* ಮಹಾರಾಜ ಟಿ20 ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಬೆಂಗಳೂರು ಬ್ಲಾಸ್ಟರ್ಸ್‌* ಎಲಿಮಿನೇಟರ್ ಪಂದ್ಯದಲ್ಲಿ ಸೋತ ಹುಬ್ಬಳ್ಳಿ ಟೈಗರ್ಸ್‌ ಅಭಿಯಾನ ಅಂತ್ಯ* ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೈಸೂರು, ಗುಲ್ಬರ್ಗಾ ಸೆಣಸಾಟ

ಬೆಂಗಳೂರು(ಆ.24): ಅಮೋಘ ಶತಕದ ನೆರವಿನಿಂದ ಮಯಾಂಕ್‌ ಅಗರ್‌ವಾಲ್‌ ಬೆಂಗಳೂರು ಬ್ಲಾಸ್ಟರ್ಸ್‌ ತಂಡವನ್ನು ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ತಮ್ಮ ತಂಡವನ್ನು ಫೈನಲ್‌ಗೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಳೂರು ತಂಡವು ಗುಲ್ಬರ್ಗಾ ಮಿಸ್ಟಿಕ್ಸ್‌ ತಂಡದ ವಿರುದ್ದ 44 ರನ್‌ಗಳ ಗೆಲುವು ಸಾಧಿಸಿತು.

ಇನ್ನೊಂದೆಡೆ ಎಲಿಮಿನೇಟರ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಎದುರು ಸೋತ ಹುಬ್ಬಳ್ಳಿ ಟೈಗರ್ಸ್‌ ಟೂರ್ನಿಯಿಂದ ಹೊರಬಿದ್ದಿದೆ. ಗುರುವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಲ್ಬರ್ಗಾ ಮತ್ತು ಮೈಸೂರು ತಂಡಗಳು ಮುಖಾಮುಖಿಯಾಗಲಿದ್ದು, ಪ್ರಶಸ್ತಿಗಾಗಿ ಬೆಂಗಳೂರು ಬ್ಲಾಸ್ಟರ್ಸ್‌ ಎದುರು ಕಾದಾಡಲು ಈ ಎರಡು ತಂಡಗಳು ಸೆಣಸಾಟ ನಡೆಸಲಿವೆ.

ಮಹಾರಾಜ ಟಿ20: ಹುಬ್ಬಳ್ಳಿ ಔಟ್

ಆರಂಭಿಕ ಬ್ಯಾಟರ್‌ ನಿಹಾಲ್‌ರ ಆಕರ್ಷಕ ಆಟದ ನೆರವಿನಿಂದ ಮೈಸೂರು ವಾರಿಯ​ರ್ಸ್‌ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಉಳಿದುಕೊಂಡಿದ್ದು, ಹುಬ್ಬಳ್ಳಿ ಟೈಗ​ರ್ಸ್‌ ತನ್ನ ಅಭಿಯಾನ ಕೊನೆಗೊಳಿಸಿದೆ. ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಹುಬ್ಬಳ್ಳಿ ವಿರುದ್ಧ ಮೈಸೂರು ತಂಡ 5 ವಿಕೆಟ್‌ ಗೆಲುವು ಸಾಧಿಸಿ, ಕ್ವಾಲಿಫೈಯರ್‌-2 ಪಂದ್ಯಕ್ಕೆ ಪ್ರವೇಶ ಪಡೆಯಿತು.

ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ 20 ಓವರಲ್ಲಿ 7 ವಿಕೆಟ್‌ಗೆ 164 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮೈಸೂರು, 19.1 ಓವರಲ್ಲಿ 5 ವಿಕೆಟ್‌ ಕಳೆದುಕೊಂಡು 166 ರನ್‌ ಗಳಿಸಿತು. ನಿಹಾಲ್‌ ಮತ್ತು ನಾಯಕ ಕರುಣ್‌ ನಾಯರ್‌(23) ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಪವನ್‌ ದೇಶಪಾಂಡೆ(24), ಶ್ರೇಯಸ್‌ ಗೋಪಾಲ್‌(32) ಉಪಯುಕ್ತ ಕೊಡುಗೆ ನೀಡಿದರು. 58 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ ನಿಹಾಲ್‌ ಔಟಾಗದೆ 77 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Maharaja Trophy: ಇಂದಿನಿಂದ ಪ್ಲೇ ಆಫ್‌ ಕದನ

ಲುವ್ನಿತ್‌ ಸಿಸೋಡಿಯಾ(33) ಮತ್ತು ಮೊಹಮದ್‌ ತಾಹ(27) ಮೊದಲ ವಿಕೆಟ್‌ಗೆ 56 ರನ್‌ ಜೊತೆಯಾಟವಾಡಿ ಹುಬ್ಬಳ್ಳಿಗೆ ಉತ್ತಮ ಆರಂಭ ಒದಗಿಸಿದರು. ಆದರೆ 82 ರನ್‌ ಗಳಿಸುವಷ್ಟರಲ್ಲಿ ತಂಡ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಸ್ವಪ್ನಿಲ್‌(30), ಜಿ.ನವೀನ್‌(32) ಮತ್ತು ಮಿಥುನ್‌(19) ಹೋರಾಟದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

ಸ್ಕೋರ್‌: 
ಹುಬ್ಬಳ್ಳಿ 20 ಓವರಲ್ಲಿ 164/7(ಲುವ್ನಿತ್‌ 33, ನವೀನ್‌ 32, ಶ್ರೇಯಸ್‌ 3-33) 
ಮೈಸೂರು 19.1 ಓವರಲ್ಲಿ 166/5(ನಿಹಾಲ್‌ 77*, ಶ್ರೇಯಸ್‌ 32, ಆನಂದ್‌ 4-27)