ಜೊಹಾನ್ಸ್‌ಬರ್ಗ್(ಏ.19): ತಮ್ಮ ಮಾರಕ ಬೌಲಿಂಗ್ ಮೂಲಕ 90ರ ದಶಕದಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಭಾರತದ ವೇಗಿ ಜಾವಗಲ್ ಶ್ರೀನಾಥ್‌ಗೆ ಸರಿಯಾದ ಗೌರವಾದರಗಳು ಸಿಗಲಿಲ್ಲ ಎಂದು ದಕ್ಷಿಣ ಆಫ್ರಿಕಾ ಮಾಜಿ ವೇಗಿ ಶಾನ್ ಪೊಲ್ಲಾಕ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೀಷ್ ಖಾಸಗಿ ಕ್ರೀಡಾ ಚಾನಲ್ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ವಿಂಡೀಸ್ ಮಾಜಿ ವೇಗಿ ಮೈಕಲ್ ಹೋಲ್ಡಿಂಗ್ಸ್ ಹಾಗೂ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಜೊತೆ ಪಾಲ್ಗೊಂಡು ಮಾತನಾಡಿದ ಪೊಲ್ಲಾಕ್, ನನಗೆ ಅನಿಸುತ್ತೆ ಜಾವಗಲ್ ಶ್ರೀನಾಥ್ ಪ್ರತಿಭೆಗೆ ತಕ್ಕ ಗೌರವ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಶ್ರೀನಾಥ್ 1991 ರಿಂದ 2003ರವರೆಗೆ ಟೀಂ ಇಂಡಿಯಾ ವೇಗದ ಬೌಲಿಂಗ್ ಸಾರಥ್ಯ ವಹಿಸಿದ್ದರು. ಈ ಅವಧಿಯಲ್ಲಿ ಶ್ರೀನಾಥ್ 67 ಟೆಸ್ಟ್ ಹಾಗೂ 229 ಏಕದಿನ ಪಂದ್ಯಗಳನ್ನಾಡಿ ಕ್ರಮವಾಗಿ 236 ಹಾಗೂ 315 ವಿಕೆಟ್ ಕಬಳಿಸಿದ್ದಾರೆ.   

ಇನ್ನೆರಡು ವಾರ ಮನೆಯಲ್ಲಿರೋಣ, ರಾಜ್ಯದ ಜನತೆಗೆ ಜಾವಗಲ್ ಶ್ರೀನಾಥ್ ಮನವಿ

ನನ್ನ ತಲೆಮಾರಿನಲ್ಲಿ ಪಾಕಿಸ್ತಾನ ಪರ ದಿಗ್ಗಜ ಜೋಡಿಗಳಾದ ವಾಸೀಂ ಅಕ್ರಂ-ವಕಾರ್ ಯೂನಿಸ್, ವಿಂಡೀಸ್ ಪರ ಕರ್ಟ್ನಿ ಆಂಬ್ರೋಸ್-ಕರ್ಟ್ನಿ ವಾಲ್ಷ್,  ಆಸೀಸ್ ಪರ ಗ್ಲೆನ್ ಮೆಗ್ರಾಥ್-ಬ್ರೆಟ್ ಲೀ ಅವರನ್ನು ಕಂಡಿದ್ದೇವೆ. ಇದೀಗ ಜೇಮ್ಸ್ ಆಂಡರ್‌ಸನ್-ಸ್ಟುವರ್ಟ್ ಬ್ರಾಡ್ ಜೋಡಿ ಮಿಂಚುತ್ತಿದೆ ಎಂದು ಆಫ್ರಿಕಾ ವೇಗಿ ಹೇಳಿದ್ದಾರೆ. 

ಪೊಲ್ಲಾಕ್ 108  ಟೆಸ್ಟ್ ಪಂದ್ಯಗಳನ್ನಾಡಿ 400ಕ್ಕೂ ಅಧಿಕ ವಿಕೆಟ್ ಹಾಗೂ 3,700ಕ್ಕೂ ಅಧಿಕ ರನ್ ಬಾರಿಸಿದ್ದಾರೆ. 2008ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಪೊಲ್ಲಾಕ್ ಗುಡ್‌ಬೈ ಹೇಳಿದ್ದರು. ಈ ವೇಳೆ ಹರಿಣಗಳ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ದಾಖಲೆ ಹೊಂದಿದ್ದರು. ಕಳೆದ ವರ್ಷವಷ್ಟೇ ಡೇಲ್ ಸ್ಟೇನ್, ಪೊಲ್ಲಾಕ್ ದಾಖಲೆಯನ್ನು ಅಳಿಸಿ ಹಾಕಿದ್ದರು.