Suryakumar Yadav: ಐಪಿಎಲ್‌ನಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್ ಸ್ಟಾರ್ ಕ್ರಿಕೆಟಿಗ..!
* ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್
* ಇನ್ನುಳಿದ ಐಪಿಎಲ್ ಪಂದ್ಯಗಳಿಂದ ಹೊರಬಿದ್ದ ಸೂರ್ಯಕುಮಾರ್ ಯಾದವ್
* ಎಡಗೈ ಗಾಯಕ್ಕೆ ತುತ್ತಾಗಿರುವ ಬ್ಯಾಟರ್ ಸೂರ್ಯಕುಮಾರ್ ಯಾದವ್
ಮುಂಬೈ(ಮೇ.10): 5 ಬಾರಿಯ ಐಪಿಎಲ್ (IPL 2022) ಚಾಂಪಿಯನ್ ಮುಂಬೈ ಇಂಡಿಯನ್ಸ್ (5 time IPL Champion Mumbai Indians) ತಂಡದ ಪಾಲಿಗೆ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ದುಸ್ವಪ್ನವಾಗಿ ಕಾಡಲಾರಂಭಿಸಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡದ ಪರಿಸ್ಥಿತಿ ಇದೀಗ ಬೆಂಕಿಯಿಂದ ಬಾಣಲೆಗೆ ಬಿದ್ದಂತೆ ಆಗಿದೆ. ಮುಂಬೈ ಇಂಡಿಯನ್ಸ್ ತಂಡದ ಅತ್ಯಂತ ನಂಬಿಗಸ್ಥ ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav) ಗಾಯದ ಸಮಸ್ಯೆಯಿಂದಾಗಿ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಹೌದು, ಎಡಗೈ ಗಾಯಕ್ಕೆ ತುತ್ತಾಗಿರುವ ಮುಂಬೈ ಇಂಡಿಯನ್ಸ್‌ನ ತಾರಾ ಬ್ಯಾಟರ್ ಸೂರ್ಯಕುಮಾರ್ ಯಾದವ್ 15ನೇ ಆವೃತ್ತಿ ಐಪಿಎಲ್‌ನಿಂದ ಹೊರ ಬಿದ್ದಿದ್ದಾರೆ. ‘ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದರಿಂದ ಅವರು ಟೂರ್ನಿಯ ಉಳಿದ ಪಂದ್ಯಗಳಿಗೆ ಲಭ್ಯರಿಲ್ಲ. ಬಿಸಿಸಿಐ ವೈದ್ಯಕೀಯ ತಂಡ ಅವರ ಮೇಲೆ ನಿಗಾ ಇರಿಸಿದೆ’ ಎಂದು ತಂಡ ಪ್ರಕಟಣೆಯಲ್ಲಿ ತಿಳಿಸಿದೆ.
ಐಪಿಎಲ್‌ಗೂ ಮುನ್ನ ವೆಸ್ಟ್‌ಇಂಡೀಸ್ ಸರಣಿಯಲ್ಲಿ ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದ ಅವರು ಐಪಿಎಲ್ ಟೂರ್ನಿಯ ಆರಂಭಿಕ 2 ಪಂದ್ಯಗಳಿಂದ ಹೊರಗುಳಿದಿದ್ದರು. ಬಳಿಕ ಅವರು 8 ಪಂದ್ಯಗಳಲ್ಲಿ 43.29ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಅರ್ಧಶತಕ ಸಹಿತ 303 ರನ್ ಸಿಡಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ಪರ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಕಳೆದ ಕೆಲ ವರ್ಷಗಳಿಂದ ಸೂರ್ಯಕುಮಾರ್ ಯಾದವ್, ಮುಂಬೈ ಇಂಡಿಯನ್ಸ್ ಪರ 145.67ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಈಗಾಗಲೇ 11 ಪಂದ್ಯಗಳನ್ನಾಡಿ ಕೇವಲ 2 ಗೆಲುವು ಹಾಗೂ 9 ಸೋಲು ಕಾಣುವ ಮೂಲಕ ಪ್ಲೇ ಆಫ್‌ಗೇರುವ ಅವಕಾಶವನ್ನು ಕೈಚೆಲ್ಲಿರುವ ಮುಂಬೈ ಇಂಡಿಯನ್ಸ್ ತಂಡವು ಇನ್ನುಳಿದ ಮೂರು ಪಂದ್ಯಗಳನ್ನು ಗೆದ್ದು ಅಭಿಮಾನಿಗಳನ್ನು ಖುಷಿ ಪಡಿಸುವ ಲೆಕ್ಕಾಚಾರದಲ್ಲಿದೆ.
ಮುಂಬೈ ಇಂಡಿಯನ್ಸ್‌ಗೆ 9ನೇ ಸೋಲು
ನವಿ ಮುಂಬೈ: ದಾಖಲೆಯ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆವೃತ್ತಿಯೊಂದರಲ್ಲಿ 9 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಬಾರಿ ಆರಂಭಿಕ 8 ಪಂದ್ಯಗಳಲ್ಲಿ ಸೋತು ಬಳಿಕ 2 ಪಂದ್ಯ ಗೆದ್ದಿದ್ದ ತಂಡ ಸೋಮವಾರ ಕೋಲ್ಕತಾ ವಿರುದ್ಧ 52 ರನ್‌ಗಳಿಂದ ಪರಾಭವಗೊಂಡಿತು. ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿರುವ ಮುಂಬೈ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಉಳಿದರೆ, ಕೋಲ್ಕತಾ 5ನೇ ಗೆಲುವಿನೊಂದಿಗೆ 7ನೇ ಸ್ಥಾನಕ್ಕೇರಿತು. ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದರೂ ಪ್ಲೇ-ಆಫ್‌ಗೆ ಪ್ರವೇಶಿಸುವುದು ಅನುಮಾನ.
ಕೋವಿಡ್: ತನಿಖೆಗೆ ಮುಂದಾದ ಬಿಸಿಸಿಐ
ಮುಂಬೈ: ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪದೇ ಪದೇ ಕೋವಿಡ್ ಪತ್ತೆಯಾಗುತ್ತಿರುವುದರಿಂದ ಅಸಮಾಧಾನಗೊಂಡಿರುವ ಬಿಸಿಸಿಐ, ಲೋಪ ಪತ್ತೆ ಹಚ್ಚಲು ತನಿಖೆಗೆ ಮುಂದಾಗಿದೆ ಎಂದು ವರದಿಯಾಗಿದೆ. ಕಳೆದ ತಿಂಗಳು ಇಬ್ಬರು ಆಟಗಾರರು ಸೇರಿದಂತೆ ತಂಡದ ಹಲವರಲ್ಲಿ ಸೋಂಕು ಕಾಣಿಸಿತ್ತು. ಬಳಿಕ ಎಲ್ಲಾ ಆಟಗಾರರು ಐಸೋಲೇಷನ್‌ಗೆ ಒಳಗಾಗಿದ್ದರು.
KKR vs MI: 10 ರನ್‌ಗೆ 5 ವಿಕೆಟ್ ಕಿತ್ತ ವೇಗಿ ಜಸ್ಪ್ರೀತ್ ಬುಮ್ರಾ, ಅಪರೂಪದ ದಾಖಲೆ ಜಸ್ಟ್ ಮಿಸ್
ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೆಟ್ ಬೌಲರ್‌ಗೆ ಸೋಂಕು ಕಾಣಿಸಿಕೊಂಡಿದ್ದರಿಂದ ತಂಡವನ್ನು ಕೆಲ ಕಾಲ ಐಸೋಲೇಷನ್‌ನಲ್ಲಿ ಇರಿಸಲಾಗಿತ್ತು. ಬಯೋಬಬಲ್‌ನಲ್ಲಿದ್ದರೂ ತಂಡದ ಆಟಗಾರರು, ಹೋಟೆಲ್ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದ್ದು, ಇದರಿಂದ ಐಪಿಎಲ್ ಬ್ರ್ಯಾಂಡ್‌ಗೆ ಧಕ್ಕೆಯಾಗಲಿದೆ ಎಂಬ ಆತಂಕದಿಂದ ತನಿಖೆ ನಡೆಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.