Asianet Suvarna News Asianet Suvarna News

Ball-Tampering: ಚೆಂಡು ವಿರೂಪಗೊಳಿಸಿ 4 ಪಂದ್ಯಕ್ಕೆ ನಿಷೇಧಕ್ಕೊಳಗಾದ ಬೌಲರ್..!

* ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದ ನೆದರ್‌ಲ್ಯಾಂಡ್ ತಂಡದ ವೇಗಿ ವಿವಿನ್‌ ಕಿಗ್ಮಾ

* ಆಫ್ಘಾನಿಸ್ತಾನ ತಂಡದ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್

* ನಾಲ್ಕು ಪಂದ್ಯಗಳ ನಿಷೇಧಕ್ಕೆ ಗುರಿಯಾದ ವೇಗದ ಬೌಲರ್‌

Netherlands Cricket Team Pacer Kingma gets 4 match suspension for ball tampering kvn
Author
Bengaluru, First Published Jan 26, 2022, 6:35 PM IST

ದುಬೈ(ಜ.26): ಆಫ್ಘಾನಿಸ್ತಾನ ವಿರುದ್ದದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ನೆದರ್‌ಲ್ಯಾಂಡ್‌ ಕ್ರಿಕೆಟ್ ತಂಡದ (Netherlands Cricket Team) ವೇಗದ ಬೌಲರ್‌ ವಿವಿನ್‌ ಕಿಗ್ಮಾ (Vivian Kingma) ಬಾಲ್ ಟ್ಯಾಂಪರಿಂಗ್(ಚೆಂಡು ವಿರೂಪಗೊಳಿಸಿದ) (Ball-Tampering) ಮಾಡಿದ ತಪ್ಪಿಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯಿಂದ (International Cricket Council) ನಾಲ್ಕು ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿಷೇಧಕ್ಕೆ ಗುರಿಯಾಗಿದ್ದಾರೆ. ಈ ವಿಚಾರವನ್ನು ಐಸಿಸಿಯು ಬುಧವಾರ(ಜ.26) ಖಚಿತಪಡಿಸಿದೆ.

ದೋಹಾದಲ್ಲಿ ಮಂಗಳವಾರ(ಜ.25) ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ನೆದರ್‌ಲ್ಯಾಂಡ್‌ ಕ್ರಿಕೆಟ್ ತಂಡದ ವೇಗದ ಬೌಲರ್‌ ವಿವಿನ್‌ ಕಿಗ್ಮಾ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಹೀಗಾಗಿ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ (ICC's code of conduct) ಮಾಡಿದ ತಪ್ಪಿಗಾಗಿ ನೆದರ್‌ಲ್ಯಾಂಡ್ ತಂಡವು ಆಡುವ ಮುಂಬರುವ 4 ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳಿಂದ ವೇಗಿ ವಿವಿನ್ ಕಿಗ್ಮಾ ಹೊರಗುಳಿಯಲಿದ್ದಾರೆ.

ಬಾಲ್ ಟ್ಯಾಂಪರಿಂಗ್ ಘಟನೆಯು ಆಫ್ಘಾನಿಸ್ತಾನದ ಇನಿಂಗ್ಸ್‌ನ 31ನೇ ಓವರ್‌ನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ನೆದರ್‌ಲ್ಯಾಂಡ್ ತಂಡದ ವೇಗದ ಬೌಲರ್‌ ವಿವಿನ್‌ ಕಿಗ್ಮಾ ತಮ್ಮ ಉಗುರುಗಳಿಂದ ಚೆಂಡನ್ನು ತರಚುವ ಮೂಲಕ ಚೆಂಡು ವಿರೋಪಗೊಳಿಸಿದ್ದಾರೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 27 ವರ್ಷದ ವಿವಿನ್ ಕಿಗ್ಮಾ ತಾವು ಮಾಡಿರುವ ತಪ್ಪನ್ನು ಹಾಗೂ ಶಿಕ್ಷೆಯ ಪ್ರಮಾಣವನ್ನು ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ಮ್ಯಾಚ್ ರೆಫ್ರಿ ವೆಂಡೆಲ್‌ ಲಾ ಬ್ರೋಯಿ ತಿಳಿಸಿದ್ದಾರೆ.

ನೆದರ್‌ಲ್ಯಾಂಡ್ಸ್‌ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಫ್ಘಾನಿಸ್ತಾನ ತಂಡವು ಕ್ಲೀನ್ ಸ್ವೀಪ್ ಮಾಡಿದೆ. ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವು 75 ರನ್‌ಗಳ ಅಂತರದ ಸುಲಭ ಗೆಲುವು ದಾಖಲಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಲಂಕಾ ಆಲ್ರೌಂಡರ್ ದಿಲ್ರೂನ್ ಪೆರೆರಾ

ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ (Sri Lanka Cricket) ಸ್ಟಾರ್ ಆಲ್ರೌಂಡರ್‌ ದಿಲ್ರೂನ್ ಪೆರೆರಾ (Dilruwan Perera) ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ದಿಲ್ರೂನ್ ಪೆರೆರಾ ಶ್ರೀಲಂಕಾ ಪರ 43 ಟೆಸ್ಟ್, 13 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಿದ್ದು, ಮೂರು ಮಾದರಿಯ ಕ್ರಿಕೆಟ್‌ನಿಂದ ಒಟ್ಟಾರೆ 1,456 ರನ್ ಹಾಗೂ 177 ವಿಕೆಟ್ ಕಬಳಿಸಿದ್ದಾರೆ. ಇದೇ ವೇಳೆ ದಿಲ್ರೂನ್ ಪೆರೆರಾ ತಾವು ದೇಶಿ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ದಿಲ್ರೂನ್ ಪೆರೆರಾ 2007ರಲ್ಲಿ ಇಂಗ್ಲೆಂಡ್ ಎದುರು ಕೊಲಂಬೊದಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾಗಿ ಕೆಲ ವರ್ಷಗಳ ನಂತರ ದಿಲ್ರೂನ್ ಪೆರೆರಾ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ಪಾಕಿಸ್ತಾನ ವಿರುದ್ದ ಶಾರ್ಜಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದಿಲ್ರೂನ್ ಪೆರೆರಾ ರೆಡ್ ಬಾಲ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದರ ಜತೆಗೆ ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲೇ 8ನೇ ಕ್ರಮಾಂಕದಲ್ಲಿ 95 ರನ್ ಚಚ್ಚಿದ್ದರು. ಇದಾದ ಬಳಿಕ ಆಫ್‌ ಸ್ಪಿನ್ನರ್ ದಿಲ್ರೂನ್ ಪೆರೆರಾ ಟೆಸ್ಟ್ ಕ್ರಿಕೆಟ್‌ನಲ್ಲಿ 161 ಬಲಿ ಪಡೆದಿದ್ದರು. ಇನ್ನು ಕಳೆದ ವರ್ಷದ ಜನವರಿಯಲ್ಲಿ ದಿಲ್ರೂನ್ ಪೆರೆರಾ ಶ್ರೀಲಂಕಾ ಪರ ಕಡೆಯ ಟೆಸ್ಟ್ ಪಂದ್ಯವನ್ನಾಡಿದ್ದರು.

ದಿಲ್ರೂನ್ ಪೆರೆರಾ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸಿಕ್ಕಿದಷ್ಟು ಯಶಸ್ಸು ಹಾಗೂ ಅವಕಾಶ ಏಕದಿನ ಕ್ರಿಕೆಟ್‌ನಲ್ಲಿ ಲಭಿಸಲಿಲ್ಲ. ಲಂಕಾ ಪರ 13 ಏಕದಿನ ಪಂದ್ಯಗಳಿಂದ 13 ವಿಕೆಟ್ ಹಾಗೂ ಮೂರು ಟಿ20 ಪಂದ್ಯಗಳಿಂದ 3 ವಿಕೆಟ್ ಗಳನ್ನು ಮಾತ್ರ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ದಿಲ್ರೂನ್ ಪೆರೆರಾ ಅವರ ಈ ನಿರ್ಧಾರಕ್ಕೆ ಶ್ರೀಲಂಕಾದ ಹಿರಿಯ ಹಾಗೂ ಕಿರಿಯ ಆಟಗಾರರು ಶುಭ ಕೋರಿದ್ದಾರೆ. ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ನಿಮ್ಮ ಸೇವೆ ಅನನ್ಯವಾದದ್ದು, ನಿಮ್ಮ ಜತೆ ಒಟ್ಟಾಗಿ ಆಡಿದ್ದು ನನ್ನ ಅದೃಷ್ಠ ಎಂದು ಭಾವಿಸುತ್ತೇನೆ. ನಿಮ್ಮ ಮುಂಬರುವ ಭವಿಷ್ಯ ಉಜ್ವಲವಾಗಿರಲಿ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಉಪುಲ್ ತರಂಗಾ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.

Follow Us:
Download App:
  • android
  • ios