* ವಾಂಖೇಡೆ ಮೈದಾನದಲ್ಲಿಂದು ಆರ್‌ಸಿಬಿ-ಮುಂಬೈ ಸೆಣಸಾಟ* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಉಭಯ ತಂಡಗಳು* ಅಂಕಪಟ್ಟಿಯಲ್ಲಿ ಆರ್‌ಸಿಬಿ-ಮುಂಬೈ ಕ್ರಮವಾಗಿ 6-7 ಸ್ಥಾನದಲ್ಲಿವೆ
ಮುಂಬೈ(ಮೇ.09): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 54ನೇ ಪಂದ್ಯದಲ್ಲಿಂದು 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೊಚ್ಚಲ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಇಂದು ಸಂಜೆ 7.30ಕ್ಕೆ ಆರಂಭವಾಗಲಿರುವ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯವನ್ನು ವಹಿಸಿದೆ. ಪ್ಲೇ ಆಫ್ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ.
ಎರಡೂ ತಂಡಗಳು ಕಳೆದ ಪಂದ್ಯದಲ್ಲಿ ಸೋಲಿನ ಕಹಿಯುಂಡಿವೆ. ಒಂದು ಕಡೆ ಮುಂಬೈ ಇಂಡಿಯನ್ಸ್ ತಂಡವು ಈ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಶರಣಾಗಿದ್ದರೆ, ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಎದುರು ಮುಗ್ಗರಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡವು ತಲಾ 5 ಪಂದ್ಯಗಳನ್ನು ಜಯಿಸಿದ್ದು, ಅಂಕಪಟ್ಟಿಯಲ್ಲಿ ಕ್ರಮವಾಗಿ 6 ಹಾಗೂ 7ನೇ ಸ್ಥಾನದಲ್ಲಿವೆ. ಈ ಪಂದ್ಯವನ್ನು ಜಯಿಸಿದ ತಂಡವು ನೇರವಾಗಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆಯಿಡಲಿದ್ದು, ಗೆಲುವಿಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆಯಿದೆ.
ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗವು ಆರ್‌ಸಿಬಿ ಪಡೆಯ ಬೌಲಿಂಗ್‌ಗೆ ಹೋಲಿಸಿದರೆ ಕೊಂಚ ಮಂಕಾದಂತೆ ಕಂಡು ಬರುತ್ತಿದೆ. ಜೋಫ್ರಾ ಆರ್ಚರ್ ಅವರಿಂದ ಮಾರಕ ದಾಳಿ ಮೂಡಿ ಬರುತ್ತಿಲ್ಲ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಮುಂಬೈ ಇಂಡಿಯನ್ಸ್ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇನ್ನು ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಫಾರ್ಮ್ ಸಮಸ್ಯೆ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಂಬೈ ನಾಯಕ ರೋಹಿತ್ ಶರ್ಮಾ 10 ಪಂದ್ಯಗಳನ್ನಾಡಿ 18.40 ಸರಾಸರಿಯಲ್ಲಿ ಕೇವಲ 184 ರನ್ ಗಳಿಸಿದ್ದಾರೆ. ಕಳೆದ ನಾಲ್ಕು ಪಂದ್ಯಗಳ ಪೈಕಿ, ಸತತ ಎರಡು ಪಂದ್ಯಗಳಲ್ಲಿ ಶೂನ್ಯ ಸಂಪಾಧನೆ ಮಾಡಿದ್ದರೆ, ಒಟ್ಟಾರೆ ಕೇವಲ 5 ರನ್ ಗಳಿಸಿದ್ದಾರೆ.
IPL 2023: ವಾಂಖೇಡೆಯಲ್ಲಿಂದು ಆರ್‌ಸಿಬಿ-ಮುಂಬೈ ನಿರ್ಣಾಯಕ ಕದನ
ಇನ್ನು ಆರ್‌ಸಿಬಿ ತಂಡವು ಉತ್ತಮ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಹೊಂದಿದೆ. ಫಾಫ್ ಡು ಪ್ಲೆಸಿಸ್ ಗರಿಷ್ಠ ರನ್ ಗಳಿಸಿ ಆರೆಂಜ್ ಕ್ಯಾಪ್ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಇನ್ನು ರನ್ ಮಷೀನ್ ವಿರಾಟ್ ಕೊಹ್ಲಿ ಕೂಡಾ ಉತ್ತಮ ಫಾರ್ಮ್‌ನಲ್ಲಿದ್ದು, ಕಳೆದ ಮೂರು ಪಂದ್ಯಗಳ ಪೈಕಿ ಎರಡು ಅರ್ಧಶತಕ ಸಿಡಿಸಿದ್ದಾರೆ. ಇದಷ್ಟೇ ಅಲ್ಲದೇ ಗ್ಲೆನ್ ಮ್ಯಾಕ್ಸ್‌ವೆಲ್ ಜತೆಗೆ ಮಹಿಪಾಲ್ ಲೋಮ್ರಾರ್ ಕೂಡಾ ಫಾರ್ಮ್‌ಗೆ ಮರಳಿದ್ದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಜೋಶ್ ಹೇಜಲ್‌ವುಡ್ ಸೇರ್ಪಡೆ ತಂಡಕ್ಕೆ ಮತ್ತಷ್ಟು ಬಲ ಬರುವಂತೆ ಮಾಡಿದೆ. ಇದರ ಜತೆಗೆ ಸಿರಾಜ್, ಕರ್ಣ್ ಶರ್ಮಾ ಹಾಗೂ ಹರ್ಷಲ್ ಪಟೇಲ್ ಮತ್ತೆ ಮಿಂಚುವ ವಿಶ್ವಾಸದಲ್ಲಿದ್ದಾರೆ.
ಇಂದಿನ ಪಂದ್ಯ ಗೆಲ್ಲೋರು ಯಾರು?
ಮುಂಬೈ ಇಂಡಿಯನ್ಸ್ ತಂಡವು ತವರಿನಲ್ಲಿ ಆಡುತ್ತಿರುವುದರಿಂದ ರೋಹಿತ್ ಪಡೆಗೆ ತವರಿನ ಪ್ರೇಕ್ಷಕರ ಬೆಂಬಲ ಸಿಗುವ ಸಾಧ್ಯತೆಯಿದೆ. ಆದರೆ, ಈಗಾಗಲೇ ತಾನಾಡಿದ ಮೊದಲ ಪಂದ್ಯದಲ್ಲೇ ಮುಂಬೈ ಮಣಿಸಿರುವ ಆರ್‌ಸಿಬಿ ತಂಡವು ಇದೀಗ ಮತ್ತೊಂದು ಗೆಲುವು ದಾಖಲಿಸುವ ಆತ್ಮವಿಶ್ವಾಸದಲ್ಲಿದೆ. ಮೇಲ್ನೋಟಕ್ಕೆ ಸದ್ಯದ ಪ್ರದರ್ಶನವನ್ನು ಗಮನಿಸಿದರೆ, ಆರ್‌ಸಿಬಿ ತಂಡವು ಈ ಪಂದ್ಯವನ್ನು ಗೆಲ್ಲುವ ಸಾಧ್ಯತೆ ಹೆಚ್ಚು.
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮ್ರಾರ್, ದಿನೇಶ್ ಕಾರ್ತಿಕ್, ಕೇದವ್ ಜಾಧವ್, ಪ್ರಭುದೇಸಾಯಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಜೋಶ್ ಹೇಜಲ್‌ವುಡ್, ಮೊಹಮ್ಮದ್ ಸಿರಾಜ್.
ಮುಂಬೈ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟ್ರಿಸ್ಟಿನ್ ಸ್ಟಬ್ಸ್, ನಿಹಾಲ್ ವಧೇರಾ, ಟಿಮ್ ಡೇವಿಡ್, ಜೋಪ್ರಾ ಆರ್ಚರ್, ಪೀಯೂಸ್ ಚಾವ್ಲಾ, ಆಕಾಶ್, ಅರ್ಶದ್ ಖಾನ್, ಕುಮಾರ್ ಕಾರ್ತಿಕೇಯ.
ಪಂದ್ಯ: ಸಂಜೆ 7.30ರಿಂದ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಬ್ಯಾಟಿಂಗ್ ಸ್ನೇಹಿ ವಾಂಖೇಡೆ ಕ್ರೀಡಾಂಗಣದ ಪಿಚ್‌ನಲ್ಲಿ ಮತ್ತೊಮ್ಮೆ ದೊಡ್ಡ ಮೊತ್ತ ದಾಖಲಾಗಬಹುದು. ಕಳೆದೆರಡು ಪಂದ್ಯದ 4 ಇನ್ನಿಂಗ್್ಸಗಳಲ್ಲೂ ತಂಡಗಳು 200+ ರನ್ ಗಳಿಸಿವೆ. ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ನೆರವು ಸಿಕ್ಕ ಉದಾಹರಣೆ ಇದೆ.
