IPL 2022 ಚೆನ್ನೈ ವಿರುದ್ಧ ಆರ್ ಸಿಬಿ ತಂಡಕ್ಕೆ ಭರ್ಜರಿ ಗೆಲುವು
ಡೆವೋನ್ ಕಾನ್ವೆ ಅರ್ಧಶತಕದ ಹೊರತಾಗಿಯೂ, ಹರ್ಷಲ್ ಪಟೇಲ್, ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಜೋಸ್ ಹ್ಯಾಸಲ್ ವುಡ್ ನೇತೃತ್ವದಲ್ಲಿ ಭರ್ಜರಿ ದಾಳಿ ನಡೆಸಿದ ಆರ್ ಸಿಬಿ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ 6ನೇ ಗೆಲುವು ಕಾಣುವಲ್ಲಿ ಯಶಸ್ವಿಯಾಗಿದೆ.
ಪುಣೆ (ಮೇ.4): ಕೊನೇ ಓವರ್ ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಪ್ರಮುಖ ವಿಕೆಟ್ ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದ ಆರ್ ಸಿಬಿ (RCB) ಬೌಲರ್ ಗಳು ತಂಡಕ್ಕೆ 13 ರನ್ ಗಳ ಅದ್ಭುತ ಗೆಲುವು ನೀಡಿದ್ದಾರೆ. ಸತತ ಮೂರು ಸೋಲುಗಳನ್ನು ಕಂಡಿದ್ದ ಆರ್ ಸಿಬಿ (Royal Challengers Bangalore), ಐಪಿಎಲ್ 2022 ಅಲ್ಲಿ ತನ್ನ 6ನೇ ಗೆಲುವು ಕಂಡು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡ 8 ವಿಕೆಟ್ ಗೆ 173 ರನ್ ಬಾರಿಸಿತ್ತು. ಪ್ರತಿಯಾಗಿ ಡೆವೋನ್ ಕಾನ್ವೆ (56ರನ್, 37 ಎಸೆತ, 6 ಬೌಂಡರಿ, 2 ಸಿಕ್ಸರ್) ಬಾರಿಸಿದ ಭರ್ಜರಿ ಅರ್ಧಶತಕದ ಹೊರತಾಗಿಯೂ, ಹರ್ಷಲ್ ಪಟೇಲ್ (35ಕ್ಕೆ 3), ಗ್ಲೆನ್ ಮ್ಯಾಕ್ಸ್ ವೆಲ್ (22ಕ್ಕೆ 2) ಹಾಗೂ ಜೋಸ್ ಹ್ಯಾಸಲ್ ವುಡ್ (19ಕ್ಕೆ 1) ಬೌಲಿಂಗ್ ಸಾಹಸದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು 8 ವಿಕೆಟ್ ಗೆ 160 ರನ್ ಗೆ ಕಟ್ಟಿಹಾಕಿದರು.
ಚೇಸಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಆರಂಭ ಕಂಡಿತ್ತು. ಮೊದಲ ವಿಕೆಟ್ ಗೆ ರುತುರಾಜ್ ಗಾಯಕ್ವಾಡ್ (28ರನ್, 23 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಡೆವೋನ್ ಕಾನ್ವೆ 54 ರನ್ ಗಳ ಜೊತೆಯಾಟವಾಡಿದರು. ಪವರ್ ಪ್ಲೇ ಓವರ್ ಗಳನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ತಂಡದ ಚೇಸಿಂಗ್ ಗೆ ಭದ್ರ ಬುನಾದಿ ಹಾಕಿದರು. ಕಳೆದ ಪಂದ್ಯದಲ್ಲಿ ಆಡಿದಂತೆ ಮೊದಲಿಗೆ ಎಚ್ಚರಿಕೆಯಲ್ಲಿ ಆಡಿದ ಜೋಡಿ, ಪವರ್ ಪ್ಲೇ ಓವರ್ ಗಳು ಮುಕ್ತಾಯದ ಸಮೀಪ ಬಂದಾಗ ಬಿರುಸಿನ ಆಟವಾಡುವ ಮೂಲಕ ಗಮನಸೆಳೆದರು.
7ನೇ ಓವರ್ ಎಸೆಯಲು ಬಂದ ಶಾಬಾಜ್ ಅಹ್ಮದ್, ರುತುರಾಜ್ ಗಾಯಕ್ವಾಡ್ ಅವರ ವಿಕೆಟ್ ಉರುಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ರಾಬಿನ್ ಉತ್ತಪ್ಪ 3 ಎಸೆತಗಳಲ್ಲಿ ಕೇವಲ 1 ರನ್ ಬಾರಿಸಿ ಮ್ಯಾಕ್ಸ್ ವೆಲ್ ಗೆ ವಿಕೆಟ್ ನೀಡಿದರು. ಈ ಮೊತ್ತಕ್ಕೆ 16 ರನ್ ಕೂಡಿಸುವ ವೇಳೆಗೆ ಸ್ಪಿನ್ ಎಸೆತಗಳನ್ನು ಅದ್ಭುತವಾಗಿ ಆಡುವ ಅಂಬಟಿ ರಾಯುಡು, 8 ಎಸೆತಗಳಲ್ಲಿ 10 ರನ್ ಸಿಡಿಸಿ ಮ್ಯಾಕ್ಸ್ ವೆಲ್ ಎಸೆತದಲ್ಲಿ ಬೌಲ್ಡ್ ಆದರು.
75 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಚೆನ್ನೈ ತಂಡವನ್ನು ಡೆವೋನ್ ಕಾನ್ವೆ ಹಾಗೂ ಮೋಯಿನ್ ಅಲಿ (34ರನ್, 27 ಎಸೆತ, 2 ಬೌಂಡರಿ, 2 ಸಿಕ್ಸರ್) 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅರ್ಧಶತಕ ಬಾರಿಸಿ ಆರ್ ಸಿಬಿ ಬೌಲಿಂಗ್ ವಿಭಾಗಕ್ಕೆ ಸವಾಲು ನೀಡಿದ್ದ ಡೆವೋನ್ ಕಾನ್ವೆಯ ವಿಕೆಟ್ ಉರುಳಿಸಿದ ವಾನಿಂದು ಹಸರಂಗ ತಂಡಕ್ಕೆ ಪ್ರಮುಖ ಯಶಸ್ಸು ನೀಡಿದರು.
IPL 2022 ಚೆನ್ನೈ ಸೂಪರ್ ಕಿಂಗ್ಸ್ ಗೆ 174 ರನ್ ಗುರಿ ನೀಡಿದ ಆರ್ ಸಿಬಿ
ಬಳಿಕ ಮೊಯಿನ್ ಅಲಿಗೆ ಜೊತೆಯಾದ ರವೀಂದ್ರ ಜಡೇಜಾ (3) ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ತಂಡದ ಮೊತ್ತ 122 ರನ್ ಆಗಿದ್ದಾಗ ಹರ್ಷಲ್ ಪಟೇಲ್, ರವೀಂದ್ರ ಜಡೇಜಾ ಔಟಾದರೆ, ಆರ್ ಸಿಬಿ ಪಾಲಿಗೆ ಅಡ್ಡಿಯಾಗಿ ನಿಂತಿದ್ದ ಮೋಯಿನ್ ಅಲಿ ತಂಡದ ಮೊತ್ತ 133 ರನ್ ಆಗಿದ್ದಾಗ ಔಟಾಗಿದ್ದು ಆರ್ ಸಿಬಿಗೆ ಗೆಲುವಿನ ವಿಶ್ವಾಸ ಮೂಡಿಸಿತು.
ಬಾಂದ್ರಾದಲ್ಲಿ 10.5 ಕೋಟಿಯ ಮನೆ ಖರೀದಿಸಿದ 22 ವರ್ಷದ ಪೃಥ್ವಿ ಶಾ!
19ನೇ ಓವರ್ ನಲ್ಲಿ ಔಟಾದ ಧೋನಿ: ಚೆನ್ನೈ ತಂಡಕ್ಕೆ ಕೊನೇ ಎರಡು ಓವರ್ ಗಳಲ್ಲಿ ಗೆಲುವಿಗೆ 39 ರನ್ ಬೇಕಿದ್ದವು. ಆದರೆ, ಎಂಎಸ್ ಧೋನಿ ಕ್ರೀಸ್ ನಲ್ಲಿದ್ದ ಕಾರಣ, ಚೆನ್ನೈ ತಂಡ ಗೆಲುವು ಸಾಧಿಸಬಹುದು ಎನ್ನುವ ವಿಶ್ವಾಸ ಹೊಂದಿತ್ತು. ಆದರೆ, ಜೋಸ್ ಹ್ಯಾಸಲ್ ವುಡ್ ಎಸೆದ 19ನೇ ಓವರ್ ನ ಮೊದಲ ಎಸೆತದಲ್ಲಿಯೇ ಎಂಎಸ್ ಧೋನಿ ಡೀಪ್ ಮಿಡ್ ವಿಕೆಟ್ ನಲ್ಲಿ ರಜತ್ ಪಾಟೀದಾರ್ ಹಿಡಿದ ಕ್ಯಾಚ್ ಗೆ ಡಗ್ ಔಟ್ ಗೆ ಹಿಂತಿರುಗಿದರು. ಆಗ ಆರ್ ಸಿಬಿ ತಂಡಕ್ಕೆ ಗೆಲುವು ಸಾಧಿಸಬಹುದು ಎನ್ನುವ ವಿಶ್ವಾಸ ಮೂಡಿತು.