ಆರ್‌ಸಿಬಿ ಟ್ರೋಫಿ ಗೆಲ್ಲಲು ಅಭಿಮಾನಿಗಳ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದರ ನಡುವೆ ಮಹತ್ವದ ಘೋಷಣೆ ಹೊರಬಿದ್ದಿದೆ. ಆರ್‌ಸಿಬಿ ಪ್ರಶಸ್ತಿ ಗೆದ್ದರೆ ಜಿಲ್ಲೆಯ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಹೋಳಿಗೆ ಊಟ ವಿತರಿಸಲಾಗುತ್ತದೆ.

ಮೈಸೂರು(ಜೂ.02) ಐಪಿಎಲ್ 2025 ಟೂರ್ನಿ ಫೈನಲ್ ಪಂದ್ಯ ಜೂನ್ 3 ರಂದು ಅಹಮ್ಮಾದಾಬಾದ್‌ನಲ್ಲಿ ನಡೆಯಲಿದೆ. ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಆರ್‌ಸಿಬಿ ಮೊದಲ ಬಾರಿಗೆ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ. ಇದರ ನಡುವೆ ಅಭಿಮಾನಿಗಳು ಆರ್‌ಸಿಬಿ ಗೆಲುವಿಗೆ ಪೂಜೆ, ಪಾರ್ಥನೆ ನಡೆಸುತ್ತಿದ್ದಾರೆ. ಮೊದಲ ಟ್ರೋಫಿ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ. ಆರ್‌ಸಿಬಿ ಅಭಿಮಾನಿಗಳ ಅಭಿಮಾನ ಇಷ್ಟಕ್ಕೆ ನಿಂತಿಲ್ಲ. ಇದೀಗ ಮೈಸೂರಿನ ಆರ್‌ಸಿಬಿ ಅಭಿಮಾನಿ ಎಲ್ಲರಿಗೂ ಉಚಿತ ಹೋಳಿಗೆ ಊಟ ಹಾಕಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದರೆ ಮೈಸೂರು ಜಿಲ್ಲೆಯ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಹೋಳಿಗೆ ಊಟ ವಿತರಿಸಲು ನಿರ್ಧರಿಸಿದ್ದಾರೆ.

ಮೈಸೂರು ಅಭಿಮಾನಿಯ ಭರ್ಜರಿ ತಯಾರಿ

ಆರ್‌ಸಿಬಿ ಅಭಿಮಾನಿಗಳು ತಮ್ಮ ಶಕ್ತಿ ಸಾಮರ್ಥ್ಯ ಮೀರಿ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಇತ್ತೀಚೆಗೆ ಅಭಿಮಾನಿಯೊಬ್ಬ ಆರ್‌ಸಿಬಿ ಫೈನಲ್ ತಲುಪಿರುವ ಕಾರಣ ಜೂನ್ 3ರಂದು ಸಾರ್ವಜನಿಕ ರಜೆ ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದ. ಇದೀಗ ಮೈಸೂರಿನ ಅಭಿಮಾನಿ ಜಿಲ್ಲೆಯ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಹೋಳಿಗೆ ಊಟ ನೀಡಲು ಮುಂದಾಗಿದ್ದಾನೆ. ಮೈಸೂರಿನ ಆರ್‌ಸಿಬಿ ಅಭಿಮಾನಿ ಬಸವರಾಜ ಬಸಪ್ಪ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಕೇವಲ ಘೋಷಣೆಯಲ್ಲ. ಆರ್‌ಸಿಬಿ ಕ್ವಾಲಿಫೈಯರ್ ಗೆದ್ದು ಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಈ ಅಭಿಮಾನಿ ಮೈಸೂರಿನ ಗನ್ ಹೌಸ್ ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ ವಿತರಿಸಿದ್ದಾರೆ.

16 ಇಂದಿರಾ ಕ್ಯಾಂಟೀನ್‌ಲ್ಲಿ ಉಚಿತ ಹೋಳಿಗೆ ಊಟ

ಆರ್‌ಸಿಬಿ ಫೈನಲ್ ತಲುಪಿದ ಬೆನ್ನಲ್ಲೇ ಬಸವರಾಜ್ ಬಸಪ್ಪ ಹೋಳಿಕೆ ತಯಾರಿಸಿ ಗನ್ ಹೌಸ್ ವತ್ತದ ಇಂದಿರಾ ಕ್ಯಾಂಟೀನ್ ವಿತರಿಸಿದ್ದಾರೆ. ಫೈನಲ್ ತಲುಪಿದ ಬೆನ್ನಲ್ಲೇ ಬಸವರಾಜ್ ಬಸಪ್ಪ ಸಂಭ್ರಮ ಡಬಲ್ ಆಗಿದೆ. ಇತ್ತ ಬಸವರಾಜ್ ಬಸಪ್ಪ ಆರ್‌ಸಿಬಿ ಫೈನಲ್ ಪಂದ್ಯದಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಬಸವರಾಜ್ ಬಸಪ್ಪ ಈಗಾಗಲೇ ಹೋಳಿಕೆ ತಯಾರಿಸುವ ಕಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್‌ಸಿಬಿ ಚಾಂಪಿಯನ್ ಕಿರೀಟ ಅಲಂಕರಿಸಿದರೆ ಜೂನ್ 4 ರಂದು ಮೈಸೂರು ಜಿಲ್ಲೆಯ ಎಲ್ಲಾ 16 ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನ ಹೋಳಿಗೆ ಊಟ ಉಚಿತವಾಗಿ ಸಿಗಲಿದೆ.

ಸಿದ್ದರಾಮಯ್ಯಗೆ ಮನವಿ ಮಾಡಿದ ಬಸವರಾಜ್ ಬಸಪ್ಪ

ಇಂದಿರಾ ಕ್ಯಾಂಟೀನ್ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಕ್ಯಾಂಟೀನ್. ಹೀಗಾಗಿ ಬಸವರಾಜ್ ಬಸಪ್ಪ ಈಗಾಗಲೇ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಹೋಳಿಗೆ ಊಟ ವಿತರಿಸಲು ಮನವಿ ಮಾಡಿದ್ದಾರೆ.

ಆರ್‌ಸಿಬಿ ಪಂಜಾಬ್ ನಡುವೆ ಫೈನಲ್

ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಮೊದಲ ಕ್ವಾಲಿಫೈಯರ್ ಬಳಿಕ ಮತ್ತೆ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಅಹಮ್ಮದಾಬಾದ್‌ನಲ್ಲಿ ಉತ್ತಮ ಮಳೆಯಾಗುತ್ತಿದೆ.ಹೀಗಾಗಿ ಫೈನಲ್ ಪಂದ್ಯಕ್ಕೂ ಮಳೆ ಭೀತಿ ಕಾಡುತ್ತಿದೆ.