* 4ನೇ ಟಿ20 ಪಂದ್ಯದಲ್ಲಿ ವಿಂಡೀಸ್ ಎದುರು ರೋಚಕ ಗೆಲುವು ಸಾಧಿಸಿದ ಆಸ್ಟ್ರೇಲಿಯಾ* ಮಿಚೆಲ್‌ ಮಾರ್ಶ್‌ ಮಿಂಚಿನಾಟಕ್ಕೆ ಒಲಿದ ಗೆಲುವು* ಈಗಾಗಲೇ ಟಿ20 ಸರಣಿ ಗೆದ್ದಿರುವ ವೆಸ್ಟ್ ಇಂಡೀಸ್‌ ಕ್ರಿಕೆಟ್ ತಂಡ 

ಸೇಂಟ್ ಲೂಸಿಯಾ(ಜು.15): ಮಿಚೆಲ್‌ ಮಾರ್ಶ್‌ ಆಲ್ರೌಂಡ್ ಆಟ ಹಾಗೂ ಕೊನೆಯ ಓವರ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ ಮಾರಕ ದಾಳಿಯ ನೆರವಿನಿಂದ ವೆಸ್ಟ್ ಇಂಡೀಸ್‌ ಎದುರಿನ ನಾಲ್ಕನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ 4 ರನ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಆ್ಯರೋನ್‌ ಫಿಂಚ್‌ ಪಡೆ ವಿಂಡೀಸ್‌ ನೆಲದಲ್ಲಿ ಗೆಲುವಿನ ಖಾತೆ ತೆರೆದಿದೆ.

ನಾಲ್ಕನೇ ಟಿ20 ಪಂದ್ಯ ಆರಂಭಕ್ಕೂ ಮುನ್ನವೇ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು 3-0 ಅಂತರದಲ್ಲಿ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಆಸ್ಟ್ರೇಲಿಯಾ ತಂಡವು ನಾಯಕ ಆ್ಯರೋನ್‌ ಫಿಂಚ್‌ ಆಕರ್ಷಕ ಅರ್ಧಶತಕ(53) ಹಾಗೂ ಮಿಚೆಲ್ ಮಾರ್ಶ್‌(75) ಬಾರಿಸಿದ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಕಳೆದುಕೊಂಡು 189 ರನ್‌ ಬಾರಿಸಿತ್ತು. 

Scroll to load tweet…

ಟಿ20 ಕ್ರಿಕೆಟ್: ಆಸೀಸ್ ಎದುರು ರೋಚಕ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್

ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಕೂಡಾ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಲಿಂಡ್ಲ್‌ ಸಿಮೊನ್ಸ್ ಹಾಗೂ ಎವಿನ್ ಲೆವಿಸ್‌ 62 ರನ್‌ಗಳ ಜತೆಯಾಟವಾಡುವ ಮೂಲಕ ಸ್ಪೋಟಕ ಆರಂಭವನ್ನೇ ಒದಗಿಸಿಕೊಟ್ಟರು. ಲೆವಿಸ್(31) ವಿಕೆಟ್ ಪತನದ ಬೆನ್ನಲ್ಲೇ ಗೇಲ್‌(01) ಹಾಗೂ ಫ್ಲೇಚರ್‌(6) ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು. ಸಿಮೊನ್ಸ್‌ 48 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 72 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ನಾಯಕ ಪೂರನ್‌ ಆಟ ಕೇವಲ 16 ರನ್‌ಗಳಿಗೆ ಸೀಮಿತವಾಯಿತು.

Scroll to load tweet…

ರೋಚಕತೆ ಹೆಚ್ಚಿಸಿದ ಕೊನೆಯ 2 ಓವರ್‌: ಕೊನೆಯ ಎರಡು ಓವರ್‌ನಲ್ಲಿ ವೆಸ್ಟ್‌ ಇಂಡೀಸ್ ತಂಡಕ್ಕೆ ಗೆಲ್ಲಲು 36 ರನ್‌ಗಳ ಅಗತ್ಯವಿತ್ತು. ರಿಲೇ ಮೆರಿಡಿತ್ ಎಸೆದ 19ನೇ ಓವರ್‌ನಲ್ಲಿ ರಸೆಲ್ ಒಂದು ಹಾಗೂ ಫ್ಯಾಬಿಯನ್ ಅಲೆನ್ 3 ಹೀಗೆ ಒಂದೇ ಓವರ್‌ನಲ್ಲಿ 4 ಸಿಕ್ಸರ್ ಚಚ್ಚಿದರು. ಕೊನೆಯ ಎಸೆತದಲ್ಲಿ ಅಲೆನ್ ವಿಕೆಟ್‌ ಒಪ್ಪಿಸಿದರು. 19ನೇ ಓವರ್‌ನಲ್ಲಿ ವಿಂಡೀಸ್‌ 25 ರನ್‌ ಕಲೆಹಾಕಿತು. ಹೀಗಾಗಿ ಕೊನೆಯ ಓವರ್‌ನಲ್ಲಿ ವಿಂಡೀಸ್‌ ಗೆಲ್ಲಲು ಕೇವಲ 11 ರನ್‌ಗಳ ಅಗತ್ಯವಿತ್ತು. 20ನೇ ಓವರ್‌ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತ ಮಿಚೆಲ್‌ ಸ್ಟಾರ್ಕ್‌ ಮೊದಲ 5 ಎಸೆತಗಳನ್ನು ಚುಕ್ಕಿ ಎಸೆತ ಹಾಕುವ ಮೂಲಕ ಪಂದ್ಯ ಆಸೀಸ್‌ ಪರ ವಾಲುವಂತೆ ಮಾಡಿದರು. ರಸೆಲ್‌ ಕೊನೆಯ ಎಸೆತದಲ್ಲಿ ಸಿಕ್ಸರ್‌ ಬಾರಿಸಿದರಾದರೂ ತಂಡ 4 ರನ್‌ಗಳ ಅಂತರದಿಂದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.

ಬ್ಯಾಟಿಂಗ್‌ನಲ್ಲಿ 75 ರನ್‌ ಹಾಗೂ ಬೌಲಿಂಗ್‌ನಲ್ಲಿ 3 ವಿಕೆಟ್ ಕಬಳಿಸಿದ ಮಿಚೆಲ್‌ ಮಾರ್ಶ್‌ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.