* ರಣಜಿ ಟ್ರೋಫಿ ಕ್ರಿಕೆಟ್ ಇತಿಹಾಸದಲ್ಲೇ ದಾಖಲೆಯ ಗೆಲುವು ಸಾಧಿಸಿದ ಮುಂಬೈ* ಜಾರ್ಖಂಡ್ ಎದುರು ದಾಖಲೆಯ 725 ರನ್‌ಗಳ ಅಂತರದ ಗೆಲುವು ಸಾಧಿಸಿದ ಮುಂಬೈ* 92 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿದ ಮುಂಬೈ ರಣಜಿ ಕ್ರಿಕೆಟ್ ತಂಡ
ಬೆಂಗಳೂರು(ಜೂ.10): ದಾಖಲೆಯ 41 ಬಾರಿ ಚಾಂಪಿಯನ್ ಮುಂಬೈ 2022ರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ (Ranji Trophy Cricket Tournament) ವಿಶ್ವ ದಾಖಲೆಯ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಗುರುವಾರ ಮುಕ್ತಾಯಗೊಂಡ ಕ್ವಾರ್ಟರ್‌ಫೈನಲ್‌ನಲ್ಲಿ ಮುಂಬೈ, ಉತ್ತರಾಖಂಡ ವಿರುದ್ಧ ಬರೋಬ್ಬರಿ 725 ರನ್ ಅಂತರದಲ್ಲಿ ಗೆಲುವು ಸಾಧಿಸಿತು. ಈ ಗೆಲುವು ಪ್ರಥಮ ದರ್ಜೆ ಇತಿಹಾಸದಲ್ಲೇ ರನ್ ಅಂತರದ ಅತೀ ದೊಡ್ಡ ಗೆಲುವು.
ಇದಕ್ಕೂ ಮೊದಲು 1930ರಲ್ಲಿ ಆಸ್ಪ್ರೇಲಿಯಾದ ದೇಸಿ ಕ್ರಿಕೆಟ್‌ನಲ್ಲಿ ಕ್ವೀನ್ಸ್‌ಲ್ಯಾಂಡ್ ತಂಡವನ್ನು ನ್ಯೂ ಸೌತ್ ವೇಲ್ಸ್ 685 ರನ್‌ಗಳಿಂದ ಮಣಿಸಿತ್ತು. ಇದೀಗ ಬರೋಬ್ಬರಿ 92 ವರ್ಷಗಳಿಂದ ಜೋಪಾನವಾಗಿದ್ದ ದಾಖಲೆಯನ್ನು ಧೂಳೀಪಟ ಮಾಡುವಲ್ಲಿ ಮುಂಬೈ ರಣಜಿ ಕ್ರಿಕೆಟ್ ತಂಡವು ಯಶಸ್ವಿಯಾಗಿದೆ. ರಣಜಿ ಕ್ರಿಕೆಟ್‌ನಲ್ಲಿ 1953-54ರಲ್ಲಿ ಒಡಿಶಾ ವಿರುದ್ಧ 540 ರನ್‌ಗಳಿಂದ ಬೆಂಗಾಲ್ ತಂಡ ಗೆಲುವು ಸಾಧಿಸಿದ್ದು ಈವರೆಗಿನ ದಾಖಲೆಯಾಗಿತ್ತು.
ಮುಂಬೈ (Mumbai Cricket Team) 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 261 ರನ್ ಕಲೆ ಹಾಕಿ ಡಿಕ್ಲೇರ್ ಮಾಡಿ ಉತ್ತರಾಖಂಡಕ್ಕೆ 794 ರನ್‌ಗಳ ಬೃಹತ್ ಗುರಿ ನೀಡಿತು. ದೊಡ್ಡ ಗುರಿ ನೋಡಿಯೇ ಕಂಗಾಲಾದ ಉತ್ತರಾಖಂಡಕ್ಕೆ ಯಾವ ಕ್ಷಣದಲ್ಲೂ ಮುಂಬೈಗೆ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ಮುಂಬೈ ಮಾರಕ ದಾಳಿಗೆ ತತ್ತರಿಸಿದ ತಂಡ 27.5 ಓವರ್‌ಗಳಲ್ಲಿ ಕೇವಲ 69 ರನ್‌ಗೆ ಗಂಟುಮೂಟೆ ಕಟ್ಟಿತು. ಶಿವಂ ಖುರಾನ(26), ಕುನಾಲ್ ಚಂಡೇಲ(21) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಐವರು ಬ್ಯಾಟರ್‌ಗಳು ಶೂನ್ಯ ಸುತ್ತಿದರು. ಕುಲ್ಕರ್ಣಿ, ಮುಲಾನಿ, ತನುಶ್ ಕೋಟ್ಯಾನ್ ತಲಾ 3 ವಿಕೆಟ್ ಕಬಳಿಸಿದರು. ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 647 ರನ್ ಕಲೆ ಹಾಕಿದ್ದ ಮುಂಬೈ, ಉತ್ತರಾಖಂಡವನ್ನು 114ಕ್ಕೆ ನಿಯಂತ್ರಿಸಿ 533 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು.
ಮಧ್ಯಪ್ರದೇಶಕ್ಕೆ 10 ವಿಕೆಟ್ ಜಯ
ಬೆಂಗಳೂರು: ಪಂಜಾಬ್ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಮಧ್ಯಪ್ರದೇಶ 10 ವಿಕೆಟ್ ಗೆಲುವು ಸಾಧಿಸಿದೆ. ಕೇವಲ 25 ರನ್ ಗುರಿ ಪಡೆದಿದ್ದ ಮಧ್ಯಪ್ರದೇಶ ವಿಕೆಟ್ ನಷ್ಟವಿಲ್ಲದೇ ಜಯಗಳಿಸಿತು. 2ನೇ ಇನ್ನಿಂಗ್‌್ಸನಲ್ಲಿ 3ನೇ ದಿನ 5 ವಿಕೆಟ್ ಕಳೆದುಕೊಂಡು 120 ರನ್ ಕಲೆ ಹಾಕಿದ್ದ ಪಂಜಾಬ್ ಗುರುವಾರ 203 ರನ್‌ಗೆ ಆಲೌಟಾಯಿತು. ಅನ್ಮೋಲ್ ಮಲ್ಹೋತ್ರಾ 34, ಮಾರ್ಖಂಡೆ 33 ರನ್ ಗಳಿಸಿದರು. ಕುಮಾರ್ ಕಾರ್ತಿಕೇಯ 6, ಶರನ್‌್ಶ ಜೈನ್ 4 ವಿಕೆಟ್ ಕಬಳಿಸಿದರು. ಇದಕ್ಕೂ ಮೊದಲು ಪಂಜಾಬನ್ನು ಮೊದಲ ಇನ್ನಿಂಗ್‌್ಸನಲ್ಲಿ 219ಕ್ಕೆ ನಿಯಂತ್ರಿಸಿದ್ದ ಮಧ್ಯಪ್ರದೇಶ 397 ರನ್ ಕಲೆ ಹಾಕಿ 178 ರನ್‌ಗಳ ದೊಡ್ಡ ಮುನ್ನಡೆ ಪಡೆದಿತ್ತು. ಶುಭಂ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸೆಮೀಸ್‌ನಲ್ಲಿ ತಂಡ ಬೆಂಗಾಲ್ ಅಥವಾ ಜಾರ್ಖಂಡ್ ವಿರುದ್ಧ ಸೆಣಸಾಡಲಿದೆ.
ಜಾರ್ಖಂಡ್ ವಿರುದ್ಧ ಬೆಂಗಾಲ್ ಗೆಲುವಿನತ್ತ
ಬೆಂಗಳೂರು: ಜಾರ್ಖಂಡ್ ವಿರುದ್ಧದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಗೆಲುವಿನ ಸನಿಹ ತಲುಪಿದೆ. ಬೆಂಗಾಲ್ ಗಳಿಸಿದ್ದ 773 ರನ್‌ಗೆ ಉತ್ತರವಾಗಿ ಬುಧವಾರ 3ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 139 ರನ್ ಗಳಿಸಿದ್ದ ಜಾರ್ಖಂಡ್ ಗುರುವಾರ 298ಕ್ಕೆ ಆಲೌಟ್‌ಕ್ಕೆ ಆಲೌಟ್ ಆಯಿತು. ವಿರಾಟ್ ಸಿಂಗ್ 113 ರನ್ ಸಿಡಿಸಿದರು. ಶಯಾನ್ ಮೊಂಡಲ್ ಹಾಗೂ ಶಾಬಾಜ್ ಅಹ್ಮದ್ ತಲಾ 4 ವಿಕೆಟ್ ಕಿತ್ತರು.
Ranaji Trophy : ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ ಕರ್ನಾಟಕ
475 ರನ್‌ಗಳ ದೊಡ್ಡ ಮುನ್ನಡೆ ಪಡೆದರೂ ಫಾಲೋಆನ್ ಹೇರದೆ 2ನೇ ಇನ್ನಿಂಗ್‌್ಸ ಆರಂಭಿಸಿದ ಬೆಂಗಾಲ್ 4ನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿದ್ದು, ಒಟ್ಟು 551 ಮುನ್ನಡೆ ಪಡೆದಿದೆ. ಕೊನೆ ದಿನವಾದ ಶುಕ್ರವಾರ ಬೇಗನೇ ಡಿಕ್ಲೇರ್ ಮಾಡಿ ಜಾರ್ಖಂಡನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ಬೆಂಗಾಲ್ ಎದುರು ನೋಡುತ್ತಿದೆ.
