ಐಪಿಎಲ್‌ನಲ್ಲಿ ಯಾರೂ ಮಾಡದ ರೆಕಾರ್ಡ್ ಬರೆದ ಎಂ ಎಸ್ ಧೋನಿ!

Synopsis
ಎಂ.ಎಸ್.ಧೋನಿ ಐಪಿಎಲ್‌ನಲ್ಲಿ 200 ಔಟ್ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಲಖನೌ ವಿರುದ್ಧ ಗೆಲುವು ಸಾಧಿಸಿದೆ. ಋತುರಾಜ್ ಗಾಯಕ್ವಾಡ್ ಬದಲು ಆಯುಶ್ ಮಾಥ್ರೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಲಖನೌ: ಭಾರತದ ಮಾಜಿ ನಾಯಕ, ದಿಗ್ಗಜ ಕ್ರಿಕೆಟಿಗ ಎಂ.ಎಸ್.ಧೋನಿ ಇಂಡಿಯನ್ ಸೂಪರ್ ಲೀಗ್(ಐಪಿಎಲ್)ನಲ್ಲಿ ಹೊಸ ಮೈಲುಗಲ್ಲು ಸಾಧಿಸಿದ್ದಾರೆ. ಟೂರ್ನಿಯ ಇತಿಹಾಸದಲ್ಲೇ 200 ಔಟ್ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೋಮವಾರ ಲಖನೌ ಸೂಪರ್ ಜೈಂಟ್ಸ್ ತಂಡದ ಬ್ಯಾಟರ್ ಆಯುಶ್ ಬದೋನಿಯನ್ನು ಸ್ಟಂಪ್‌ಔಟ್ ಮಾಡುವ ಮೂಲಕ ಧೋನಿ ಈ ಸಾಧನೆ ಮಾಡಿದರು. 43 ವರ್ಷದ ಧೋನಿ ಐಪಿಎಲ್‌ನ 271 ಪಂದ್ಯಗಳಲ್ಲಿ 151 ಕ್ಯಾಚ್ ಪಡೆದಿದ್ದು, 47 ಸ್ಟಂಪೌಟ್ ಮಾಡಿದ್ದಾರೆ. ಫೀಲ್ಡಿಂಗ್‌ನಲ್ಲೂ ಮಿಂಚಿರುವ ಅವರು 4 ಕ್ಯಾಚ್ ಪಡೆದಿದ್ದಾರೆ.
ಅತಿ ಹೆಚ್ಚು ಬಾರಿ ಬ್ಯಾಟರ್‌ಗಳನ್ನು ಔಟ್ ಮಾಡಲು ನೆರವಾದ ಆಟಗಾರರ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ 2ನೇ ಸ್ಥಾನದಲ್ಲಿದ್ದಾರೆ. ಅವರು 182 ಔಟ್ ಮಾಡಿದ್ದಾರೆ. ವಿಕೆಟ್ ಕೀಪರ್ ಆಗಿ 137 ಕ್ಯಾಚ್, 37 ಸ್ಟಂಪಿಂಗ್ ಮಾಡಿರುವ ಅವರು, ಫೀಲ್ಡಿಂಗ್‌ನಲ್ಲಿ 8 ಕ್ಯಾಚ್ ಪಡೆದಿದ್ದಾರೆ.
ಇದನ್ನೂ ಓದಿ: ಕೊಹ್ಲಿಯ 10ನೇ ತರಗತಿ ಮಾರ್ಕ್ಸ್‌ಶೀಟ್ ವೈರಲ್: ಇಂಗ್ಲಿಷ್‌ನಲ್ಲಿ ವಿರಾಟ್ ಸ್ಕೋರ್ ಎಷ್ಟು?
ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ 126 ಔಟ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ರಾಬಿನ್ ಉತ್ತಪ್ಪ 124, ವೃದ್ಧಿಮಾನ್ ಸಾಹ 118 ಬಾರಿ ಬ್ಯಾಟರ್‌ಗಳನ್ನು ಔಟ್ ಮಾಡಲು ನೆರವಾಗಿದ್ದಾರೆ.
ಎದ್ದು ಬಿದ್ದು ಕೊನೆಗೂ ಗೆದ್ದ ಚೆನ್ನೈ ಕಿಂಗ್ಸ್
ಲಖನೌ: ಸತತ 5 ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ 5 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದ ಧೋನಿ ಬಳಗ, ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇದು ಚೆನ್ನೈಗೆ 7 ಪಂದ್ಯಗಳಲ್ಲಿ 2ನೇ ಗೆಲುವು. ಅತ್ತ ಲಖನೌ ತಾನಾಡಿದ 7 ಪಂದ್ಯಗಳಲ್ಲಿ 3ನೇ ಸೋಲು ಕಂಡಿತು.
ಮೊದಲು ಬ್ಯಾಟ್ ಮಾಡಿದ ಲಖನೌ, ರಿಷಭ್ ಪಂತ್ ಅರ್ಧಶತಕದ ನೆರವಿನಿಂದ 6 ವಿಕೆಟ್‌ಗೆ 177 ರನ್ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ 19.3 ಓವರ್‌ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 96 ರನ್‌ಗಳಿಗೆ ಅಗ್ರಕ್ರಮಾಂಕದ 4 ವಿಕೆಟ್ ಕಳೆದುಕೊಂಡಿತು. ಆದರೆ ಕೊನೆಯಲ್ಲಿ ಶಿವಂ ದುಬೆ ಹಾಗೂ ಎಂ ಎಸ್ ಧೋನಿ ಮುರಿಯದ 50+ ರನ್ ಜತೆಯಾಟವಾಡುವ ಮೂಲಕ ಯಾವುದೇ ಅಪಾಯವಿಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಿಎಸ್‌ಕೆ ಪರ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಶಿವಂ ದುಬೆ ಅಜೇಯ 43 ರನ್ ಬಾರಿಸಿದರೆ, ನಾಯಕ ಎಂ ಎಸ್ ಧೋನಿ 11 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 26 ರನ್ ಬಾರಿಸಿ ಅಜೇಯರಾಗುಳಿದರು.
ಇದನ್ನೂ ಓದಿ: ಸತತ 5 ಸೋಲಿನ ಬಳಿಕ ಕೊನೆಗೂ ಗೆದ್ದ ಸಿಎಸ್‌ಕೆ! ಪಂದ್ಯ ಗೆಲ್ಲಿಸಿದ ಧೋನಿ
ಋತುರಾಜ್ ಬದಲು 17 ವರ್ಷದ ಆಯುಶ್ ಮಾಥ್ರೆ ಚೆನ್ನೈ ತಂಡಕ್ಕೆ ಸೇರ್ಪಡೆ
ಚೆನ್ನೈ: ಗಾಯಗೊಂಡು ಈ ಬಾರಿ ಟೂರ್ನಿಯಿಂದಲೇ ಹೊರಬಿದ್ದಿರುವ ಋತುರಾಜ್ ಗಾಯಕ್ವಾಡ್ ಬದಲು ಮುಂಬೈನ 17 ವರ್ಷದ ಯುವ ಬ್ಯಾಟರ್ ಆಯುಶ್ ಮಾಥ್ರೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಗೊಳಿಸಿದೆ. ಋತುರಾಜ್ ಇತ್ತೀಚೆಗೆ ಮೊಣಕೈ ಗಾಯದಿಂದ ಹೊರಬಿದ್ದಿದ್ದರು. ಮುಂಬೈ ಪರ 9 ಪ್ರಥಮ ದರ್ಜೆ ಪಂದ್ಯಗಳಲ್ಲಿ 2 ಶತಕ, 1 ಅರ್ಧಶತಕ ಬಾರಿಸಿರುವ ಆಯುಶ್ 2 ವಾರಗಳಿಂದ ಚೆನ್ನೈ ತಂಡದ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸದ್ಯ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮುಂಬರುವ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಯುಶ್ ಮಾಥ್ರೆ ಕಣಕ್ಕಿಳಿಯುವ ಸಾಧ್ಯತೆಯಿದೆ.