Asianet Suvarna News Asianet Suvarna News

1983 ವಿಶ್ವಕಪ್ ಫೈನಲ್ ಗೆಲ್ಲಿಸಿದ unsung ಹೀರೋ ಮೋಹಿಂದರ್ ಅಮರ್‌ನಾಥ್..!

1983ರ ಏಕದಿನ ವಿಶ್ವಕಪ್ ಗೆಲುವಿಗಿಂದು 40 ವರ್ಷ ಭರ್ತಿ
ಏಕದಿನ ವಿಶ್ವಕಪ್ ಗೆಲುವಿನ ನಿಜವಾದ ರೂವಾರಿ ಮೋಹಿಂದರ್ ಅಮರ್‌ನಾಥ್
ಆಲ್ರೌಂಡ್ ಪ್ರದರ್ಶನದ ಮೂಲಕ ತಂಡಕ್ಕೆ ಆಸರೆಯಾಗಿದ್ದ ಅಮರ್‌ನಾಥ್‌

Mohinder Amarnath all round performance changed the 1983 World Cup final for India kvn
Author
First Published Jun 25, 2023, 5:06 PM IST

ಬೆಂಗಳೂರು(ಜೂ.25): ಕಪಿಲ್ ನೇತೃತ್ವದ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದು ಇಂದಿಗೆ 40 ವರ್ಷಗಳು ಭರ್ತಿಯಾಗಿವೆ. 1983ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಘಟಾನುಘಟಿ ತಂಡಗಳಿಗೆ ಮಣ್ಣುಮುಕ್ಕಿಸಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿತ್ತು. ಸತತ ಎರಡು ಏಕದಿನ ವಿಶ್ವಕಪ್ ಗೆದ್ದು ಫೈನಲ್ ಪ್ರವೇಶಿಸಿದ್ದ ವೆಸ್ಟ್ ಇಂಡೀಸ್‌ ತಂಡವನ್ನು ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ 43 ರನ್ ಅಂತರದಲ್ಲಿ ಬಗ್ಗುಬಡಿಯುವಲ್ಲಿ ಯಶಸ್ವಿಯಾಯಿತು. 

ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಕಪಿಲ್ ದೇವ್ ಏಕದಿನ ವಿಶ್ವಕಪ್ ಎತ್ತಿ ಹಿಡಿದದ್ದು ದೇಶದ ಲಕ್ಷಾಂತರ ಮಂದಿ ಕ್ರಿಕೆಟ್‌ನತ್ತ ಒಲವು ಬೆಳಸಿಕೊಳ್ಳಲು ಸ್ಪೂರ್ತಿ ನೀಡಿತು. ಆದರೆ ಈ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್‌ ಆಗಲು ಓರ್ವ ಆಟಗಾರ ತೆರೆಮರೆಯ ಕಾಯಿಯಂತೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ್ದು ಹೊಸ ತಲೆಮಾರಿಗೆ ಗೊತ್ತಿರದೇ ಇರಬಹುದು.

ಹೌದು, ಭಾರತ ಏಕದಿನ ವಿಶ್ವಕಪ್ ಗೆಲುವಿನ ನಿಜವಾದ ರೂವಾರಿಗಳಲ್ಲಿ ಮೋಹಿಂದರ್ ಅಮರ್‌ನಾಥ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಇಡೀ ಟೂರ್ನಿಯುದ್ದಕ್ಕೂ ಮೋಹಿಂದರ್ ಅಮರ್‌ನಾಥ್ ಮಹತ್ವದ ಪಂದ್ಯಗಳಲ್ಲಿ ಗೇಮ್ ಚೇಂಜರ್ ಆಗಿ ಆಡಿ ಮಿಂಚಿದ್ದರು. ಅದರಲ್ಲೂ ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ಮೋಹಿಂದರ್ ಅಮರ್‌ನಾಥ್ ಅವರ ಮಿಂಚಿನ ಪ್ರದರ್ಶನವನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಭಾರತ ಗೆದ್ದ 1983ರ ಏಕದಿನ ವಿಶ್ವಕಪ್ ಫೈನಲ್ ಹೇಗಿತ್ತು?

1983ರ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಕೇವಲ ಒಂದು ಪಂದ್ಯವನ್ನಷ್ಟೇ ಜಯಿಸಿತ್ತು. 1983ರ ಏಕದಿನ ವಿಶ್ವಕಪ್‌ನಲ್ಲಿ ಕಪಿಲ್ ದೇವ್ ಪಡೆ ಮೊದಲ ಬಾರಿಗೆ ಸೆಮಿಫೈನಲ್‌ಗೇರುವಲ್ಲಿ ಯಶಸ್ವಿಯಾಗಿತ್ತು. ಇಂಗ್ಲೆಂಡ್ ಎದುರಿನ ಮಹತ್ವದ ಸೆಮಿಫೈನಲ್‌ನಲ್ಲಿ ಮೋಹಿಂದರ್ ಅಮರ್‌ನಾಥ್ 12 ಓವರ್ ಬೌಲಿಂಗ್ ಮಾಡಿ ಕೇವಲ 27 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಇನ್ನು ಬ್ಯಾಟಿಂಗ್‌ನಲ್ಲಿ ಅಮೂಲ್ಯ 46 ರನ್ ಬಾರಿಸುವ ಮೂಲಕ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಅಮರ್‌ನಾಥ್ ಯಶಸ್ವಿಯಾದರು.

ಇನ್ನು ಜೂನ್ 25, 1983ರಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ 59 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಸುನಿಲ್ ಗವಾಸ್ಕರ್ ಹಾಗೂ ಕೃಷ್ಣಮಾಚಾರಿ ಶ್ರೀಕಾಂತ್ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಈ ಸಂಕಷ್ಟದ ಸಮಯದಲ್ಲಿ ಕ್ರೀಸ್‌ಗಿಳಿದ ಅಮರ್‌ನಾಥ್, 108 ನಿಮಿಗಳ ಕಾಲ ಕ್ರೀಸ್‌ನಲ್ಲಿದ್ದು 80 ಎಸೆತಗಳನ್ನು ಎದುರಿಸಿ ಅಮೂಲ್ಯ 26 ರನ್ ಬಾರಿಸಿದರು. ಇನ್ನು ಮೋಯಿಂದರ್ ಅಮರ್‌ನಾಥ್ ವಿಕೆಟ್ ಪತನವಾಗುತ್ತಿದ್ದಂತೆಯೇ ದಿಢೀರ್ ಕುಸಿತ ಕಂಡ ಭಾರತ 54.4 ಓವರ್‌ಗಳಲ್ಲಿ 183 ರನ್‌ ಬಾರಿಸಿ ಸರ್ವಪತನ ಕಂಡಿತು. 

'ನಿನಗ್ಯಾವ ಉಚಿತ ಭಾಗ್ಯವಿಲ್ಲ': 1983ರ ವಿಶ್ವಕಪ್ ಫೈನಲ್‌ನ ಸ್ವಾರಸ್ಯಕರ ಘಟನೆ ಬಿಚ್ಚಿಟ್ಟ ಸನ್ನಿ..!

ಭಾರತ ತಂಡವು ವಿಶ್ವಕಪ್ ಚಾಂಪಿಯನ್ ಆಗಬೇಕಿದ್ದರೆ, ಗಾರ್ಡನ್ ಗ್ರೀನಿಡ್ಜ್‌, ಡೆಸ್ಮಂಡ್‌ ಹೇಯ್ನ್ಸ್, ಕ್ಲೈವ್ ಲಾಯ್ಡ್ ಮತ್ತು ಸರ್‌ ವೀವ್ ರಿಚರ್ಡ್ಸ್‌ ಅವರಂತಹ ದಿಗ್ಗಜ ಬ್ಯಾಟರ್‌ಗಳನ್ನು ಬಲಿ ಪಡೆಯಲೇಬೇಕಿತ್ತು. ಬಲ್ವಿಂದರ್ ಸಂಧು ಆರಂಭದಲ್ಲಿ ಗಾರ್ಡನ್‌ ಗ್ರೀನಿಡ್ಜ್‌ ವಿಕೆಟ್ ಕಬಳಿಸಿದರು. ಇನ್ನು ಮದನ್ ಲಾಲ್‌ ಪ್ರಮುಖ 3 ವಿಕೆಟ್ ಕಬಳಿಸಿದರು. ಅದರಲ್ಲೂ ಸರ್ ವೀವ್ ರಿಚರ್ಡ್ಸ್‌ ಅವರ ಕ್ಯಾಚ್ ಹಿಡಿದ ಕಪಿಲ್ ದೇವ್ ಪಂದ್ಯ ಭಾರತದತ್ತ ವಾಲುವಂತೆ ಮಾಡಿದರು. ಒಂದು ಹಂತದಲ್ಲಿ ವೆಸ್ಟ್ ಇಂಡೀಸ್ ತಂಡವು 76 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು.

ಇದಾದ ಬಳಿಕ 7ನೇ ವಿಕೆಟ್‌ಗೆ ಜೆಫ್‌ ಡುಜೊನ್ ಹಾಗೂ ಮಾಲ್ಕಮ್ ಮಾರ್ಷಲ್‌ ಭಾರತೀಯ ಬೌಲರ್‌ಗಳೆದುರು ಪ್ರತಿರೋಧ ತೋರುವ ಯತ್ನ ನಡೆಸಿದರು. ಈ ಜೋಡಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ವೆಸ್ಟ್ ಇಂಡೀಸ್ ತಂಡವು 6 ವಿಕೆಟ್ ನಷ್ಟಕ್ಕೆ 118 ರನ್‌ಗಳಿದ್ದಾಗ ನಾಯಕ ಕಪಿಲ್ ದೇವ್ ಚೆಂಡನ್ನು ಮೋಹಿಂದರ್ ಅಮರ್‌ನಾಥ್ ಕೈಗಿತ್ತರು. ಮಾರಕ ದಾಳಿ ನಡೆಸಿದ ಅಮರ್‌ನಾಥ್, ಕೇವಲ 5 ರನ್ ಅಂತರದಲ್ಲಿ ಡುಜೊನ್‌ ಹಾಗೂ ಮಾಲ್ಕಮ್ ಮಾರ್ಷಲ್ ಅವರ ಬಲಿ ಪಡೆಯುವ ಮೂಲಕ ಭಾರತದ ಗೆಲುವು ಬಹುತೇಕ ಖಚಿತಪಡಿಸಿದರು. ಇನ್ನು ಆಂಡಿ ರಾಬರ್ಟ್ಸ್‌ಗೆ ನಾಯಕ ಕಪಿಲ್ ದೇವ್ ಪೆವಿಲಿಯನ್ ಹಾದಿ ತೋರಿಸಿದರೆ, ಕೊನೆಯಲ್ಲಿ ಮೈಕಲ್ ಹೋಲ್ಡಿಂಗ್ ಅವರನ್ನು ಅಮರ್‌ನಾಥ್ ಬಲಿ ಪಡೆಯುವ ಮೂಲಕ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.  ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೋಹಿಂದರ್ ಅಮರ್‌ನಾಥ್ ಕೇವಲ 7 ಓವರ್ ಬೌಲಿಂಗ್‌ ಮಾಡಿ 12 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು. ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ತೋರಿದ್ದಕ್ಕಾಗಿ ಮೋಹಿಂದರ್ ಅಮರ್‌ನಾಥ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

Follow Us:
Download App:
  • android
  • ios