ತೆಂಡುಲ್ಕರ್‌-ಆ್ಯಂಡರ್‌ಸನ್‌ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್‌ ವಿರುದ್ಧ ರೋಚಕ ಜಯ ಸಾಧಿಸಿದೆ. ಸಿರಾಜ್‌ ಮತ್ತು ಕೃಷ್ಣ ಅವರ ಅಮೋಘ ಬೌಲಿಂಗ್‌ ಪ್ರದರ್ಶನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಸರಣಿ 2-2ರಲ್ಲಿ ಸಮಬಲಗೊಂಡಿತು.

ಲಂಡನ್: ಭಾರೀ ಕುತೂಹಲ, ಹೋರಾಟ, ವಿವಾದ ಹಾಗೂ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಈ ಬಾರಿಯ ತೆಂಡುಲ್ಕರ್‌-ಆ್ಯಂಡರ್‌ಸನ್‌ ಸರಣಿ ಅಷ್ಟೇ ರೋಚಕವಾಗಿ ಕೊನೆಗೊಂಡಿದೆ. ದಿ ಓವಲ್‌ ಕ್ರೀಡಾಂಗಣದಲ್ಲಿ ಭಾರೀ ಥ್ರಿಲ್ಲರ್‌ ಕ್ಷಣಗಳನ್ನು ಕಟ್ಟಿಕೊಟ್ಟ 5ನೇ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾ 6 ರನ್‌ಗಳ ರೋಚಕ ಜಯಭೇರಿ ಬಾರಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿ 2-2ರಲ್ಲಿ ಡ್ರಾಗೊಂಡಿತು.

ದೇಶವನ್ನು ಗೆಲ್ಲಿಸಿದ ಮೊಹಮ್ಮದ್‌-ಕೃಷ್ಣ!

ಭಾರತದ ಗೆಲುವಿನ ಹಿಂದೆ 11 ಆಟಗಾರರ ಕೊಡುಗೆಯೂ ಇದೆ. ಆದರೆ ಕೊನೆ ದಿನದ ಥ್ರಿಲ್ಲರ್‌ನಲ್ಲಿ ಭಾರತವನ್ನು ಗೆಲ್ಲಿಸಿದ್ದು ಇಬ್ಬರು ವೇಗಿಗಳಾದ ಮೊಹಮ್ಮದ್‌ ಸಿರಾಜ್‌ ಹಾಗೂ ಕನ್ನಡಿಗ ಪ್ರಸಿದ್ಧ್‌ ಕೃಷ್ಣ. ಮಾರಕ ದಾಳಿ ಸಂಘಟಿಸಿದ ಇವರಿಬ್ಬರು, ಕೊನೆ ದಿನದ 4 ವಿಕೆಟ್‌ಗಳನ್ನು ಹಂಚಿಕೊಂಡರು. ಇವರಿಬ್ಬರ ಆಟಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದ್ದು, ಮೀಮ್ಸ್‌, ಶ್ಲಾಘನೆಯ ಪೋಸ್ಟ್‌ಗಳು ವೈರಲ್ ಆಗಿವೆ.

Scroll to load tweet…

ಕ್ಯಾಚ್‌ ಡ್ರಾಪ್‌ ಆದರೂ ಪಂದ್ಯ ಗೆಲ್ಲಿಸಿ ಹೀರೋ ಆದ ಸಿರಾಜ್‌

ಇಂಗ್ಲೆಂಡ್‌ನ 2ನೇ ಇನ್ನಿಂಗ್ಸ್‌ ವೇಳೆ ಭಾನುವಾರ ಹ್ಯಾರಿ ಬ್ರೂಕ್‌ ಬಾರಿಸಿದ ಚೆಂಡನ್ನು ಬೌಂಡರಿ ಲೈನ್‌ ಬಳಿ ಹಿಡಿಯುವ ಯತ್ನದಲ್ಲಿದ್ದ ಸಿರಾಜ್‌ ಎಡವಟ್ಟು ಮಾಡಿಕೊಂಡಿದ್ದರು. ಕ್ಯಾಚ್‌ ಪಡೆದರೂ ಕಾಲು ಲೈನ್‌ಗೆ ತಾಗಿದ್ದರಿಂದ ಅದು ಸಿಕ್ಸರ್‌ ಆಗಿತ್ತು. ಆ ಬಳಿಕ ಬ್ರೂಕ್‌ ಭಾರತೀಯ ಬೌಲರ್‌ಗಳ ಬೆಂಡೆತ್ತಿ ಶತಕ ಬಾರಿಸಿದ್ದರು. ಹಲವರ ಕಣ್ಣಿಗೆ ಸಿರಾಜ್‌ ವಿಲನ್‌ ಆಗಿ ಕಂಡಿದ್ದರು. ಆದರೆ ಬೌಲಿಂಗ್‌ನಲ್ಲಿ ಅಭೂತಪೂರ್ವ ಪ್ರದರ್ಶನ ತೋರಿದ ಸಿರಾಜ್‌, ಭಾರತಕ್ಕೆ ಪಂದ್ಯ ಗೆಲ್ಲಿಸಿಕೊಟ್ಟು ಹೀರೋ ಆಗಿ ಹೊರಹೊಮ್ಮಿದ್ದಾರೆ.

Scroll to load tweet…

ರೋಚಕತೆ ಕಟ್ಟಿಕೊಟ್ಟ 5ನೇ ದಿನದ 52 ಎಸೆತ

ಕೊನೆ ದಿನ ಒಟ್ಟು 52 ಎಸೆತಗಳನ್ನು ಎಸೆಯಲಾಯಿತು. ಮೊದಲೆರಡು ಎಸೆತಗಳಲ್ಲಿ ಬೌಂಡರಿ ಹೋದರೂ, ಆ ಬಳಿಕ ಪ್ರಸಿದ್ಧ್‌ ಹಾಗೂ ಸಿರಾಜ್ ಎಸೆದ ಪ್ರತಿ ಎಸೆತವೂ ನೋಡುಗರ ಎದೆಬಡಿತ ಹೆಚ್ಚಿಸುತ್ತಿತ್ತು. ಪ್ರತಿ ಎಸೆತ, ಪ್ರತಿ ರನ್‌ಗೂ ರೋಚಕತೆ ಹೆಚ್ಚುತ್ತಲೇ ಹೋಯಿತು. ಇಬ್ಬರು ಬೌಲರ್ಸ್‌ ಎರಡೂ ಕಡೆಯಿಂದ ಬೆಂಕಿಯುಂಡೆಗಳನ್ನು ಎಸೆಯುತ್ತಿದ್ದರೆ, ಇಂಗ್ಲೆಂಡ್‌ ಆಟಗಾರರು ವಿಕೆಟ್‌ ಉಳಿಸಿಕೊಳ್ಳಲು ಪರದಾಡುತ್ತಿದ್ದರು. 80 ಓವರ್‌ ಬಳಿಕ ಭಾರತಕ್ಕೆ ಹೊಸ ಚೆಂಡು ಪಡೆಯಲು ಅವಕಾಶವಿದ್ದರೂ, ಹಳೆ ಚೆಂಡಿನಲ್ಲೇ ದಾಳಿ ಮುಂದುವರಿಸಿತು. ಗೆಲುವಿಗೆ ಅಗತ್ಯವಿದ್ದ 4 ವಿಕೆಟ್‌ಗಳನ್ನು ಪಡೆದ ಭಾರತ, ವಿಜಯಮಾಲೆಯನ್ನು ತನ್ನ ಕೊರಳಿಗೇರಿಸಿಕೊಂಡಿತು.

ಟೆಸ್ಟ್‌ನ ಇತಿಹಾಸದಲ್ಲೇ ಮೊದಲ ಬಾರಿ ಒಂದಂಕಿ ರನ್‌ನಿಂದ ಗೆದ್ದ ಭಾರತ!

ಭಾರತ ತಂಡ ಟೆಸ್ಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿ ಒಂದಂಕಿ ರನ್‌ ಅಂತರದಲ್ಲಿ ಪಂದ್ಯದಲ್ಲಿ ಜಯಗಳಿಸಿತು. ತಂಡ 1932ರಿಂದಲೂ ಟೆಸ್ಟ್‌ ಆಡುತ್ತಿದೆ. ಇಂಗ್ಲೆಂಡ್‌ ವಿರುದ್ಧ 6 ರನ್‌ ಅಂತರದ ಗೆಲುವು, ತಂಡಕ್ಕೆ ಲಭಿಸಿದ ಅತಿ ಕನಿಷ್ಠ ಅಂತರದ ಜಯ. ಈ ಹಿಂದೆ 2004ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ 13 ರನ್‌ಗಳಲ್ಲಿ ಜಯಗಳಿಸಿತ್ತು.

Scroll to load tweet…

ಒಂದೇ ಕೈನಲ್ಲಿ ಬ್ಯಾಟ್‌ ಹಿಡಿದು ಬಂದ ವೋಕ್ಸ್‌!

ಕೊನೆ ದಿನದ ಕ್ಲೈಮ್ಯಾಕ್ಸ್‌ ಶೋನಲ್ಲಿ ಇಂಗ್ಲೆಂಡ್‌ನ ಕ್ರಿಸ್‌ ವೋಕ್ಸ್‌ ಪಾತ್ರ ಇನ್ನೊಂದಿಷ್ಟು ಕಾಲ ಕ್ರಿಕೆಟ್‌ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಭಾರತದ 2ನೇ ಇನ್ನಿಂಗ್ಸ್‌ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದ ವೋಕ್ಸ್‌ ಪಂದ್ಯದಿಂದಲೇ ಹೊರಬಿದ್ದಿದ್ದರು. ಆದರೆ ಸೋಮವಾರ ಇಂಗ್ಲೆಂಡ್‌ನ 9 ವಿಕೆಟ್‌ ಬಿದ್ದಾಗ ವೋಕ್ಸ್, ತಮ್ಮ ಕೈಯನ್ನು ತೂಗುಹಾಕಲಾಗಿದ್ದರೂ ಒಂದು ಕೈನಲ್ಲೇ ಬ್ಯಾಟ್‌ ಹಿಡಿದು ಕ್ರೀಸ್‌ಗೆ ಬಂದರು. ತಂಡವನ್ನು ಸೋಲಿನಿಂದ ಪಾರು ಮಾಡಲು ವೋಕ್ಸ್‌ ಪಟ್ಟ ಶ್ರಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.