ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ತಾಯಿಯ ನಿಧನದ ದುಃಖದ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಮುಕೇಶ್ ಚೌಧರಿ ಕಣಕ್ಕಿಳಿದಿದ್ದರು. ಕ್ವಿಂಟನ್ ಡಿ ಕಾಕ್ ವಿಕೆಟ್ ಪಡೆದ ನಂತರ ಸಂಭ್ರಮಿಸದೆ, ಆಕಾಶದತ್ತ ಬೆರಳು ತೋರಿಸಿ ತಮ್ಮ ತಾಯಿಗೆ ಆ ವಿಕೆಟನ್ನು ಅರ್ಪಿಸಿದರು.
ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 103 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಐತಿಹಾಸಿಕ ಗೆಲುವಿನ ಜೊತೆಗೆ, ಕ್ರಿಕೆಟ್ ಜಗತ್ತು ವೇಗಿ ಮುಕೇಶ್ ಚೌಧರಿ ಅವರ ಸಮರ್ಪಣಾ ಮನೋಭಾವದ ಬಗ್ಗೆ ಚರ್ಚೆ ನಡೆಯುತ್ತಿದೆ. ಪಂದ್ಯದಲ್ಲಿ ಮುಂಬೈ ಓಪನರ್ ಕ್ವಿಂಟನ್ ಡಿ ಕಾಕ್ ಅವರನ್ನು ಬೌಲ್ಡ್ ಮಾಡಿದ ನಂತರ ಮುಕೇಶ್ ಯಾವುದೇ ಸಂಭ್ರಮಾಚರಣೆ ಮಾಡಲಿಲ್ಲ. ಬದಲಿಗೆ, ನಡುಗುವ ಬೆರಳುಗಳನ್ನು ಆಕಾಶದತ್ತ ತೋರಿಸಿ, 'ಅಮ್ಮಾ, ಇದು ನಿನಗಾಗಿ' ಎಂದು ಮೌನವಾಗಿ ಹೇಳಿದಾಗ ನೋಡಿದವರ ಕಣ್ಣುಗಳು ತೇವವಾದವು. ವೈಯಕ್ತಿಕ ದುಃಖದ ನಡುವೆಯೂ ಮುಕೇಶ್ ಈ ಪಂದ್ಯದಲ್ಲಿ ಆಡಿದ್ದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮುಕೇಶ್ ಅವರ ತಾಯಿ ಮಂಗಳವಾರ ನಿಧನರಾಗಿದ್ದರು. ರಾಜಸ್ಥಾನದ ಭಿಲ್ವಾರಾದಲ್ಲಿ ತಾಯಿಯ ಅಂತಿಮ ಸಂಸ್ಕಾರಗಳನ್ನು ಪೂರೈಸಿದ ಮುಕೇಶ್, ಮರುದಿನವೇ ಚೆನ್ನೈ ತಂಡವನ್ನು ಸೇರಿಕೊಂಡರು. ಖಲೀಲ್ ಅಹ್ಮದ್ ಗಾಯಗೊಂಡು ಹೊರಗುಳಿದಿದ್ದರಿಂದ, ತಂಡಕ್ಕೆ ತನ್ನ ಅವಶ್ಯಕತೆ ಇದೆ ಎಂದು ಅರಿತಿದ್ದ ಮುಕೇಶ್, ವೈಯಕ್ತಿಕ ದುಃಖವನ್ನು ಬದಿಗಿಟ್ಟು ಮುಂಬೈ ವಿರುದ್ಧದ ಪಂದ್ಯಕ್ಕೆ ಮೈದಾನಕ್ಕಿಳಿದರು.
ಪಂದ್ಯದಲ್ಲಿ ಅಕೀಲ್ ಹೊಸೈನ್ ಜೊತೆ ಹೊಸ ಚೆಂಡನ್ನು ಹಂಚಿಕೊಂಡ ಮುಕೇಶ್, ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದರು. ರೋಹಿತ್ ಅನುಪಸ್ಥಿತಿಯಲ್ಲಿ ಮುಂಬೈ ಬ್ಯಾಟಿಂಗ್‌ನ ಭರವಸೆಯಾಗಿದ್ದ ಕ್ವಿಂಟನ್ ಡಿ ಕಾಕ್ ಅವರನ್ನು ಬೌಲ್ಡ್ ಮಾಡಿ ಮುಕೇಶ್ ಮುಂಬೈಗೆ ಆಘಾತ ನೀಡಿದರು. ಇದರ ನಂತರವೇ ಅವರು ಯಾವುದೇ ಸಂಭ್ರಮವಿಲ್ಲದೆ ಆಕಾಶದತ್ತ ಬೆರಳು ತೋರಿಸಿ, ಆ ವಿಕೆಟನ್ನು ತಮ್ಮ ತಾಯಿಗೆ ಅರ್ಪಿಸಿದರು.
ಮುಕೇಶ್ ಚೌಧರಿ ಬೌಲಿಂಗ್ ವಿಡಿಯೋ ವೈರಲ್:
ಈ ಪಂದ್ಯದಲ್ಲಿ ಮುಕೇಶ್ ನಾಲ್ಕು ಓವರ್‌ಗಳಲ್ಲಿ 31 ರನ್ ನೀಡಿ ಒಂದು ವಿಕೆಟ್ ಪಡೆದರು. ಪಂದ್ಯದ ನಂತರ, ಭಾವುಕರಾಗಿದ್ದ ಮುಕೇಶ್ ಅವರನ್ನು ನಾಯಕ ಋತುರಾಜ್ ಗಾಯಕ್ವಾಡ್ ಓಡಿಬಂದು ಅಪ್ಪಿಕೊಂಡರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಋತುರಾಜ್, ಮುಂಬೈ ವಿರುದ್ಧದ ಈ ಗೆಲುವನ್ನು ಮುಕೇಶ್‌ಗೆ ಅರ್ಪಿಸುವುದಾಗಿ ಹೇಳಿದರು. "ಮುಕೇಶ್‌ಗೆ ಇದು ಮಾನಸಿಕವಾಗಿ ದೊಡ್ಡ ಹೋರಾಟವಾಗಿತ್ತು. ಇಂತಹ ಪರಿಸ್ಥಿತಿಯಿಂದ ತಂಡಕ್ಕಾಗಿ ಮರಳಿ ಬರಲು ದೊಡ್ಡ ಧೈರ್ಯ ಬೇಕು. ಅವರ ಈ ಬದ್ಧತೆಗೆ ನಾವು ತಲೆಬಾಗುತ್ತೇವೆ. ಈ ಗೆಲುವು ಅವನಿಗಾಗಿ," ಎಂದು ಋತುರಾಜ್ ಹೇಳಿದರು.
ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್:
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮಕೇಶ್ ಅವರ ತಾಯಿಯ ನಿಧನದ ಸ್ಮರಣಾರ್ಥ ಎಡತೋಳಿಗೆ ಕಪ್ಪುಪಟ್ಟಿ ತೊಟ್ಟು ಕಣಕ್ಕಿಳಿಯುವ ಮೂಲಕ ಗೌರವ ಸಲ್ಲಿಸಿದರು. ಇಡೀ ಪಂದ್ಯದುದ್ದಕ್ಕೂ ಸಿಎಸ್‌ಕೆ ಆಟಗಾರರು ಕಪ್ಪು ಪಟ್ಟಿ ತೊಟ್ಟು ಮೈದಾನದಲ್ಲಿ ಕಾಣಿಸಿಕೊಂಡರು.
ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್:
19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಮೂರು ಪಂದ್ಯಗಳನ್ನು ಸೋತು ಕಂಗಾಲಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮತ್ತೊಮ್ಮೆ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಭೀತಿಗೆ ಸಿಲುಕಿತ್ತು. ಇದರ ಜತೆಗೆ ಗಾಯದ ಸಮಸ್ಯೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದೆಲ್ಲದರ ನಡುವೆಯೂ ಅದ್ಭುತ ಆಟವಾಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಈ ಮೂಲಕ ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.


