* ಭಾರತ-ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯ ಆರಂಭಕ್ಕೆ ಕ್ಷಣಗಣನೆ* ಮಹಿಳಾ ಟೆಸ್ಟ್ ಆರಂಭಕ್ಕೂ ಮುನ್ನ ಮಿಥಾಲಿ ರಾಜ್‌ ಪಡೆಗೆ ಎದುರಾಯ್ತು ಆಘಾತ* ಪಿಂಕ್-ಬಾಲ್ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಆಲ್ರೌಂಡರ್ ಹರ್ಮನ್‌ಪ್ರೀತ್ ಕೌರ್

ಕ್ಯಾನ್‌ಬೆರ್ರಾ(ಸೆ.29): ಆಸ್ಟ್ರೇಲಿಯಾ ವಿರುದ್ದ ಸೆಪ್ಟೆಂಬರ್ 30ರಿಂದ ಆರಂಭವಾಗಲಿರುವ ಏಕೈಕ ಟೆಸ್ಟ್‌ ಪಂದ್ಯದಿಂದ ಭಾರತ ಮಹಿಳಾ ತಂಡದ ತಾರಾ ಆಲ್ರೌಂಡರ್ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಹೊರಬಿದ್ದಿದ್ದಾರೆ. ಆಸೀಸ್‌ ಎದುರಿನ ಟೆಸ್ಟ್ ಪಂದ್ಯ ಆರಂಭಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ ಹರ್ಮನ್‌ಪ್ರೀತ್ ಕೌರ್ ತಂಡದಿಂದ ಹೊರಬಿದ್ದಿದ್ದು, ಮಿಥಾಲಿ ರಾಜ್‌ (Mithali Raj) ಪಡೆಗೆ ಕೊಂಚ ಹಿನ್ನೆಡೆಯಾಗಿ ಪರಿಣಮಿಸಿದೆ

ಹರ್ಮನ್‌ಪ್ರೀತ್ ಕೌರ್ ಅಭ್ಯಾಸ ನಡೆಸುವ ವೇಳೆ ಹೆಬ್ಬೆಟ್ಟಿನ ಗಾಯ ಮಾಡಿಕೊಂಡಿದ್ದರು. ಇನ್ನೂ ಹರ್ಮನ್‌ ಸಂಪೂರ್ಣ ಗುಣಮುಖರಾಗಿಲ್ಲ. ಈ ವಾರವಷ್ಟೇ ಮುಕ್ತಾಯವಾದ ಸೀಮಿತ ಓವರ್‌ಗಳ ಸರಣಿಯಿಂದಲೂ ಈ ಕಾರಣಕ್ಕಾಗಿಯೇ ಹೊರಗುಳಿದಿದ್ದರು ಎಂದು ಭಾರತ ಮಹಿಳಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ತಿಳಿಸಿದ್ದಾರೆ. 

ಮಿಥಾಲಿ ರಾಜ್‌ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು (Indian Women's Cricket) ಇದೇ ಮೊದಲ ಬಾರಿಗೆ ಪಿಂಕ್‌ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ. ಕ್ವೀನ್ಸ್‌ಲ್ಯಾಂಡ್‌ನಲ್ಲಿ ಆಸ್ಟ್ರೇಲಿಯಾ (Australia) ವಿರುದ್ದ ಮಿಥಾಲಿ ಪಡೆ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡಲಿದೆ. ಬೆಂಗಳೂರಿನಲ್ಲಿ ಕ್ಯಾಂಪ್‌ನಲ್ಲಿರುವಾಗ ಪಿಂಕ್‌ ಬಾಲ್‌ (Pink Ball Test) ಅಭ್ಯಾಸ ನಡೆಸಿರಲಿಲ್ಲ. ಏಕದಿನ ಕ್ರಿಕೆಟ್‌ ಸರಣಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೆವು ಎಂದು ಮಿಥಾಲಿ ತಿಳಿಸಿದ್ದಾರೆ.

ನಾವು ಬೆಂಗಳೂರಿನ ಕ್ಯಾಂಪ್‌ನಲ್ಲಿದ್ದಾಗ ಏಕದಿನ ಸರಣಿಗೆ ಹೆಚ್ಚಿನ ಸಿದ್ದತೆ ನಡೆಸಿದ್ದೆವು. ವೈಟ್‌ ಬಾಲ್‌ನಲ್ಲಿ ಅಭ್ಯಾಸ ನಡೆಸಿದ್ದೆವು. ಹಗಲು-ರಾತ್ರಿಯ ಟೆಸ್ಟ್‌ ಪಂದ್ಯಕ್ಕಾಗಿ ಲೈಟ್ಸ್‌ ಕೆಳಗೆ ಕೆಲಕಾಲ ಅಭ್ಯಾಸ ನಡೆಸಿದ್ದೇವೆ. ಆದರೆ ನಮ್ಮ ಸಿದ್ದತೆ ಹಾಗೂ ಗಮನ ಏಕದಿನ ಸರಣಿಯ ಮೇಲಿತ್ತು ಎಂದು ಮಿಥಾಲಿ ಹೇಳಿದ್ದಾರೆ.

IPL 2021 ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ..! ಏಕಕಾಲದಲ್ಲಿ ನಡೆಯಲಿವೆ 2 ಪಂದ್ಯ.!

ಪಿಂಕ್ ಬಾಲ್ ಟೆಸ್ಟ್‌ ಪಂದ್ಯ ಆರಂಭಕ್ಕೆ ಕೆಲ ದಿನಗಳಿದ್ದಾಗ, ಅಂದರೆ ಕಳೆದ ಮಂಗಳವಾರ(ಸೆ.28) ಭಾರತೀಯ ಆಟಗಾರ್ತಿಯರು ಪಿಂಕ್‌ ಬಾಲ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ. ಪ್ರತಿಯೊಬ್ಬರಿಗೂ ಇದೊಂದು ರೀತಿಯ ವಿಭಿನ್ನ ಅನುಭವ. ಯಾಕೆಂದರೆ ಯಾರೂ ಕೂಡಾ ಈ ಮೊದಲು ಪಿಂಕ್‌ ಬಾಲ್‌ನಲ್ಲಿ ಅಭ್ಯಾಸ ನಡೆಸಿರಲಿಲ್ಲ. ಹೀಗಿದ್ದೂ ಪಿಂಕ್‌ ಟೆಸ್ಟ್ ಸವಾಲು ಸ್ವೀಕರಿಸಲು ಸಿದ್ದವಿರುವುದಾಗಿ ಮಿಥಾಲಿ ರಾಜ್ ತಿಳಿಸಿದ್ದಾರೆ.

ನಮ್ಮ ತಂಡದಲ್ಲಿ ಮೂವರು ಗುಣಮಟ್ಟದ ವೇಗದ ಬೌಲರ್‌ಗಳಿದ್ದಾರೆ. ಏಕದಿನ ಸರಣಿಯಲ್ಲಿ ಈ ಮೂವರು ಉತ್ತಮ ಪ್ರದರ್ಶನ ತೋರಿದ್ದಾರೆ. ಜೂಲನ್ ಗೋಸ್ವಾಮಿ ಅಪಾರ ಅನುಭವ ಹೊಂದಿದ್ದಾರೆ. ಮೇಘನಾ ಸಿಂಗ್ ಹಾಗೂ ಪೂಜಾ ವಸ್ತ್ರಾಕರ್ ಕೂಡಾ ಉತ್ತಮ ದಾಳಿ ನಡೆಸಬಲ್ಲರು. ಇವರಷ್ಟೇ ಅಲ್ಲದೇ ಶಿಖಾ ರೆಡ್ಡಿ ಕೂಡಾ ವೇಗದ ಬೌಲಿಂಗ್ ದಾಳಿ ನಡೆಸಬಲ್ಲರು ಎಂದು ಮಿಥಾಲಿ ವೇಗದ ಬೌಲಿಂಗ್ ಪಡೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ