ ನಿರೀಕ್ಷೆ ಉಳಿಸಿಕೊಳ್ಳದ ಕಾರಣ ಅವರನ್ನು ಹೊರಗಿಟ್ಟು ಅನಾನುಭವಿ ಧೃವ್‌ ಜುರೆಲ್‌ಗೆ ಅವಕಾಶ ನೀಡಬೇಕಾಯಿತು. ಜುರೆಲ್‌ ಕೀಪಿಂಗ್‌ ಜೊತೆ ಬ್ಯಾಟಿಂಗ್‌ನಲ್ಲೂ ಗಮನ ಸೆಳೆದರು. ಚೊಚ್ಚಲ ಇನ್ನಿಂಗ್ಸಲ್ಲಿ 46 ರನ್‌ ಗಳಿಸಿದ್ದ ಜುರೆಲ್‌, ರಾಂಚಿಯಲ್ಲಿ ನಡೆದಿದ್ದ 4ನೇ ಟೆಸ್ಟ್‌ನಲ್ಲಿ ಭಾರತ ಮೊದಲ ಇನ್ನಿಂಗ್ಸಲ್ಲಿ 177ಕ್ಕೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜುರೆಲ್‌ ಆಕರ್ಷಕ 90 ರನ್‌ ಗಳಿಸಿದರು. ಬಳಿಕ 2ನೇ ಇನ್ನಿಂಗ್ಸಲ್ಲಿ ಗೆಲ್ಲಲು 192 ರನ್‌ ಬೆನ್ನತ್ತಿದ್ದ ಭಾರತ, 120ಕ್ಕೆ 5 ವಿಕೆಟ್‌ ಕಳೆದುಕೊಂಡು ಸೋಲುವ ಭೀತಿಗೆ ಸಿಲುಕಿತ್ತು. ಆಗ ಜುರೆಲ್‌ ಔಟಾಗದೆ ಗಳಿಸಿದ 39 ರನ್‌ ಭಾರತ ಸರಣಿ ವಶಪಡಿಸಿಕೊಳ್ಳಲು ನೆರವಾಯಿತು. ಉತ್ತರ ಪ್ರದೇಶದ ಜುರೆಲ್‌ರ ಕೀಪಿಂಗ್‌ ಕೌಶಲ್ಯಕ್ಕೂ ಎಲ್ಲರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು.

ಕುಲ್ದೀಪ್‌ ಮುಂದಿನ ‘ಸ್ಪಿನ್‌’ ಕ್ಯಾಪ್ಟನ್‌!: ಆರ್‌.ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ಬಳಿಕ ಭಾರತದ ಸ್ಪಿನ್‌ ದಾಳಿಯನ್ನು ಮುನ್ನಡೆಸುವವರು ಯಾರು ಎನ್ನುವ ಪ್ರಶ್ನೆಗೂ ಈ ಸರಣಿಯಲ್ಲಿ ಉತ್ತರ ಸಿಕ್ಕಿತು. ಚೈನಾಮನ್‌ ಬೌಲರ್‌ ಕುಲ್ದೀಪ್‌ ಸರಣಿಯಲ್ಲಿ ತೋರಿದ ಪ್ರದರ್ಶನ ಅಮೋಘವಾಗಿತ್ತು. 8 ಇನ್ನಿಂಗ್ಸಲ್ಲಿ ಒಟ್ಟು 19 ವಿಕೆಟ್‌ ಕಬಳಿಸಿದ ಕುಲ್ದೀಪ್‌ರ ಬ್ಯಾಟಿಂಗ್‌ ಕೌಶಲ್ಯವೂ ಸುಧಾರಿಸುತ್ತಿರುವುದು ಒಳ್ಳೆಯ ಬೆಳವಣಿಗೆ.

ಇನ್ನು ವೇಗಿ ಆಕಾಶ್‌ ದೀಪ್‌ ಸಿಕ್ಕ ಒಂಟಿ ಅವಕಾಶದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ಗಂಟೆಗೆ 140 ಕಿ.ಮೀ.+ ವೇಗದಲ್ಲಿ ಬೌಲ್‌ ಮಾಡುವ ಆಕಾಶ್‌, ಚೆಂಡಿನ ಮೇಲೆ ಉತ್ತಮ ನಿಯಂತ್ರಣವನ್ನೂ ಹೊಂದಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಖಂಡಿತವಾಗಿಯೂ ಹೆಚ್ಚಿನ ಅವಕಾಶಗಳು ಸಿಗಲಿವೆ.

ಒಟ್ಟಾರೆ, ಇಂಗ್ಲೆಂಡ್‌ ವಿರುದ್ಧದ ಸರಣಿ ಟೀಂ ಇಂಡಿಯಾದ ಆತ್ಮವಿಶ್ವಾಸವನ್ನು ವೃದ್ಧಿಸಿದ್ದು ಯುವಕರ ಪಡೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಐತಿಹಾಸಿಕ ಗೆಲುವುಗಳಿಗೆ ಸಾಕ್ಷಿಯಾಗುವುದರಲ್ಲಿ ಅನುಮಾನವಿಲ್ಲ.
 

Follow Us:
Download App:
  • android
  • ios