* ಇಂದಿನಿಂದ ಭಾರತ-ಆಸ್ಟ್ರೇಲಿಯಾ ಮಹಿಳಾ ಟೆಸ್ಟ್ ಪಂದ್ಯ* ಇದೇ ಮೊದಲ ಬಾರಿಗೆ ಪಿಂಕ್ ಬಾಲ್ ಟೆಸ್ಟ್‌ ಆಡಲು ಸಜ್ಜಾದ ಮಿಥಾಲಿ ಪಡೆ* ಭಾರತ ತಂಡಕ್ಕೆ ಕಾಡಲಿದೆಯಾ ಹರ್ಮನ್‌ಪ್ರೀತ್ ಕೌರ್ ಅನುಪಸ್ಥಿತಿ

ಗೋಲ್ಡ್‌ ಕೋಸ್ಟ್(ಸೆ.30)‌: ಭಾರತ ಮಹಿಳಾ ಕ್ರಿಕೆಟ್‌ ತಂಡ (Indian Women's Cricket Team) 15 ವರ್ಷಗಳ ಬಳಿಕ ಆಸ್ಪ್ರೇಲಿಯಾ (Australia) ವಿರುದ್ಧ ಟೆಸ್ಟ್‌ ಪಂದ್ಯವನ್ನಾಡಲು ಉತ್ಸುಕಗೊಂಡಿದೆ. ಇದು ಹಗಲು-ರಾತ್ರಿ ಟೆಸ್ಟ್‌ ಆಗಿದ್ದು, ಭಾರತ ಚೊಚ್ಚಲ ಬಾರಿಗೆ ಪಿಂಕ್‌ ಬಾಲ್‌ ಪಂದ್ಯವನ್ನಾಡಲಿದೆ. ಆಸೀಸ್‌ ವಿರುದ್ಧ ಏಕದಿನ ಸರಣಿಯ ಅಂತಿಮ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಮಿಥಾಲಿ ರಾಜ್‌ (Mithali Raj) ಪಡೆ, ಟೆಸ್ಟ್‌ನಲ್ಲೂ ಉತ್ತಮ ಆಟವಾಡಲು ಎದುರು ನೋಡುತ್ತಿದೆ.

ಏಕದಿನ ಸರಣಿಯ ಬಳಿಕ ಭಾರತ ಕೇವಲ 2 ಬಾರಿಯಷ್ಟೇ ನೆಟ್ಸ್‌ನಲ್ಲಿ ಪಿಂಕ್‌ ಬಾಲ್‌ (Pink Ball Test) ಬಳಸಿ ಅಭ್ಯಾಸ ನಡೆಸಿದೆ. ಚೆಂಡು ಹೇಗೆ ವರ್ತಿಸಲಿದೆ ಎನ್ನುವ ಬಗ್ಗೆ ತಂಡಕ್ಕೆ ಹೆಚ್ಚಿನ ಮಾಹಿತಿ ಇಲ್ಲ. ಆಸ್ಪ್ರೇಲಿಯಾ ತಂಡ ಈಗಾಗಲೇ ಹಗಲು-ರಾತ್ರಿ ಟೆಸ್ಟ್‌ ಆಡಿದೆಯಾದರೂ ಅದು 2017ರಲ್ಲಿ. ಹೀಗಾಗಿ ಆಸೀಸ್‌ಗೂ ಇದು ಹೊಸ ಅನುಭವವಾಗಲಿದೆ.

Scroll to load tweet…

ಬರೋಬ್ಬರಿ 7 ವರ್ಷಗಳ ಬಳಿಕ ಮಿಥಾಲಿ ರಾಜ್‌ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್‌ ತಂಡವು ಕಳೆದ ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್ ಪಂದ್ಯವನ್ನಾಡಿತ್ತು. 4 ದಿನಗಳ ಟೆಸ್ಟ್‌ ಪಂದ್ಯ ಸಾಕಷ್ಟು ರೋಚಕ ಹೋರಾಟಕ್ಕೆ ಕಾರಣವಾಗಿತ್ತು. ಆ ಟೆಸ್ಟ್‌ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿತ್ತು. ಆದರೆ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದ ಸವಾಲನ್ನು ಭಾರತ ಹೇಗೆ ಎದುರಿಸಲಿದೆ ಎನ್ನುವ ಕುತೂಹಲ ಜೋರಾಗಿದೆ.

Women's Cricket ಆಸ್ಟ್ರೇಲಿಯಾ ಎದುರಿನ ಪಿಂಕ್ ಬಾಲ್ ಟೆಸ್ಟ್‌ನಿಂದ ಹೊರಬಿದ್ದ ಹರ್ಮನ್‌ಪ್ರೀತ್ ಕೌರ್

ಈ ಪಂದ್ಯವನ್ನು ನಾನು ಟ್ರಯಲ್‌ ಪಂದ್ಯವೆಂದು ಕರೆಯಲು ಇಚ್ಚಿಸುತ್ತೇನೆ, ಹಾಗೆಯೇ ಈ ಪಂದ್ಯದಲ್ಲೇ ಭಾರತೀಯ ಆಟಗಾರ್ತಿಯರು ಅಬ್ಬರಿಸುವ ವಿಶ್ವಾಸವಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ನಮ್ಮ ಆಟಗಾರ್ತಿಯರು ರೆಡ್ ಬಾಲ್‌ ಪಂದ್ಯಗಳನ್ನಾಡಿದ್ದು ಅಪರೂಪ. ಅದರಲ್ಲೂ ಪಿಂಕ್‌ ಬಾಲ್ ಟೆಸ್ಟ್ ಪಂದ್ಯವು ಸಾಕಷ್ಟು ವಿಭಿನ್ನ ಪಂದ್ಯವಾಗಿದ್ದು, ಸಾಕಷ್ಟು ಕಠಿಣ ಸವಾಲು ಎದುರಾಗಲಿದೆ ಎಂದು ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್ ಸದಸ್ಯೆ ಶಾಂತಾ ರಂಗಸ್ವಾಮಿ ತಿಳಿಸಿದ್ದಾರೆ.

Scroll to load tweet…

ಭಾರತಕ್ಕಿಂತ ಆಸ್ಟ್ರೇಲಿಯಾಗೆ ಹೆಚ್ಚು ಟೆಸ್ಟ್‌ ಪಂದ್ಯವನ್ನಾಡಿದ ಅನುಭವವಿದೆಯಾದರೂ, ಈಗ ಆಸೀಸ್ ತಂಡದಲ್ಲಿರುವವರು ಹೆಚ್ಚು ಟೆಸ್ಟ್‌ ಪಂದ್ಯವನ್ನಾಡಿಲ್ಲ. ಕೆಲವು ಪ್ರಮುಖ ಆಸೀಸ್‌ ಆಟಗಾರ್ತಿಯರು ಈ ಟೆಸ್ಟ್‌ ಪಂದ್ಯದಿಂದ ವಂಚಿತರಾಗಿದ್ದಾರೆ. ಏಕದಿನ ಸರಣಿಯಲ್ಲಿ ಭಾರತ ತೋರಿದ ಪ್ರದರ್ಶನ ಮುಂದುವರೆಸಿದರೆ ಆಸ್ಟ್ರೇಲಿಯಾ ತಂಡವನ್ನು ಮಣಿಸಬಹುದಾಗಿದೆ ಎಂದು ಶಾಂತಾ ರಂಗಸ್ವಾಮಿ ತಿಳಿಸಿದ್ದಾರೆ. ಶಾಂತಾ ರಂಗಸ್ವಾಮಿ ನೇತೃತ್ವದ ಭಾರತೀಯ ಮಹಿಳಾ ಟೀಂ ಇಂಡಿಯಾ 1976ರಲ್ಲಿ ಮೊದಲ ಟೆಸ್ಟ್ ಗೆಲುವನ್ನು ದಾಖಲಿಸಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ. 

2006ರಲ್ಲಿ ಭಾರತ-ಆಸ್ಪ್ರೇಲಿಯಾ ಕೊನೆ ಬಾರಿಗೆ ಮುಖಾಮುಖಿಯಾದಾಗ ಮಿಥಾಲಿ ಹಾಗೂ ಜೂಲನ್‌ ಗೋಸ್ವಾಮಿ ಆಡಿದ್ದರು. ಈ ಇಬ್ಬರು ಈ ಪಂದ್ಯದಲ್ಲೂ ಭಾರತದ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಟೀಂ ಇಂಡಿಯಾದ ಕೆಲ ಹೊಸ ಪ್ರತಿಭೆಗಳು ನಿರೀಕ್ಷೆ ಮೂಡಿಸಿದ್ದಾರೆ. ಹರ್ಮನ್‌ಪ್ರೀತ್‌ ಕೌರ್‌ ಅಲಭ್ಯರಾಗಲಿದ್ದು, ಅವರ ಅನುಪಸ್ಥಿತಿ ಭಾರತವನ್ನು ಕಾಡಲಿದೆ.

ಪಂದ್ಯ ಆರಂಭ: ಬೆಳಗ್ಗೆ 10ಕ್ಕೆ

ನೇರ ಪ್ರಸಾರ: ಸೋನಿ ಸಿಕ್ಸ್‌