* ಸಿಎಸ್‌ಕೆ ಪರ 200ನೇ ಐಪಿಎಲ್ ಪಂದ್ಯವನ್ನಾಡಿದ ಮಹೇಂದ್ರ ಸಿಂಗ್ ಧೋನಿ* ಒಂದೇ ತಂಡದ ಪರ 200 ಐಪಿಎಲ್ ಪಂದ್ಯವನ್ನಾಡಿದ ಎರಡನೇ ಆಟಗಾರ ಮಹಿ* ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಎದುರು ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್

ಪುಣೆ(ಮೇ.05): ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ನಾಯಕ ಎಂ.ಎಸ್‌.ಧೋನಿ (MS Dhoni) ಬುಧವಾರ ಆರ್‌ಸಿಬಿ ವಿರುದ್ಧ ಕಣಕ್ಕಿಳಿಯುವ ಮೂಲಕ ಮಹತ್ವದ ಮೈಲಿಗಲ್ಲು ತಲುಪಿದರು. ಇದು ಚೆನ್ನೈ ಪರ ಐಪಿಎಲ್‌ನಲ್ಲಿ ಅವರಾಡಿದ 200ನೇ ಪಂದ್ಯ. ಐಪಿಎಲ್‌ನಲ್ಲಿ ಒಂದು ತಂಡದ ಪರ 200 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿದ 2ನೇ ಆಟಗಾರ ಎನ್ನುವ ಕೀರ್ತಿಗೆ ಮಹೇಂದ್ರ ಸಿಂಗ್ ಧೋನಿ ಪಾತ್ರರಾಗಿದ್ದಾರೆ. 

ವಿರಾಟ್‌ ಕೊಹ್ಲಿ (Virat Kohli) ಆರ್‌ಸಿಬಿ ಪರ 218 ಪಂದ್ಯಗಳನ್ನು ಆಡಿದ್ದಾರೆ. ಧೋನಿ ಐಪಿಎಲ್‌ನಲ್ಲಿ ಒಟ್ಟಾರೆ 230 ಪಂದ್ಯಗಳನ್ನಾಡಿದ್ದು, ಇದರಲ್ಲಿ 30 ಪಂದ್ಯಗಳನ್ನು ಪುಣೆ ಸೂಪರ್‌ಜೈಂಟ್‌ (Rising Pune Supergiant) ಪರ ಆಡಿದ್ದಾರೆ. ಮುಂಬೈ ಪರ 187 ಪಂದ್ಯಗಳನ್ನಾಡಿರುವ ಕೀರನ್‌ ಪೊಲ್ಲಾರ್ಡ್‌ 3ನೇ ಸ್ಥಾನದಲ್ಲಿದ್ದಾರೆ.

ಚೆನ್ನೈ ಪ್ಲೇ ಆಫ್‌ ಕನಸು ಬಹುತೇಕ ಭಗ್ನ

ಪುಣೆ: ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು (Royal Challengers Bangalore) 15ನೇ ಆವೃತ್ತಿಯ ಐಪಿಎಲ್‌ ಪ್ಲೇ-ಆಫ್‌ ರೇಸ್‌ನಲ್ಲಿ ತಾನು ಉಳಿದುಕೊಂಡು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಬಹುತೇಕ ಹೊರಗಟ್ಟಿದೆ. ಬುಧವಾರ ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿ 13 ರನ್‌ಗಳ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು. ತಂಡ 11 ಪಂದ್ಯಗಳಿಂದ 12 ಅಂಕ ಕಲೆಹಾಕಿದ್ದು, ಬಾಕಿ ಇರುವ 3 ಪಂದ್ಯಗಳಲ್ಲಿ ಕನಿಷ್ಠ 2ರಲ್ಲಿ ಗೆಲ್ಲಲೇಬೇಕಿದೆ. ತಂಡದ ನೆಟ್‌ ರನ್‌ರೇಟ್‌ ಕಳಪೆಯಾಗಿರುವ ಕಾರಣ, ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

IPL 2022 ಚೆನ್ನೈ ವಿರುದ್ಧ ಆರ್ ಸಿಬಿ ತಂಡಕ್ಕೆ ಭರ್ಜರಿ ಗೆಲುವು

ಮತ್ತೊಂದೆಡೆ ಚೆನ್ನೈ, 10 ಪಂದ್ಯಗಳಲ್ಲಿ 7ನೇ ಸೋಲು ಕಂಡಿದೆ. ತಂಡ ಉಳಿದಿರುವ ನಾಲ್ಕೂ ಪಂದ್ಯಗಳನ್ನು ಗೆದ್ದರೂ ಗರಿಷ್ಠ 14 ಅಂಕ ತಲುಪಬಹುದು. ಧೋನಿ ಪಡೆ ಪ್ಲೇ-ಆಫ್‌ ಪ್ರವೇಶಿಸಬೇಕಿದ್ದರೆ ಪವಾಡವಾಗಬೇಕಷ್ಟೆ. ಟಾಸ್‌ ಗೆದ್ದ ಧೋನಿ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸಿದರು. ಆರ್‌ಸಿಬಿ ಪವರ್‌-ಪ್ಲೇ ಮತ್ತು ಡೆತ್‌ ಓವರ್‌ಗಳಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸಿ 20 ಓವರಲ್ಲಿ 8 ವಿಕೆಟ್‌ಗೆ 173 ರನ್‌ ದಾಖಲಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ, ಡೆವೊನ್‌ ಕಾನ್‌ವೇ ಅವರ ಅರ್ಧಶತಕದ ಹೊರತಾಗಿಯೂ 20 ಓವರಲ್ಲಿ 8 ವಿಕೆಟ್‌ಗೆ 160 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಬೌಲರ್‌ಗಳ ಶಿಸ್ತುಬದ್ಧ ದಾಳಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟಿತು.

ಅಕಾಡೆಮಿಗೆಂದು ಪಡೆದಿದ್ದ ಸರ್ಕಾರಿ ಜಾಗವನ್ನು 33 ವರ್ಷ ಬಳಿಕ ಹಿಂದಿರುಗಿಸಿದ ಗವಾಸ್ಕರ್‌!

ಮುಂಬೈ: ಭಾರತದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌ ಕ್ರಿಕೆಟ್‌ ಅಕಾಡೆಮಿ ಸ್ಥಾಪಿಸಲು 1989ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಪಡೆದಿದ್ದ ಜಾಗವನ್ನು ವಾಪಸ್‌ ನೀಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಜಾಗದಲ್ಲಿ ಅಕಾಡೆಮಿ ಸ್ಥಾಪನೆ ಮಾಡದ್ದಕ್ಕೆ ಕಳೆದ ವರ್ಷ ರಾಜ್ಯ ಗೃಹ ನಿರ್ಮಾಣ ಖಾತೆ ಸಚಿವ ಜಿತೇಂದ್ರ ಅವ್ಹಾದ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಬಹಳಷ್ಟು ಚರ್ಚೆ ನಡೆಸಿದ ಬಳಿಕ ಗವಾಸ್ಕರ್‌ ಮಹಾರಾಷ್ಟ್ರ ಗೃಹ ನಿರ್ಮಾಣ ಹಾಗೂ ಅಭಿವೃದ್ಧಿ ಮಂಡಳಿಗೆ 33 ವರ್ಷಗಳ ಬಳಿಕ ಜಾಗವನ್ನು ಹಿಂದಿರುಗಿಸಿದ್ದಾರೆ ಎಂದು ತಿಳಿದುಬಂದಿದೆ.