* ಮೊದಲ ಟೆಸ್ಟ್‌ನ ಮೊದಲ ದಿನವೇ ವಿಂಡೀಸ್ ಮೇಲೆ ಬಿಗಿ ಹಿಡಿತ ಸಾಧಿಸಿದ ಹರಿಣಗಳು* 11 ವರ್ಷಗಳ ಬಳಿಕ ಕೆರಿಬಿಯನ್ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ* ಮೊದಲ ಇನಿಂಗ್ಸ್‌ನಲ್ಲಿ ವಿಂಡೀಸ್ ಕೇವಲ 97 ರನ್‌ಗಳಿಗೆ ಆಲೌಟ್

ಸೇಂಟ್ ಲೂಸಿಯಾ(ಜೂ.11): ಲುಂಗಿ ಎಂಗಿಡಿ(19/5) ಹಾಗೂ ಏನ್ರಿಚ್ ನೊಕಿಯೆ(35/4) ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್‌ ಕ್ರಿಕೆಟ್ ತಂಡವು ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 97 ರನ್‌ಗಳಿಗೆ ಸರ್ವಪತನ ಕಂಡಿದೆ. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿರುವ ದಕ್ಷಿಣ ಆಫ್ರಿಕಾ ತಂಡವು ಮೊದಲ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 128 ರನ್‌ ಬಾರಿಸಿದ್ದು, 31 ರನ್‌ಗಳ ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್‌ ತಂಡಕ್ಕೆ ಎಂಗಿಡಿ ತಮ್ಮ ಮಾರಕ ದಾಳಿಯ ಮೂಲಕ ಶಾಕ್ ನೀಡಿದರು.2018ರಲ್ಲಿ ಭಾರತ ವಿರುದ್ದ ಪಾದಾರ್ಪಣೆ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ್ದ ಎಂಗಿಡಿ, ಇದೀಗ ಎರಡನೇ ಬಾರಿಗೆ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಎಂಗಿಡಿಗೆ ದಕ್ಷಿಣ ಆಫ್ರಿಕಾದ ಮತ್ತೋರ್ವ ವೇಗಿ ನೊಕಿಯೆ ಉತ್ತಮ ಸಾಥ್ ನೀಡಿದ ಪರಿಣಾಮ ವೆಸ್ಟ್ ಇಂಡೀಸ್‌ ಕೇವಲ 40.5 ಓವರ್‌ಗಳಲ್ಲಿ ಸರ್ವಪತನ ಕಂಡಿತು. 

ಇಂಗ್ಲೆಂಡ್‌ನಲ್ಲಿ ಪೂರ್ಣ ಪ್ರಮಾಣದ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ

ಬರೋಬ್ಬರಿ 11 ವರ್ಷಗಳ ಬಳಿಕ ಮೊದಲ ಬಾರಿಗೆ ಕೆರಿಬಿಯನ್ ಪ್ರವಾಸ ಕೈಗೊಂಡಿರುವ ಹರಿಣಗಳ ಪಡೆ ಮೊದಲ ದಿನವೇ ಉತ್ತಮ ಆರಂಭವನ್ನು ಪಡೆದಿದೆ. ಮೊದಲ ವಿಕೆಟ್‌ಗೆ ವೆಸ್ಟ್ ಇಂಡೀಸ್‌ 24 ರನ್‌ಗಳ ಜತೆಯಾಟವಾಡಿತ್ತು. ಇದಾದ ಬಳಿಕ ಕೆರಿಬಿಯನ್ ಪಡೆ ನಾಟಕೀಯ ಕುಸಿತ ಕಂಡಿತು. ಒಂದು ಹಂತದಲ್ಲಿ ವಿಂಡೀಸ್‌ 11 ಓವರ್‌ಗಳ ವರೆಗೂ ಯಾವುದೇ ವಿಕೆಟ್ ಕಳೆದುಕೊಂಡಿರಲಿಲ್ಲ. ಮೊದಲ ಸ್ಪೆಲ್‌ನಲ್ಲಿ ಯಾವುದೇ ವಿಕೆಟ್ ಪಡೆಯಲು ಎಂಗಿಡಿ ಯಶಸ್ವಿಯಾಗಲಿಲ್ಲ, ಆದರೆ ಎರಡನೇ ಸ್ಪೆಲ್‌ನಲ್ಲಿ ಕೇವಲ 7 ರನ್‌ ನೀಡಿ ವಿಂಡೀಸ್‌ನ 5 ವಿಕೆಟ್ ಕಬಳಿಸಿದರು. ಜೇಸನ್ ಹೋಲ್ಡರ್ 20 ರನ್‌ ಬಾರಿಸಿದ್ದೇ ವಿಂಡೀಸ್ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತು.

Scroll to load tweet…

ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಖಾತೆ ತೆರೆಯುವ ಮುನ್ನವೇ ನಾಯಕ ಡೀನ್ ಏಲ್ಗರ್ ವಿಕೆಟ್ ಕಳೆದುಕೊಂಡಿತು. ಬಳಿಕ ಏಯ್ಡನ್ ಮಾರ್ಕ್‌ರಮ್‌(60) ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇದೀಗ ರಾಸಿ ವಾನ್ ಡರ್ ಡ್ಯುಸೇನ್(34) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿ ಕಾಕ್(4) ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್

ವೆಸ್ಟ್ ಇಂಡೀಸ್: 97/10
ದಕ್ಷಿಣ ಆಫ್ರಿಕಾ: 128/4
(* ಮೊದಲ ದಿನದಾಟದಂತ್ಯದ ವೇಳೆಗೆ)