Asianet Suvarna News Asianet Suvarna News

Multan Test ಇಂಗ್ಲೆಂಡ್‌ ಎದುರು ರೋಚಕ ಸೋಲುಂಡ ಪಾಕ್‌, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ರೇಸ್‌ನಿಂದ ಔಟ್..!

ಇಂಗ್ಲೆಂಡ್ ಎದುರು ಮುಲ್ತಾನ್ ಟೆಸ್ಟ್ ಪಂದ್ಯದಲ್ಲೂ ಸೋಲುಂಡ ಪಾಕಿಸ್ತಾನ
ಇಂಗ್ಲೆಂಡ್ ವಿರುದ್ದ 26 ರನ್‌ಗಳ ರೋಚಕ ಸೋಲು ಕಂಡ ಬಾಬರ್ ಅಜಂ ಪಡೆ
ಈ ಸೋಲಿನೊಂದಿಗೆ ಪಾಕ್ ತಂಡದ ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಕನಸು ಭಗ್ನ

Multan Test Pakistan out of World Test Championship 2023 final race Team India hope Alive kvn
Author
First Published Dec 12, 2022, 3:58 PM IST

ಮುಲ್ತಾನ್‌(ಡಿ.12): ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್‌ ತಂಡವು 26 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂರು ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಇಂಗ್ಲೆಂಡ್ ತಂಡವು 2-0 ಅಂತರದಲ್ಲಿ ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸೋಲಿನೊಂದಿಗೆ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಪಾಕಿಸ್ತಾನದ ಕನಸು ನುಚ್ಚುನೂರಾಗಿದ್ದು, ಈ ಫಲಿತಾಂಶ ಟೀಂ ಇಂಡಿಯಾ ಪಾಲಿಗೆ ಆನೆ ಬಲ ಬಂದಂತೆ ಆಗಿದೆ.

ಹೌದು, ಇಲ್ಲಿನ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 355 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡಕ್ಕೆ ಸೌದ್ ಶಕೀಲ್(94), ಇಮಾಮ್ ಉಲ್ ಹಕ್(60) ಆಕರ್ಷಕ ಅರ್ಧಶತಕ ಹಾಗೂ ಮೊಹಮ್ಮದ್ ನವಾಜ್(45) ಸಮಯೋಚಿತ ಬ್ಯಾಟಿಂಗ್ ಮೂಲಕ ಆಸರೆಯಾದರಾದರೂ, ಕೊನೆಯಲ್ಲಿ ಮಾರ್ಕ್‌ ವುಡ್‌ ಹಾಗೂ ಜೇಮ್ಸ್ ಆಂಡರ್‌ಸನ್‌ ಮಾರಕ ದಾಳಿ ನಡೆಸುವ ಮೂಲಕ ಪಾಕಿಸ್ತಾನ ತಂಡವನ್ನು 328 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಪಾಕಿಸ್ತಾನ ತಂಡವು 1959ರ ಬಳಿಕ ಇದೇ ಮೊದಲ ಬಾರಿಗೆ ತವರಿನಲ್ಲಿ ಸತತ 3 ಟೆಸ್ಟ್ ಪಂದ್ಯಗಳನ್ನು ಸೋತು ಮುಖಭಂಗ ಅನುಭವಿಸಿತು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಪಾಕ್ ಕನಸು ಭಗ್ನ: ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಆಘಾತಕಾರಿ ಸೋಲು ಕಾಣುವ ಮೂಲಕ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಾರಿದೆ. ಪಾಕಿಸ್ತಾನ ತಂಡವು 2022ರಲ್ಲಿಯೇ ಮೂರನೇ ಟೆಸ್ಟ್ ಸರಣಿ ಸೋಲು ಅನುಭವಿಸಿದೆ. ಹೀಗಾಗಿ ಪಾಕಿಸ್ತಾನ ತಂಡವು 42.42% ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಜಾರಿದರೆ, ಈ ಸರಣಿ ಗೆಲುವಿನೊಂದಿಗೆ ಇಂಗ್ಲೆಂಡ್‌ ತಂಡವು 44.44% ಸಹಿತ ಐದನೇ ಸ್ಥಾನಕ್ಕೇರಿದೆ. ಆದರೆ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಈ ಎರಡೂ ತಂಡಗಳು ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರುವ ಅವಕಾಶವನ್ನು ಕೈಚೆಲ್ಲಿವೆ.

ಇನ್ನು ಪಾಕಿಸ್ತಾನ ತಂಡದ ಈ ಸೋಲಿನಿಂದಾಗಿ ಟೀಂ ಇಂಡಿಯಾದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಅವಕಾಶ ಮತ್ತಷ್ಟು ಹೆಚ್ಚಾಗಿದೆ. ಸದ್ಯ ಟೀಂ ಇಂಡಿಯಾ 52.08% ನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, ಅಗ್ರ 2 ಸ್ಥಾನ ಪಡೆಯುವ ಕನಸಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ. ಸದ್ಯ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಭಾರತ ತಂಡಗಳ ಪೈಕಿ ಎರಡು ತಂಡಗಳು ಎರಡನೇ ಆವೃತ್ತಿಯ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ಭಾರತ ಬಾಂಗ್ಲಾದೇಶ ಟೆಸ್ಟ್ ಸರಣಿ, ಇಂಜುರಿಯಿಂದ ತಂಡದಲ್ಲಿ ಮಹತ್ವದ ಬದಲಾವಣೆ!

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿಯ ಪ್ರಕಾರ ಇನ್ನೂ 6 ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಈ ಪೈಕಿ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, ಎಲ್ಲಾ ತಂಡಗಳನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಭಾರತ ತಂಡವು ಬಾಂಗ್ಲಾದೇಶ ವಿರುದ್ದ 2-0 ಹಾಗೂ ಆಸ್ಟ್ರೇಲಿಯಾ ವಿರುದ್ದ 4-0 ಅಥವಾ 3-1 ಅಥವಾ 3-0 ಅಂತರದಲ್ಲಿ ಗೆಲುವು ಸಾಧಿಸಿದರೂ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಆಡುವ ಅರ್ಹತೆಗಿಟ್ಟಿಸಿಕೊಳ್ಳಲಿದೆ.

ಭಾರತ ತಂಡವು ಸದ್ಯ ಬಾಂಗ್ಲಾದೇಶ ಪ್ರವಾಸದಲ್ಲಿದ್ದು, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಇದಾದ ಬಳಿಕ ತವರಿನಲ್ಲಿ ಮುಂಬರುವ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳಾವಧಿಯಲ್ಲಿ ಆಸ್ಟ್ರೇಲಿಯಾ ಎದುರು 4 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಆಸ್ಟ್ರೇಲಿಯಾ ಎದುರು ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನು ಸೋಲದೇ ಹೋದರೆ ಸತತ ಎರಡನೇ ಬಾರಿಗೆ ಟೀಂ ಇಂಡಿಯಾ, ಟೆಸ್ಟ್ ವಿಶ್ವಕಪ್ ಫೈನಲ್‌ಗೇರಿದ ಸಾಧನೆ ಮಾಡಲಿದೆ.

Follow Us:
Download App:
  • android
  • ios