ಹೊರರಾಜ್ಯದ ಬಸ್‌ಗಳಿಗೆ ಅನುಮತಿ ನೀಡಿದ್ದಕ್ಕೆ ಆಕ್ರೋಶ ಮುಂಬೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಸ್ ಮೇಲೆ ಕಲ್ಲು ತೂರಾಟ ಎಂಎನ್‌ಎಸ್ ಕಾರ್ಯಕರ್ತರಿಂದ ಗಾಜು ಪುಡಿ ಪುಡಿ
ಮುಂಬೈ(ಮಾ.16): ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳಿಗೆ ಆಟಗಾರರನ್ನು ಕರೆದೊಯ್ಯಲು ಪಂಚತಾರಾ (FiveStar) ಹೋಟೆಲ್‌ನ ಹೊರಗೆ ನಿಲ್ಲಿಸಿದ್ದ ದೆಹಲಿ ಕ್ಯಾಪಿಟಲ್ಸ್ (Delhi Capitals)ತಂಡಕ್ಕೆ ಸೇರಿದ ಒಂದು ಐಷಾರಾಮಿ ಬಸ್‌ನ ಗಾಜುಗಳನ್ನು ರಾಜ್ ಠಾಕ್ರೆ (Raj Thackeray)ಅವರ ಮಹಾರಾಷ್ಟ್ರ (Maharashtra) ನವನಿರ್ಮಾಣ ಸೇನೆಯ ಕಾರ್ಯಕರ್ತರು ಒಡೆದು ಹಾಕಿದ್ದಾರೆ. ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುವ ಉದ್ದೇಶಕ್ಕಾಗಿ ಹೊರ ರಾಜ್ಯಗಳ ಬಸ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಕಾರ್ಯಕರ್ತರು ಐಷಾರಾಮಿ ಬಸ್ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂಎನ್‌ಎಸ್-ವಾಹತುಕ್ ಸೇನಾ (ಸಾರಿಗೆ ವಿಭಾಗ)ದ ಸುಮಾರು ಅರ್ಧ ಡಜನ್ ಕಾರ್ಯಕರ್ತರು ಮಧ್ಯರಾತ್ರಿಗೂ ಮೊದಲು ಈ ಬಸ್‌ನ ನಿಲ್ಲಿಸಿದ ಪಂಚತಾರಾ ಹೊಟೇಲ್ ಬಳಿ ನುಸುಳಿದ್ದಾರೆ. ಬಳಿಕ ಬಸ್‌ನ ಮುಂಭಾಗದಲ್ಲಿ ತಮ್ಮ ಬೇಡಿಕೆಗಳ ಪೋಸ್ಟರ್‌ಗಳನ್ನು ಅಂಟಿಸಿ, ಘೋಷಣೆಗಳನ್ನು ಕೂಗಿ ಮತ್ತು ಗಾಜುಗಳನ್ನು ಒಡೆಯಲು ಪ್ರಾರಂಭಿಸಿದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ನಂತರ ಹೋರಾಟಗಾರ ಸಂಜಯ್ ನಾಯ್ಕ (Sanjay Naik) ಮಾತನಾಡಿ, ಹೊರ ರಾಜ್ಯಗಳ ಬಸ್ ಗಳನ್ನು ಬಾಡಿಗೆಗೆ ಪಡೆದು ಸ್ಥಳೀಯರನ್ನು ಉದ್ಯೋಗಾವಕಾಶದಿಂದ ವಂಚಿತರನ್ನಾಗಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.
IPL 2022: ಐಪಿಎಲ್‌ಗೆ ಸಿದ್ದತೆ ಶುರು, ಮುಂಬೈಗೆ ಬಹುತೇಕ ಆಟಗಾರರ ಆಗಮನ..!
ನಮ್ಮ ಪ್ರತಿಭಟನೆಗಳ ಹೊರತಾಗಿಯೂ, ಅವರು ದೆಹಲಿ ಮತ್ತು ಇತರ ಭಾಗಗಳಿಂದ ಇಲ್ಲಿಗೆ ಹಲವಾರು ಬಸ್‌ಗಳು ಮತ್ತು ಇತರ ಸಣ್ಣ ವಾಹನಗಳನ್ನು ತರಲು ಅನುಮತಿಸಿದ್ದಾರೆ, ಇದು ಸ್ಥಳೀಯ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ನಾಯ್ಕ ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ಎಂಎನ್‌ಎಸ್ ಕಾರ್ಯಕರ್ತರ ದಾಂಧಲೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು (police) ಹೆಚ್ಚಿನ ಬಸ್‌ಗಳಿಗೆ ಹಾನಿಯಾಗದಂತೆ ತಡೆಯಲು ಮುಂದಾದರು.ಅಲ್ಲದೇ ಕಲ್ಲು ತೂರಿದ ಆರೋಪದ ಮೇಲೆ ಮುಂಜಾನೆ ಕನಿಷ್ಠ ಮೂವರು ಎಂಎನ್‌ಎಸ್-ವಿಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
IPL 2022: ಎಲ್ಲರಿಗಿಂತ ಮೊದಲು ಕ್ವಾರಂಟೈನ್ ಪ್ರವೇಶಿಸಿದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್..!
15ನೇ ಆವೃತ್ತಿಯ ಐಪಿಎಲ್ (IPL 2022) ಟಿ20 ಟೂರ್ನಿ ಆರಂಭಗೊಳ್ಳಲು ಇನ್ನು 10 ದಿನ ಮಾತ್ರ ಬಾಕಿ ಇದೆ. ಈಗಾಗಲೇ ಎಲ್ಲಾ ತಂಡಗಳು ಮುಂಬೈನಲ್ಲಿ ತಮಗೆ ನಿಗದಿ ಮಾಡಿರುವ ಹೋಟೆಲ್ ತಲುಪಿವೆ. ಲಭ್ಯರಿದ್ದ ಆಟಗಾರರೊಂದಿಗೆ ವಾರದ ಹಿಂದೆಯೇ ಅಭ್ಯಾಸ ಆರಂಭಿಸಿದ್ದ ತಂಡಗಳಿಗೆ ಒಬ್ಬೊಬ್ಬರೆ ತಾರಾ ಆಟಗಾರರು ಸೇರಿಕೊಳ್ಳುತ್ತಿದ್ದು, ತಂಡಗಳ ಸಿದ್ಧತೆ ಇನ್ನು ತೀವ್ರತೆ ಪಡೆದುಕೊಳ್ಳಲಿದೆ. ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದ್ದು, ಮುಂಬೈನ ವಾಂಖೆಡೆ ಮೈದಾನದಲ್ಲಿ ಆರಂಭವಾಗಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡಗಳು ಸೆಣಸಾಟ ನಡೆಸಲಿವೆ.
ವಿದೇಶಗಳಿಂದ ಆಗಮಿಸಿದ ಆಟಗಾರರಿಗೆ 5 ದಿನ, ಭಾರತೀಯ ಆಟಗಾರರಿಗೆ 3 ದಿನಗಳ ಕಠಿಣ ಕ್ವಾರಂಟೈನ್ ಸೂಚಿಸಲಾಗಿದೆ. ಇನ್ನು ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಮೂರೇ ದಿನಕ್ಕೆ ಮುಕ್ತಾಯಗೊಂಡ ಬಳಿಕ ಭಾರತ ತಂಡದ ಆಟಗಾರರು ಬೆಂಗಳೂರಿನಿಂದ ನೇರವಾಗಿ ಮುಂಬೈಗೆ ತೆರಳಿದ್ದು, ತಮ್ಮ ತಮ್ಮ ಐಪಿಎಲ್ ತಂಡಗಳನ್ನು ಕೂಡಿಕೊಂಡಿದ್ದಾರೆ. ಮಂಗಳವಾರ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ(Rohit Sharma), ತಾರಾ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ತಂಡ ಕೂಡಿಕೊಂಡರು. ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಸಹ ತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ.