ಮಹಾರಾಜ ಟಿ20 ಟ್ರೋಫಿ ಅನಾವರಣ ಮಾಡಿದ ಕಿಚ್ಚ ಸುದೀಪ್
ಮಹಾರಾಜ ಟಿ20 ಟೂರ್ನಿ ಆರಂಭಕ್ಕೆ ಕ್ಷಣಗಣನೆ
ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆಯಲಿರುವ ಟಿ20 ಟೂರ್ನಿ
ಆಗಸ್ಟ್ 7ರಿಂದ 21ರವರೆಗೆ ಜರುಗಲಿರುವ ಮಹಾರಾಜ ಟಿ20 ಟೂರ್ನಿ
ಮೈಸೂರು(ಆ.05): ಮಹಾರಾಜ ಟಿ20 ಟೂರ್ನಿ ಟ್ರೋಫಿಯನ್ನು ಗುರುವಾರ ನಟ ಸುದೀಪ್ ಅನಾವರಣಗೊಳಿಸಿದರು. ಸುದೀಪ್ ಅವರು ಟೂರ್ನಿಯ ರಾಯಭಾರಿಯಾಗಿರಲಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ತಿಳಿಸಿದೆ. ಟೂರ್ನಿ ಆಗಸ್ಟ್ 7ರಂದು ಮೈಸೂರಲ್ಲಿ ಆರಂಭಗೊಳ್ಳಲಿದ್ದು, 26ರಂದು ಬೆಂಗಳೂರಲ್ಲಿ ಕೊನೆಗೊಳ್ಳಲಿದೆ. ಟ್ರೋಫಿ ಅನಾವರಣ ಕಾರ‍್ಯಕ್ರಮದ ವೇಳೆ ಎಲ್ಲಾ 6 ತಂಡಗಳ ನಾಯಕರ ಹೆಸರುಗಳನ್ನು ಪ್ರಕಟಗೊಳಿಸಲಾಯಿತು. ಬೆಂಗಳೂರು ತಂಡಕ್ಕೆ ಮಯಾಂಕ್ ಅಗರ್‌ವಾಲ್, ಗುಲ್ಬರ್ಗಾಕ್ಕೆ ಮನೀಶ್ ಪಾಂಡೆ, ಮೈಸೂರಿಗೆ ಕರುಣ್ ನಾಯರ್, ಶಿವಮೊಗ್ಗ ತಂಡಕ್ಕೆ ಕೃಷ್ಣಪ್ಪ ಗೌತಮ್, ಹುಬ್ಬಳ್ಳಿ ತಂಡಕ್ಕೆ ಅಭಿಮನ್ಯು ಮಿಥುನ್ ಮತ್ತು ಮಂಗಳೂರಿಗೆ ಆರ್.ಸಮರ್ಥ್ ನಾಯಕರಾಗಿ ನೇಮಕಗೊಂಡಿದ್ದಾರೆ. ಕಾರ‍್ಯಕ್ರಮದಲ್ಲಿ ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ, ಖಜಾಂಚಿ ವಿನಯ್ ಮೃತ್ಯುಂಜಯ ಸೇರಿ ಇತರ ಗಣ್ಯರಿದ್ದರು.
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಸ್‌ಸಿಎ ಪ್ರಧಾನ ಕಾರ್ಯದರ್ಶಿ ಸಂತೋಷ ಮೆನನ್, ಆಗಸ್ಟ್ 7ರಿಂದ 21ರವರೆಗೆ ಮೈಸೂರಿನಲ್ಲಿ ಹಾಗೂ ಬೆಂಗಳೂರಿನಲ್ಲಿ ನಡೆಯಲಿವೆ. ಮೊದಲ ಒಟ್ಟು 18 ಹಾಗೂ ಬೆಂಗಳೂರಿನಲ್ಲಿ ಫೈನಲ್ ಸೇರಿ 16 ಒಟ್ಟಾರೆ 34 ಪಂದ್ಯಾವಳಿ ನಡೆಯಲಿದೆ ಎಂದರು.
ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್, ಶಿವಮೊಗ್ಗ ಸ್ಟ್ರೈಕರ್ಸ್, ಮೈಸೂರು ವಾರಿಯರ್ಸ್, ಮಂಗಳೂರು ಯುನೈಟೆಡ್, ಗುಲ್ಬರ್ಗ ಮೈಸ್ಟಿಕ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಈ ಮೊದಲು ಫ್ರಾಂಚೈಸಿಗಳು ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡುತ್ತಿದ್ದವು. ಈ ಬಾರಿ ಕೆಎಸ್‌ಸಿಎ ನೇತೃತ್ವದಲ್ಲಿ ಹಿರಿಯ ಆಟಗಾರರು ಆಯಾ ವಲಯದ ಆಟಗಾರರನ್ನು ಆಯ್ಕೆ ಮಾಡಿ ಪಂದ್ಯಾವಳಿಯಲ್ಲಿನ ಆರು ತಂಡಗಳಿಗೆ ಸಮನಾಗಿ ಹಂಚಿಕೆ ಮಾಡಿದ್ದಾರೆ. ಅತ್ಯಂತ ಪಾರದರ್ಶಕವಾಗಿ ಕ್ರೀಡಾಳುಗಳ ಆಯ್ಕೆ ನಡೆದಿದೆ. ಇದೆ ಮೊದಲ ಬಾರಿಗೆ ಫ್ರಂಚೈಸಿ ಬದಲಾಗಿ ಸ್ಪಾನ್ಸರ್ ಮಾದರಿಯಲ್ಲಿ ಕಂಪನಿಗಳು ತಂಡಗಳಿಗೆ ನೆರವು ನೀಡಲಿವೆ ಎಂದರು.
ಸ್ಟಾರ್ ಸ್ಪೋರ್ಟ್ಸ್ , ಸ್ಟಾರ್ ಸ್ಪೋರ್ಟ್ಸ್ 2 ಕನ್ನಡ ವಾಹಿನಿಗಳು ಪಂದ್ಯಾವಳಿಯನ್ನು ನೇರ ಪ್ರಸಾರ ಮಾಡಲಿವೆ. ಟೈಟಲ್ ಪ್ರಾಯೋಜಕತ್ವವನ್ನು ಶ್ರೀರಾಮ ಗ್ರೂಪ್ ವಹಿಸಿಕೊಂಡಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಎಲ್ಲ ಆಟಗಾರರಿಗೆ ಭ್ರಷ್ಟಾಚಾರ ಹಾಗೂ ಡೋಪಿಂಗ್ ನಿಗ್ರಹಕ್ಕೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಜೊತೆಗೆ ಆರ್ಟಿಫಿಶಲ್ ಇಂಟಲಿಜೆನ್ಸಿ ಮೂಲಕ ಪಂದ್ಯಾವಳಿಯ ಮೇಲೆ ನಿಗಾ ವಹಿಸಲಾಗುವುದು ಎಂದರು.
ಮಹಾರಾಜ ಟ್ರೋಫಿ: KSCA ಹೊಸ ಟಿ20 ಲೀಗ್ ಟೂರ್ನಿಗೆ ವೇಳಾಪಟ್ಟಿ ಫಿಕ್ಸ್
ಸುದ್ದಿಗೋಷ್ಠಿಯಲ್ಲಿ ಕೆಎಸ್‌ಸಿಎ ಸದಸ್ಯ ವಾಸುದೇವ ಜಯಸಿಂಹ, ಧಾರವಾಡ ವಲಯ ನಿಮಂತ್ರಕ ಅವಿನಾಶ ಪೊತದಾರ, ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷ ವೀರಣ್ಣ ಸವಡಿ, ಶಶಿಧರ ಕೆ., ಧಾರವಾಡ ವಲಯದ ಸಂಚಾಲಕ ಮುರಳಿಧರ, ಅಲ್ತಾಫ್‌ಕಿತ್ತೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹುಬ್ಬಳ್ಳಿ ಟೈಗರ್ಸ್ ತಂಡ:
ಜಿಂದಾಲ್ ಸ್ಟೀಲ್ಸ್ ಪ್ರಾಯೋಜಕತ್ವ ಇರುವ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಅಭಿಮನ್ಯು ಮಿಥುನ್ ನಾಯಕರಾಗಿದ್ದಾರೆ. ಲವನಿತ್ ಸಿಸೋಡಿಯಾ, ಕೌಶಿಕ್ ವಿ., ಲಿಯಾನ್ ಖಾನ್, ನವೀನ್ ಎಂ.ಜಿ.,ಆನಂದ್ ದೊಡ್ಡಮನಿ, ಶಿವಕುಮಾರ ಬಿ.ಯು, ತುಷಾರ ಸಿಂಗ್, ಅಕ್ಷನ್ ರಾವ್, ಜಹೂರ ರೂಕಿ, ರೋಹನ್ ನವೀನ್, ಸೌರವ ಶ್ರಿವಾಸ್ತವ, ಸಾಗರ ಸೋಳಂಕಿ, ಗೌತಮ್ ಸಾಗರ, ರೋಶನ್ ಎ., ರಾಹುಲ್ ಸಿಂಗ್ ರಾವತ್, ಶಿಶಿರ ಭವಾನೆ, ಶರಣ್ ಗೌಡ, ನಿರ್ಮಿತ್ ಶಶಿಧರ, ಸ್ವಪ್ನಿಲ್ ಎಲಾವೆ ತಂಡದಲ್ಲಿದ್ದಾರೆ. ದೀಪಕ್ ಚೌಗಲೆ (ಕೋಚ್), ರಾಜು ಭಟ್ಕಳ (ಸಹಾಯಕ ಕೋಚ್), ಆನಂದ್ ಕಟ್ಟಿ(ಆಯ್ಕೆಗಾರ), ಶಶಿಕುಮಾರ್ (ವಿಡಿಯೋ ಎನಾಲಿಸ್ಟ್ ) ಆಗಿದ್ದಾರೆ.
ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನ ನವೀಕರಣ ಅಂತಿಮ ಹಂತದಲ್ಲಿದೆ. ಮುಂಬರುವ ನವೆಂಬರ್ ಕೊನೆ ವಾರ, ಡಿಸೆಂಬರ್ ಮೊದಲ ವಾರದಲ್ಲಿ ಉದ್ಘಾಟಿಸಲಾಗುವುದು. ಈ ವರ್ಷ ರಣಜಿ ಹಾಗೂ 19ರ ವಯೋಮಾನದ ಏಕದಿನ ಪಂದ್ಯಗಳನ್ನು ಆಯೋಜಿಸುವುದಾಗಿ ಸಂತೋಷ ಮೆನನ್ ಸ್ಪಷ್ಟಪಡಿಸಿದರು. ಗದಗನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆಯಲ್ಲಿದ್ದು, .2.5 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.