ಆಕ್ಲೆಂಡ್‌[ಜ.27]:  ಕರ್ನಾಟಕ ರಾಜಕೀಯ ನಾಯಕರು ಆಡುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳಿಗೆ, ಟ್ರೋಲ್‌ಗಳಿಗೆ ತುತ್ತಾಗುವುದು ಹೊಸದೇನಲ್ಲ. ಆದರೆ ಇತ್ತೀಚಿನ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಭಾರೀ ಸದ್ದು ಮಾಡಿದ್ದ ‘ಹೌದು ಹುಲಿಯಾ’ ಮತ್ತು ಇತ್ತೀಚೆಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಸುದ್ದಿಗೋಷ್ಠಿಯೊಂದರ ವೇಳೆ ಬಳಸಿದ್ದ ‘ಮಿಣಿ ಮಿಡಿ ಪೌಡರ್‌’ ಹೇಳಿಕೆಗಳು ಇದೀಗ ಕರ್ನಾಟಕ ಮಾತ್ರವಲ್ಲ, ಭಾರತದ ಗಡಿಯನ್ನೂ ದಾಟಿ ದೂರದ ನ್ಯೂಜಿಲೆಂಡ್‌ನಲ್ಲಿ ಸದ್ದು ಮಾಡಿದೆ.

ಹೌದು. ಭಾನುವಾರ ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವೆ ನಡೆದ 2ನೇ ಟಿ20 ಪಂದ್ಯದ ವೇಳೆ, ಕ್ರೀಡಾಂಗಣದಲ್ಲೇ ‘ಹೌದು ಹುಲಿಯಾ’ ಮತ್ತು ‘ಮಿಣಿ ಮಿಣಿ ಪೌಡರ್‌’ ಪೋಸ್ಟರ್‌ಗಳು ಕಾಣಿಸಿಕೊಂಡು, ಕರ್ನಾಟಕದ ಟೀವಿ ವೀಕ್ಷಕರನ್ನು ಅಚ್ಚರಿಗೆ ಗುರಿ ಮಾಡಿತು. ಮೈದಾನದಲ್ಲಿ ಕನ್ನಡದ ಪೋಸ್ಟರ್‌ಗಳು ಮತ್ತು ಅದರಲ್ಲಿನ ಟ್ರೋಲ್‌ ಭಾರೀ ಚರ್ಚೆಗೂ ಕಾರಣವಾಯಿತು.

ಪಂದ್ಯ ವೀಕ್ಷಣೆಗೆಂದು ಬಂದಿದ್ದ ಇಬ್ಬರು ಕನ್ನಡಿಗರು, ಪಂದ್ಯ ನಡೆಯುವ ವೇಳೆಯೇ ‘ಹೌದು ಹುಲಿಯಾ’ ಮತ್ತು ‘ಮಿಣಿ ಮಿಣಿ ಪೌಡರ್‌’ ಎಂಬ ಎರಡು ಪೋಸ್ಟರ್‌ಗಳನ್ನು ಹಿಡಿದುಕೊಂಡು, ಜೋರಾಗಿ ಹರ್ಷಚಿತ್ತರಾಗಿ ಕೂಗುತ್ತಾ ಕ್ಯಾಮೆರಾಗೆ ಫೋಸ್‌ ನೀಡಿದರು. ಇದು ಸಹಜವಾಗಿಯೇ ದೇಶ ವಿದೇಶಗಳಲ್ಲಿ ಟೀವಿ ಮೂಲಕ ಪಂದ್ಯ ವೀಕ್ಷಿಸುತ್ತಿದ್ದ ಕನ್ನಡಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯ್ತು. ಈ ವಿಡಿಯೋ ಇದೀಗ ವೈರಲ್‌ ಆಗಿದೆ.

'ಪಾಂಡ್ಸ್ ಪೌಡರನ್ನೇ ಮೀರಿಸಿದೆ ಮಿಣಿಮಿಣಿ ಪೌಡರ್'; ಎಚ್‌ಡಿಕೆ ಕಾಲೆಳೆದ ಯತ್ನಾಳ್.!

ಹೌದು ಹುಲಿಯಾ: ಉಪ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಮಾಡುವಾಗ ಉತ್ತರ ಕರ್ನಾಟಕ ಭಾಗದ ರೈತನೊಬ್ಬ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣಕ್ಕೆ ‘ಹೌದು ಹುಲಿಯಾ’ ಎಂದು ಪ್ರತಿಕ್ರಿಯಿಸಿದ್ದರು. ಆ ಸಂದರ್ಭಗಳಲ್ಲಿ ಯಾವುದೇ ಚರ್ಚೆ ಇದ್ದರೂ ‘ಹೌದು ಹುಲಿಯಾ’ ಎಂಬ ಶಬ್ದ ಹೊರಬರುತ್ತಿತ್ತು. ಇದು ಜಾಲತಾಣಗಳಲ್ಲಿ ಟ್ರೋಲ್‌ ಆಗಿತ್ತು.

ಮಿಣಿ ಮಿಣಿ ಪೌಡರ್‌:

ಇತ್ತೀಚೆಗಷ್ಟೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಇಟ್ಟಿದ್ದ ಘಟನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಕುಮಾರಸ್ವಾಮಿ ಅವರು ಬಾಂಬ್‌ ತಯಾರಿಸಲು ಯಾವುದೇ ಸ್ಫೋಟಕ ಪದಾರ್ಥ ಬಳಸಿಲ್ಲ. ಅಲ್ಲಿ ಬಳಸಿದ್ದು ‘ಮಿಣಿ ಮಿಣಿ ಪೌಡರ್‌’ ಎಂದು ಹೇಳಿದ್ದರು. ಈ ಬಗ್ಗೆ ಹಲವು ಟ್ರೋಲ್‌ಗಳನ್ನು ಮಾಡಲಾಗಿತ್ತು.

ಇಂಥ ಹೇಳಿಕೆಗಳು ವಾಟ್ಸಪ್‌, ಟ್ವೀಟರ್‌, ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆವೈರಲ್‌ ಆಗುವುದು ಸಾಮಾನ್ಯ. ಆದರೆ ಈ ಟ್ರೋಲ್‌ಗಳು ವಿದೇಶಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸದ್ದು ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.