Wrestlers Protest: 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಬೆಂಬಲ
ಕುಸ್ತಿಪಟುಗಳ ಬೆಂಬಲಕ್ಕೆ ನಿಂತ 1983ರ ಏಕದಿನ ವಿಶ್ವಕಪ್ ತಂಡ
ಬ್ರಿಜ್‌ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿರುವ ಕುಸ್ತಿಪಟುಗಳು
ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ತಂಡದ ಸದಸ್ಯರು
ನವದೆಹಲಿ(ಜೂ.03): ಭಾರತೀಯ ಕುಸ್ತಿಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕುಸ್ತಿಪಟುಗಳು ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಸರ್ಕಾರವು ಲೈಂಗಿಕ ಕಿರುಕುಳ ನೀಡಿದ ಆರೋಪಿ ಬ್ರಿಜ್‌ಭೂಷಣ್ ಸಿಂಗ್ ಬಂಧಿಸದೇ ಇರುವ ಬೆನ್ನಲ್ಲೇ ಕುಸ್ತಿಪಟುಗಳು ತಾವು ಜಯಿಸಿದ್ದ ಪ್ರಶಸ್ತಿಗಳನ್ನು ಗಂಗಾ ನದಿಗೆ ಎಸೆಯಲು ಮುಂದಾಗಿದ್ದರು. ಇದರ ಬೆನ್ನಲ್ಲೇ ಕುಸ್ತಿಪಟುಗಳ ಬೆಂಬಲಕ್ಕೆ ನಿಧಾನವಾಗಿ ಹಲವು ವಿವಿಧ ಕ್ಷೇತ್ರದ ಕ್ರೀಡಾಪಟುಗಳು ಬೆಂಬಲಕ್ಕೆ ನಿಲ್ಲುತ್ತಿದ್ದಾರೆ.
ಹೌದು, ಇದೀಗ ಬ್ರಿಜ್‌ಭೂಷಣ್ ವಿರುದ್ಧ ಪ್ರತಿಭಟಿಸುತ್ತಿರುವ ಕುಸ್ತಿಪಟುಗಳನ್ನು 1983ರ ಏಕದಿನ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡ ಬೆಂಬಲಿಸಿದ್ದು, ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ವಿನಂತಿಸಿದೆ. ಈ ಬಗ್ಗೆ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ತಂಡದ ಸದಸ್ಯರು, ‘ಸರ್ಕಾರ ನಿಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ ಕಂಡು ನೋವಾಗಿದೆ. ಆದರೆ ಸತತ ಪರಿಶ್ರಮ, ತ್ಯಾಗ, ಬದ್ಧತೆಯಿಂದ ಗಳಿಸಿದ ಪದಕಗಳನ್ನು ಗಂಗಾ ನದಿಗೆ ಎಸೆಯುವ ನಿರ್ಧಾರ ಬೇಡ. ಅದು ನಿಮ್ಮ ಸಾಧನೆ ಮಾತ್ರವಲ್ಲ, ದೇಶದ ಗೌರವ ಕೂಡಾ ಆಗಿದೆ. ಇಂತಹ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಕಾನೂನಿನ ಮೂಲಕ ಹೋರಾಟ ಗೆಲ್ಲುವ ಆಶಾವಾದ ಇರಲಿ’ ಎಂದಿದ್ದಾರೆ.
ನಾನು ವೈಯುಕ್ತಿವಾಗಿ ಏನನ್ನೂ ಹೇಳುತ್ತಿಲ್ಲ, ಆದರೆ ನಮ್ಮ ಇಡೀ 1983ರ ವಿಶ್ವಕಪ್ ವಿಜೇತ ತಂಡವು ನಮ್ಮ ಈ ಹೇಳಿಕೆಗೆ ಬದ್ದವಾಗಿದೆ ಎಂದು 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಹೇಳಿದ್ದಾರೆ. ಇಂಗ್ಲೆಂಡ್‌ನಲ್ಲಿ 1983ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕ್ಲೈವ್ ಲಾಯ್ಡ್ ನೇತೃತ್ವದ ಬಲಾಢ್ಯ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್, ಬಜರಂಗ್ ಫೂನಿಯಾ ನೇತೃತ್ವದಲ್ಲಿ ಕುಸ್ತಿಪಟುಗಳು ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕಳೆದೊಂದು ತಿಂಗಳಿನಿಂದ ರಾಷ್ಟ್ರ ರಾಜಧಾನಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
16 ಫೆಡರೇಶನ್‌ಗಳಲ್ಲಿ ಆಂತರಿಕ ದೂರು ಸಮಿತಿಯೇ ಇಲ್ಲ!
ಕುಸ್ತಿಪಟುಗಳ ಆರೋಪದ ಬಗ್ಗೆ ತನಿಖೆಗೆ ನೇಮಿಸಲಾಗಿದ್ದ ಮೇರಿ ಕೋಮ್ ನೇತೃತ್ವದ ಸಮಿತಿಯು ಭಾರತೀಯ ಕುಸ್ತಿ ಫೆಡರೇಶನ್‌ನಲ್ಲಿ ಆಂತರಿಕ ದೂರು ಸಮಿತಿ(ಐಸಿಸಿ) ಇಲ್ಲ ಎಂಬ ಅಂಶವನ್ನು ಬಯಲಿಗೆಳೆದ ಬೆನ್ನಲ್ಲೇ ರಾಷ್ಟ್ರೀಯ ಮಾಧ್ಯಮವೊಂದು ರಿಯಾಲಿಟಿ ಚೆಕ್ ನಡೆಸಿದೆ. ಇದರಲ್ಲಿ ದೇಶದ 30 ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳ ಪೈಕಿ 16 ಫೆಡರೇಶನ್‌ಗಳಲ್ಲಿ ನಿಯಮಾನುಸಾರ ಆಂತರಿಕ ದೂರು ಸಮಿತಿ(ಐಸಿಸಿ) ಇಲ್ಲ ಎಂಬ ಆಚ್ಚರಿಯ ಸಂಗತಿ ಹೊರಬಿದ್ದಿದೆ.
Wrestlers Protest: ಬ್ರಿಜ್ ಕಿರುಕುಳದ ವಿವರ ಎಳೆಎಳೆಯಾಗಿ ಬಿಚ್ಚಿಟ್ಟ ಕುಸ್ತಿಪಟುಗಳು!
2013ರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯಿದೆ ಪ್ರಕಾರ ಫೆಡರೇಶನ್‌ಗಳಲ್ಲಿ ಆಂತರಿಕ ದೂರು ಸಮಿತಿ ಇರುವುದು ಕಡ್ಡಾಯ. ಆದರೆ ಇದನ್ನು ಅರ್ಧದಷ್ಟುಫೆಡರೇಶನ್ಗಳು ಉಲ್ಲಂಘಿಸಿವೆ. ಈ ಪೈಕಿ ಕೆಲ ಫೆಡರೇಶನ್‌ಗಳಲ್ಲಿ ಸಮಿತಿ ಇದ್ದರೂ ಪೂರ್ಣ ಪ್ರಮಾಣದಲ್ಲಿ ಸದಸ್ಯರಿಲ್ಲ ಎಂಬುದು ಬಹಿರಂಗಗೊಂಡಿದೆ.
ಬ್ರಿಜ್‌ರ ಅಯೋಧ್ಯೆ ರ‍್ಯಾಲಿ ಮುಂದೂಡಿಕೆ
ಕುಸ್ತಿಪಟುಗಳ ಹೋರಾಟಗಳ ನಡುವೆಯೇ ಬ್ರಿಜ್‌ಭೂಷಣ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಜೂ.5ರಂದು ನಡೆಸಲು ಉದ್ದೇಶಿಸಿದ್ದ ಅಯೋಧ್ಯೆ ರ‍್ಯಾಲಿಯು ಮುಂದೂಡಿಕೆಯಾಗಿದೆ. ಕಳೆದ ವಾರ ಅಯೋಧ್ಯೆಯ ಹಲವು ಧಾರ್ಮಿಕ ಮುಖಂಡರು ಬ್ರಿಜ್‌ರನ್ನು ಬೆಂಬಲಿಸಿ, ಪೋಕ್ಸೋ ಕಾಯಿದೆ ಅಡಿ ಅವರ ವಿರುದ್ಧ ದಾಖಲಾಗಿರುವ ದೂರನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಬ್ರಿಜ್‌ಭೂಷಣ್ ಬೃಹತ್ ರ‍್ಯಾಲಿ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ಯೋಜಿಸಿದ್ದರು. ಆದರೆ ರ‍್ಯಾಲಿಗೆ ಸ್ಥಳೀಯ ಆಡಳಿತ ಅನುಮತಿ ನೀಡಿಲ್ಲ. ಜೊತೆಗೆ ತಮ್ಮ ವಿರುದ್ಧ ರೈತ ನಾಯಕರೂ ಸಿಡಿದೆದ್ದಿರುವುದರಿಂದ ಸದ್ಯಕ್ಕೆ ರ‍್ಯಾಲಿ ನಡೆಸದಿರಲು ಬ್ರಿಜ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.