ಫೈನಲ್ ಪಂದ್ಯಕ್ಕೂ ಮೊದಲೇ ಭಾವುಕರಾಗಿದ್ದ ಧೋನಿ, ಡಗೌಟ್‌ನಲ್ಲಿ ಕುಳಿತು ಸುಧಾರಿಸಿಕೊಂಡ MSD!
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ ಫೈನಲ್ ಪಂದ್ಯಕ್ಕಾಗಿ ಅಹಮ್ಮದಾಬಾದ್ ಕ್ರೀಡಾಂಗಣ ಪ್ರವೇಶಿಸುತ್ತಿದ್ದಂತೆ ಧೋನಿ ಭಾವುಕರಾಗಿದ್ದಾರೆ. ಕಣ್ಣುಗಳು ಒದ್ದೆಯಾಗಿತ್ತು. ತಕ್ಷಣವೇ ಡಗೌಟ್‌ಗೆ ಮರಳಿ ಸುಧಾರಿಸಿಕೊಳ್ಳಲು ಕೆಲ ಸಮಯ ತೆಗೆದುಕೊಂಡ ಘಟನೆ ನಡೆದಿದೆ. ಇದನ್ನು ಖುದ್ದ ಧೋನಿ ಬಹಿರಂಗ ಪಡಿಸಿದ್ದಾರೆ.
ಅಹಮ್ಮದಾಬಾದ್(ಮೇ.30): ಐಪಿಎಲ್ 2023 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ. ನಾಯಕ ಎಂ.ಎಸ್ ಧೋನಿಯ ಕೊನೆಯ ಐಪಿಎಲ್ ಟೂರ್ನಿ ಎಂದೇ ಬಿಂಬಿತವಾಗಿದ್ದ ಈ ಟೂರ್ನಿಯಲ್ಲಿ ಸಿಎಸ್‌ಕೆ ಟ್ರೋಫಿ ಗೆಲುವು ಕೋಟ್ಯಾಂತರ ಅಭಿಮಾನಿಗಳನ್ನು ಭಾವುಕರನ್ನಾಗಿ ಮಾಡಿದೆ. ಗೆಲುವು, ಸೋಲು, ಸ್ಲೆಡ್ಜಿಂಗ್ ಪರಿಸ್ಥಿತಿ ಯಾವುದೇ ಇದ್ದರೂ ಧೋನಿ ಮುಖದಲ್ಲಿನ ಹಾವಭಾವ ಬದಲಾಗುವುದಿಲ್ಲ. ಎಲ್ಲವನ್ನೂ ಅಷ್ಟೇ ತಾಳ್ಮೆಯಿಂದ, ಅಷ್ಟೇ ಜಾಣ್ಮೆಯಿಂದ ನಿಭಾಯಿಸುವ ಕಲೆ ಧೋನಿಗೆ ಬಿಟ್ಟು ಇನ್ಯಾರಿಗೂ ಸಾಧ್ಯವಿಲ್ಲ. ಆದರೆ ಈ ಬಾರಿ ಧೋನಿ ಕೂಡ ಭಾವುಕರಾಗಿದ್ದಾರೆ. ಧೋನಿ ಕಣ್ಣಾಲಿಗಳು ತುಂಬಿ ಬಂದಿತ್ತು. ಸುಧಾರಿಸಿಕೊಳ್ಳಲು ಧೋನಿ ಡಗೌಟ್‌ನಲ್ಲಿ ಕೆಲ ಹೊತ್ತು ಮೌನವಾಗಿ ಕುಳಿತಿದ್ದರು. ಈ ಭಾವುಕ ಕ್ಷಣವನ್ನು ಸ್ವತಃ ಧೋನಿಯೇ ಬಹಿರಂಗಪಡಿಸಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿ ಟ್ರೋಫಿ ಕೈವಶ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸಂಭ್ರಮ ಆಚರಿಸಿತ್ತು. ಗೆಲುವಿನ ಬಳಿಕ ಮಾತನಾಡಿದ ಧೋನಿ, ಯಾವುದೇ ಕ್ರೀಡಾಂಗಣಕ್ಕೆ ತೆರಳಿದರೂ ಧೋನಿ ಧೋನಿ ಅನ್ನೋ ಘೋಷಣೆಗಳು ಕೇಳುತ್ತಿತ್ತು. ಇಂದು ಫೈನಲ್ ಪಂದ್ಯಕ್ಕಾಗಿ ಮೈದಾನಕ್ಕಿಳಿದಾಗ ಕ್ರೀಡಾಂಗಣ ಸುತ್ತ ಅಭಿಮಾನಿಗಳು ಜಯಘೋಷ ಮೊಳಗಿಸುತ್ತಿದ್ದರು. ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ಹೇಳಿದ್ದೆ. ಆದರೆ ಅಭಿಮಾನಿಗಳ ಪ್ರೀತಿ ನೋಡಿ ಕಣ್ಣಾಲಿ ತುಂಬಿ ಬಂತು. ಕಣ್ಣೀರು ಜಿನುಗಿತ್ತು. ಕಣ್ಣಾಲಿ ಒದ್ದೆಯಾಗಿರುವುದು ಇತರರಿಗೆ ಗೊತ್ತಾಗುವುದು ಬೇಡ ಎಂದು, ತಕ್ಷಣವೇ ಡಗೌಟ್‌ಗೆ ಬಂದು ಕುಳಿತುಕೊಂಡೆ. ಸುಧಾರಿಸಿಕೊಳ್ಳಲು ಕೆಲ ಹೊತ್ತು ತೆಗೆದುಕೊಂಡೆ. ಬಳಿಕ ನಾನು ಈ ಪಂದ್ಯವನ್ನು ಆನಂದಿಸಬೇಕು. ಒತ್ತಡ ತೆಗೆದುಕೊಳ್ಳದೇ ಆಡಬೇಕು. ಭಾವುಕರಾಗುವುದು ಸೂಕ್ತವಲ್ಲ ಎಂದು ಸಮಾಧಾನಿಸಿಕೊಂಡು ಮತ್ತೆ ಮೈದಾನಕ್ಕಿಳಿದೆ. ಆದರೆ ಸುಧಾರಿಸಿಕೊಳ್ಳಲು ಕೆಲ ಹೊತ್ತು ಬೇಕಾಯಿತು ಎಂದು ಧೋನಿ ಹೇಳಿದ್ದಾರೆ.
'ಮಹಿ ಬಾಯ್, ನಿಮಗಾಗಿ ಏನು ಬೇಕಾದರೂ ಮಾಡ್ತೇನೆ': ಕಪ್ ಗೆಲ್ಲಿಸಿದ ಜಡ್ಡು ಟ್ವೀಟ್ ವೈರಲ್..!
ಇದೇ ವೇಳೆ ಜನರ ಪ್ರೀತಿಗಾಗಿ ಮಹತ್ವದ ಘೋಷಣೆಯನ್ನು ಮಾಡಿದರು. ಜನರ ಪ್ರೀತಿಗೆ ನಾನು ಏನಾದರೂ ಗಿಫ್ಟ್ ನೀಡಬೇಕು. ನಾನು ಸುಲಭವಾಗಿ ವಿದಾಯ ಹೇಳಿಬಿಡಬಹುದು. ಅಭಿಮಾನಿಗಳು ತೋರಿದ ಪ್ರೀತಿಗೆ ಅವರಿಗೆ ನನ್ನ ಉಡುಗೊರೆ ಇದು. ಮುಂದಿನ ಆವೃತ್ತಿ ಆಡುತ್ತೇನೆ. ಆದರೆ ನನ್ನ ಫಿಟ್ನೆಸ್ ನೋಡಿಕೊಂಡು ಮುಂದಿನ 6 ರಿಂದ 7 ತಿಂಗಳಲ್ಲಿ ನಿರ್ಧರಿಸುತ್ತೇನೆ ಎಂದು ಧೋನಿ ಘೋಷಿಸಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಾವುದೇ ಮೈದಾನದಲ್ಲಿ ಆಡಿದರೂ ಧೋನಿ ಅಭಿಮಾನಿಗಳೇ ತುಂಬಿಕೊಂಡಿದ್ದರು. ಯಾವುದೇ ತಂಡದ ತವರಿನ ಪಂದ್ಯವಾಗಿದ್ದರೂ ಧೋನಿ, ಧೋನಿ ಜಯಘೋಷಣೆಗಳೇ ಜೋರಾಗಿತ್ತು. ಕಾರಣ ಧೋನಿ ಈ ಬಾರಿಯ ಐಪಿಎಲ್ ಟೂರ್ನಿ ಬಳಿಕ ವಿದಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಜೋರಾಗಿತ್ತು. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲೂ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಗಿಂತ ಹೆಚ್ಚು ಧೋನಿ ಧೋನಿ ಘೋಷಣೆ ಕೇಳುತ್ತಿತ್ತು. ಆರ್‌ಸಿಬಿ ಜರ್ಸಿ ಜೊತೆಗೆ ಸಿಎಸ್‌ಕೆ ಜರ್ಸಿ ಕೂಡ ಮಿಂಚಿತ್ತು.
ಮೈದಾನದಲ್ಲೇ ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ, ಶಾಸಕಿ ರಿವಾಬಾ ಜಡೇಜಾ!
ಗೆಲುವಿನ ಬಳಿಕ ಆಡಿದ ಒಂದೊಂದು ಮಾತುಗಳು ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿತ್ತು. ಧೋನಿಗಾಗಿ ಮಳೆ, ಗುಡುಗು ಸಿಡಿಲು, ನಿದ್ದೆ ಇಲ್ಲದೆ ಅಭಿಮಾನಿಗಳು ಕಾದುಕುಳಿತಿದ್ದರು. ಕೊನೆಗೂ ಧೋನಿ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ.