ಇಂದೋರ್ ಟೆಸ್ಟ್: ಹ್ಯಾಟ್ರಿಕ್ ಹೊಸ್ತಿಲಲ್ಲಿ ಶಮಿ
ಮೊಹಮ್ಮದ್ ಶಮಿ ಮತ್ತೊಂದು ಹ್ಯಾಟ್ರಿಕ್ ಹೊಸ್ತಿಲಲ್ಲಿದ್ದಾರೆ. ಈಗಾಗಲೇ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧಿಸಿದ್ದ ಶಮಿ, ಇದೀಗ ಟೆಸ್ಟ್ ಕ್ರಿಕೆಟ್’ನಲ್ಲೂ ಹ್ಯಾಟ್ರಿಕ್ ಸಾಧಿಸಲು ಇನ್ನೊಂದು ವಿಕೆಟ್ ಅವಶ್ಯಕತೆಯಿದೆ. ಈ ಸಾಧನೆ ಮಾಡುತ್ತಾರಾ ಕಾದು ನೋಡಬೇಕಿದೆ...
ಬೆಂಗಳೂರು[ನ.14]: ದೀಪಕ್ ಚಹರ್ ಅಂತಿಮ ಟಿ20 ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಸರಿಯಾಗಿ ವಾರ ತುಂಬುವುದರೊಳಗಾಗಿ ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಇದೀಗ ಮತ್ತೊಂದು ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಹೊಸ್ತಿಲಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇತಿಹಾಸ ಬರೆಯುವ ತವಕದಲ್ಲಿದ್ದಾರೆ ಮೊಹಮ್ಮದ್ ಶಮಿ.
ಇದನ್ನೂ ಓದಿ: ಇಂದೋರ್ ಟೆಸ್ಟ್: ಬಾಂಗ್ಲಾಗೆ ಶಾಕ್ ಕೊಟ್ಟ ಟೀಂ ಇಂಡಿಯಾ ವೇಗಿಗಳು
ಹೌದು, ಇಂದೋರ್’ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿಗಳು ಭರ್ಜರಿ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಸೆಷನ್’ನಲ್ಲಿ 3 ವಿಕೆಟ್ ಪಡೆದಿದ್ದ ಟೀಂ ಇಂಡಿಯಾ ವೇಗಿಗಳು, ಎರಡನೇ ಸೆಷನ್’ನಲ್ಲೂ ಅಂತಹದ್ದೇ ಪ್ರದರ್ಶನ ತೋರಿದ್ದಾರೆ. ಚಹಾ ವಿರಾಮದ ಹೊಸ್ತಿಲಲ್ಲಿ ಮೊಹಮ್ಮದ್ ಶಮಿ ಸತತ ಎರಡು ಎಸೆತಗಳಲ್ಲಿ 2 ವಿಕೆಟ್ ಕಬಳಿಸಿದ್ದು, ಇತಿಹಾಸ ಬರೆಯುವ ತವಕದಲ್ಲಿದ್ದಾರೆ.
ಇದನ್ನೂ ಓದಿ: ಬಾಲ್ ಟ್ಯಾಂಪರಿಂಗ್: ಮತ್ತೊಬ್ಬ ಕ್ರಿಕೆಟಿಗ ಬ್ಯಾನ್..!.
ಈಗಾಗಲೇ ಮೊಹಮ್ಮದ್ ಶಮಿ ಐಸಿಸಿ ಏಕದಿನ ವಿಶ್ವಕಪ್ ವೇಳೆ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದೀಗ ಶಮಿ, ಬಾಂಗ್ಲಾ ವಿಕೆಟ್ ಕೀಪರ್ ಮುಷ್ಫೀಕುರ್ ರಹೀಮ್ ಹಾಗೂ ಮೆಹದಿ ಹಸನ್ ವಿಕೆಟ್ ಕಬಳಿಸುವ ಮೂಲಕ ಹ್ಯಾಟ್ರಿಕ್ ಹೊಸ್ತಿಲು ತಲುಪಿದ್ದಾರೆ.
ಚಹಾ ವಿರಾಮದ ವೇಳೆಗೆ ಬಾಂಗ್ಲಾದೇಶ 7 ವಿಕೆಟ್ ಕಳೆದುಕೊಂಡು 140 ರನ್ ಬಾರಿಸಿದ್ದು, ಇನ್ನೂರು ರನ್’ಗಳೊಳಗೆ ಕುಸಿಯುವ ಭೀತಿಯಲ್ಲಿದೆ.