ಬೆಂಗಳೂರು(ಆ.16): ಭಾರತ ತಂಡ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೊರತೆ ಎದುರಿಸುತ್ತಿದ್ದಾಗ ಆ ಸ್ಥಾನವನ್ನು ತುಂಬುವ ಆಟಗಾರನಾಗಿ ತಂಡಕ್ಕೆ ಆಯ್ಕೆ ಆದ ಎಂ.ಎಸ್.ಧೋನಿ ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರ ಪೈಕಿ ಒಬ್ಬರು. 2004ರಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಧೋನಿ, 16 ವರ್ಷಗಳ ಕಾಲ ಅಂ.ರಾ. ಕ್ರಿಕೆಟ್‌ನಲ್ಲಿ ಮಿಂಚಿ ಇದೀಗ ನಿವೃತ್ತಿ ಘೋಷಿಸಿದ್ದಾರೆ. ಧೋನಿ, ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿ ಅದೆಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಅವರ ಕ್ರಿಕೆಟ್ ವೃತ್ತಿ ಬದುಕಿನ ಸಂಕ್ಷಿಪ್ತ ವಿವರ ಇಲ್ಲಿದೆ.

ಏಕದಿನದಲ್ಲಿ ಧೋನಿ ಯಶೋಗಾಥೆ: 2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಮೊದಲ ಪಂದ್ಯವನ್ನು ಆಡಿದ ಧೋನಿ ಶೂನ್ಯಕ್ಕೆ ರನ್ ಔಟ್ ಆಗುವುದರೊಂದಿಗೆ ಏಕದಿನ ಪಂದ್ಯದಲ್ಲಿ ಉತ್ತಮ ಆರಂಭವನ್ನೇನೂ ಪಡೆದಿರಲಿಲ್ಲ. ಬಾಂಗ್ಲಾ ಸರಣಿಯಲ್ಲಿ ಅಷ್ಟೇನೂ ಉತ್ತಮ ಸಾಧನೆ ತೋರಿರದ ಧೋನಿಗೆ ಯಶಸ್ಸು ತಂದುಕೊಟ್ಟಿದ್ದು ಪಾಕಿಸ್ತಾನ ವಿರುದ್ಧದ ಸರಣಿ. ವಿಶಾಖಪಟ್ಟಣದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ 123 ಎಸೆತದಲ್ಲಿ 148 ರನ್ ಗಳಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು. ಈ ಒಂದು ಇನ್ನಿಂಗ್ಸ್ ಭಾರತ ಕ್ರಿಕೆಟ್‌ನಲ್ಲಿ ‘ಧೋನಿ ಯುಗ’ಕ್ಕೆ ನಾಂದಿ ಹಾಡಿತು. ಆ ಬಳಿಕ ಧೋನಿ ಹಿಂದಿರುಗಿ ನೋಡಿದ್ದೇ ಇಲ್ಲ. ಒಂದಾದ ಬಳಿಕ ಒಂದು ದಾಖಲೆಗಳನ್ನು ನಿರ್ಮಿಸುತ್ತಾ ಸಾಗಿದರು. 2005ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯವೊಂದಲ್ಲಿ 145 ಬಾಲ್‌ನಲ್ಲಿ 183ರನ್ ಗಳಿಸಿದ್ದು ಧೋನಿ ಆಡಿದ ಶ್ರೇಷ್ಠ ಇನಿಂಗ್ಸ್‌ಗಳಲ್ಲಿ ಒಂದು. ಈ ಮೂಲಕ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನೂ ಬರೆದರು. ಇದುವರೆಗೆ 350 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 51 ರನ್ ಸರಾಸರಿಯೊಂದಿಗೆ 10 ಶತಕ 73 ಅರ್ಧ ಶತಕ ಗಳಿಸಿದ್ದಾರೆ. ಏಕದಿನದಲ್ಲಿ ಒಟ್ಟಾರೆ 10,773 ರನ್ ಕಲೆ ಹಾಕಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 12ನೇ ಹಾಗೂ ಭಾರತದ 4ನೇ ಆಟಗಾರ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾಗಿದ್ದಾರೆ.

ವಿಕೆಟ್ ಹಿಂದಿನ ಮಾಂತ್ರಿಕ! ಕ್ಷೇತ್ರ ರಕ್ಷಣೆಗಾರ ಎಸೆದ ಚೆಂಡನ್ನು ಮಿಂಚಿನ ವೇಗದಲ್ಲಿ ಹಿಡಿದು ಬೇಲ್ಸ್ ಎಗರಿಸುವುದಿರಬಹುದು, ಬ್ಯಾಟ್ಸ್‌ಮನ್ ಅರ್ಧ ಇಂಚು ಕ್ರೀಸ್ ದಾಟಿದರೂ ಆತ ಗೆರೆಯೊಳಕ್ಕೆ ಮರಳುವ ಮುನ್ನ ಕ್ಷಣಾರ್ಧದಲ್ಲಿ ಬೇಲ್ಸ್ ಎಗರಿಸುವುದಿರಬಹುದು, ಅದ್ಭುತ ಕ್ಯಾಚುಗಳನ್ನು ಕಬಳಿಸುವುದಿರಬಹುದು, ಸರ್ವಾಂಗವನ್ನೂ ಬಳಸಿ ರನ್ ಬಿಟ್ಟುಕೊಡದಿರುವುದಿರಬಹುದು, ಎಲ್‌ಬಿಡಬ್ಲ್ಯು-ಕ್ಯಾಚ್‌ಗಳ ಬಗ್ಗೆ ಅಂಪೈರ್‌ಗೆ ಅಪೀಲು ಮಾಡುವುದು ಅಥವಾ ಮೂರನೇ ಅಂಪೈರ್ ನಿರ್ಧಾರಕ್ಕೆ ಕೋರುವ ಡಿಆರ್‌ಎಸ್ ಮನವಿಯ ಚಾಕಚಕ್ಯತೆ ಇರಬಹುದು... ಇಂತಹ ಅನೇಕ ತಂತ್ರಗಳಲ್ಲೂ ಧೋನಿ ನಿಸ್ಸೀಮ. ಅವರೊಬ್ಬ ವಿಕೆಟ್ ಹಿಂದಿನ ಮಾಂತ್ರಿಕ ಎಂದರೆ ಅತಿಶಯೋಕ್ತಿಯಾಗಲಾರದು. ಏಕದಿನ ಪಂದ್ಯವೊಂದರಲ್ಲಿ 6 ಬ್ಯಾಟ್ಸ್‌ಮನ್ ಗಳನ್ನು ಬಲಿ ಪಡಿದ ದಾಖಲೆ ಧೋನಿ ಹೆಸರಿನಲ್ಲಿದೆ. ವಿಕೆಟ್‌ ಹಿಂದೆ ನಿಂತು ಒಟ್ಟು 444 ವಿಕೆಟ್‌ಗಳನ್ನು ಧೋನಿ ಪಡೆದುಕೊಂಡಿದ್ದಾರೆ. ಇದರಲ್ಲಿ 321 ಕ್ಯಾಚ್ ಹಾಗೂ 123 ಸ್ಟಂಪಿಂಗ್‌ಗಳು ಸೇರಿವೆ. ಅತಿ ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆಯನ್ನೂ ಧೋನಿ ತಮ್ಮದಾಗಿಸಿಕೊಂಡಿದ್ದಾರೆ. 300ಕ್ಕೂ ಹೆಚ್ಚು ಕ್ಯಾಚ್ ಹಿಡಿದ ಭಾರತದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.

ಯಾರಿಗೂ ಬೇಡವಾಗಿದ್ದ ಟಿ20 ನಾಯಕತ್ವ ವಹಿಸಿಕೊಂಡಿದ್ದ ಧೋನಿ..!

ಟೆಸ್ಟ್‌ನಲ್ಲೂ ಧೋನಿ ಮಿಂಚು: ಏಕದಿನಕ್ಕೆ ಪಾದಾರ್ಪಣೆ ಮಾಡಿದ ಒಂದು ವರ್ಷದ ಬಳಿಕ ಧೋನಿ ಟೆಸ್ಟ್ ಕ್ರಿಕೆಟ್ ಗೂ ಆಯ್ಕೆ ಆದರು. 2005ರಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡಿದರು. 2008ರಲ್ಲಿ ಅನಿಲ್ ಕುಂಬ್ಳೆ ನಿವೃತ್ತಿ ಬಳಿಕ ಟೆಸ್ಟ್ ತಂಡದ ನಾಯಕನಾಗಿ ಧೋನಿ ಆಯ್ಕೆ ಆದರು. ಧೋನಿ ನಾಯಕರಾದ ಒಂದೇ ವರ್ಷದಲ್ಲಿ ಭಾರತ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಪಟ್ಟಕ್ಕೆ ಏರಿದ್ದು ವಿಶೇಷ. 90 ಟೆಸ್ಟ್ ಪಂದ್ಯಗಳಲ್ಲಿ 144 ಇನ್ನಿಂಗ್ಸ್ ಆಡಿರುವ ಧೋನಿ 38ರ ಸರಾಸರಿಯಲ್ಲಿ 4,876 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 6 ಶತಕ ಹಾಗೂ 33 ಅರ್ಧ ಶತಕಗಳು ಸೇರಿವೆ. ಆಸ್ಟ್ರೇಲಿಯಾ ವಿರುದ್ಧ 224 ರನ್‌ಗಳಿಸಿದ್ದು ಗರಿಷ್ಠ ಮೊತ್ತವಾಗಿದೆ. 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂಲಕ ನಿವೃತ್ತಿ ಘೋಷಿಸಿದರು. ಟೆಸ್ಟ್‌ನಲ್ಲೂ ವಿಕೆಟ್ ಕೀಪರ್ ಆಗಿ ಧೋನಿ ಗಮನ ಸೆಳೆದಿದ್ದಾರೆ. 256 ಕ್ಯಾಚ್ ಹಾಗೂ 38 ಸ್ಟಂಪಿಂಗ್ ಮೂಲಕ ಒಟ್ಟು 294 ಬಲಿ ಪಡೆದಿದ್ದಾರೆ.

ಟಿ20 ಕ್ರಿಕೆಟ್ ಸ್ಪೆಷಲಿಸ್ಟ್:  2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಆಡಿದ ಮೊದಲ ಟಿ20 ಪಂದ್ಯದ ಮೂಲಕ ಧೋನಿ ಟಿ20ಗೆ ಪಾದಾರ್ಪಣೆ ಮಾಡಿದರು. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಹೊಣೆಯನ್ನು ಧೋನಿಗೆ ವಹಿಸಲಾಯಿತು. 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಧೋನಿ ಯಶಸ್ವಿಯಾದರು. ಟಿ20ಯಲ್ಲಿ 1000ಕ್ಕೂ ಅಧಿಕ ರನ್‌ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 96 ಟಿ20 ಪಂದ್ಯದಲ್ಲಿ ಧೋನಿ 36.86ರ ಸರಾಸರಿಯೊಂದಿಗೆ 1,548 ರನ್ ಗಳಿಸಿದ್ದಾರೆ. ಟಿ20ಯಲ್ಲಿ ಧೋನಿಗಳಿಸಿದ್ದು 2 ಅರ್ಧ ಶತಕ ಮಾತ್ರ. 56 ರನ್ ಗಳಿಸಿದ್ದು ಗರಿಷ್ಠ ಮೊತ್ತವೆನಿಸಿಕೊಂಡಿದೆ.

ಐಪಿಎಲ್‌ಗೆ ಧೋನಿಯೇ ಬಾಸ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲ ಐಪಿಎಲ್‌ನಲ್ಲೂ ಧೋನಿ ಕಮಾಲ್ ಮಾಡಿದ್ದಾರೆ. ಐಪಿಎಲ್ ಮೊದಲ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿಯನ್ನು 15 ಕೋಟಿ ರು.ಗೆ ಖರೀದಿಸಿತ್ತು. ಈ ಮೂಲಕ ಐಪಿಎಲ್‌ನಲ್ಲಿ ಅತಿ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆರಂಭದಿಂದಲೂ ಸಿಎಸ್‌ಕೆ ತಂಡದ ನಾಯಕನಾಗಿಯೇ ಧೋನಿ ಐಪಿಎಲ್ ಆಡುತ್ತಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 2010, 2011 ಹಾಗೂ 2018ರಲ್ಲಿ ಮೂರು ಬಾರಿ ಚಾಂಪಿಯನ್ ಎನಿಸಿಕೊಂಡಿದೆ. ಐಪಿಎಲ್‌ನಲ್ಲಿ ಧೋನಿ 42ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. 84 ರನ್ ಅವರ ಗರಿಷ್ಠ ಮೊತ್ತವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಧೋನಿ ಇನ್ನೂ 2-3 ವರ್ಷ ಐಪಿಎಲ್‌ನಲ್ಲಿ ಆಡಲಿದ್ದಾರೆ.