ಭಾರತ ಗೆದ್ದ 1983ರ ಏಕದಿನ ವಿಶ್ವಕಪ್ ಫೈನಲ್ ಹೇಗಿತ್ತು?
ಬೆಂಗಳೂರು(ಜೂ.25): 1983ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ವಿಶ್ವಕಪ್ ಫೈನಲ್ ಹೇಗಿತ್ತು ಎನ್ನುವುದರ ಝಲಕ್ ಇಲ್ಲಿದೆ ನೋಡಿ
ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ, ಜೂನ್ 25, 1983ರಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಇದು ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಹಾಗೂ ಅಭಿಮಾನಿಗಳಿಗೆ ಒಂದು ರೀತಿ ಕನಸು ನನಸಾದ ಕ್ಷಣ ಎನಿಸಿಕೊಂಡಿತು. ಯಾಕೆಂದರೆ ಭಾರತ ತಂಡವು ದೈತ್ಯ ಸಂಹಾರ ಮಾಡಿದ ತಂಡ ಎನಿಸಿಕೊಂಡಿತು.
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು 1975 ಹಾಗೂ 1979ರಲ್ಲಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹೀಗಾಗಿ ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲುವ ವಿಂಡೀಸ್ ಕನಸಿಗೆ ಕಪಿಲ್ ಡೆವಿಲ್ಸ್ ಪಡೆ ತಣ್ಣೀರೆರಚಿತ್ತು.
ಆಗ ಏಕದಿನ ಪಂದ್ಯಗಳು 60 ಓವರ್‌ಗಳದ್ದಾಗಿದ್ದವು. ವಿಂಡೀಸ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡವು 54.4 ಓವರ್‌ಗಳಲ್ಲಿ 183 ರನ್ ಬಾರಿಸಿ ಸರ್ವಪತನ ಕಂಡಿತು.
ಇನ್ನು ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಉತ್ತಮ ಆರಂಭವನ್ನೇ ಪಡೆಯಿತು. ಆದರೆ ಮೋಹಿಂದರ್ ಅಮರ್‌ನಾಥ್, ವಿಂಡೀಸ್ ಬ್ಯಾಟರ್ ಡೆಸ್ಮಂಡ್ ಹೇಯ್ನ್ಸ್ ವಿಕೆಟ್ ಕಬಳಿಸಿದ ಬಳಿಕ ಆರಂಭ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿತು.
ಇನ್ನು ಕಪಿಲ್ ದೇವ್, ವಿಂಡೀಸ್ ಅಪಾಯಕಾರಿ ಬ್ಯಾಟರ್ ಸರ್ ವೀವ್ ರಿಚರ್ಡ್ಸ್ ಅವರ ಬಾರಿಸಿದ ಚೆಂಡನ್ನು ಅದ್ಭುತವಾಗಿ ಕ್ಯಾಚ್ ಹಿಡಿದಿದ್ದು, ಪಂದ್ಯದ ದಿಕ್ಕನ್ನೇ ಬದಲಿಸುವಂತೆ ಮಾಡಿತು.
ಆ ಕಾಲಘಟ್ಟದಲ್ಲಿ ಸರ್ ವೀವ್ ರಿಚರ್ಡ್ಸ್ ಕ್ರಿಕೆಟ್ ಜಗತ್ತಿನ ಡೇಂಜರರ್ಸ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಮದನ್ ಲಾಲ್ ಬೌಲಿಂಗ್‌ನಲ್ಲಿ ರಿಚರ್ಡ್ಸ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಕಪಿಲ್ ದೇವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಇದಾದ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಂಡ ವೆಸ್ಟ್ ಇಂಡೀಸ್ ತಂಡವು 52 ಓವರ್‌ಗಳನ್ನು ಆಡಿ ಕೇವಲ 140 ರನ್ ಬಾರಿಸಿ ಸರ್ವಪತನ ಕಂಡಿತು. ಈ ಮೂಲಕ ಭಾರತ 43 ರನ್ ಅಂತರದ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿತ್ತು.
ಕಪಿಲ್ ದೇವ್ ಲಾರ್ಡ್ಸ್ ಮೈದಾನದಲ್ಲಿ ವಿಶ್ವಕಪ್ ಎತ್ತಿ ಹಿಡಿದಿದ್ದು ಹಲವು ಯುವ ಕ್ರಿಕೆಟಿಗರ ಪಾಲಿಗೆ ಸ್ಪೂರ್ತಿಯ ಕ್ಷಣವಾಗಿ ಪರಿಣಮಿಸಿತು. ಕಪಿಲ್ ದೇವ್ ಪಡೆ ಏಕದಿನ ವಿಶ್ವಕಪ್ ಜಯಿಸಿದ್ದು, ಭಾರತದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಮತ್ತಷ್ಟು ವೇಗ ಸಿಕ್ಕಿತು.
1983ರ ಏಕದಿನ ವಿಶ್ವಕಪ್ ಗೆಲುವು ಭಾರತದ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ದೊಡ್ಡ ಕ್ರೀಡಾ ಸಾಧನೆಯಾಗಿ ಗುರುತಿಸಿಕೊಂಡಿದೆ. ಈ ಸಾಧನೆ ನಿರ್ಮಾಣವಾಗಿ ಇಂದಿಗೆ (25-06-1983) 40 ವರ್ಷ ಭರ್ತಿ.