ಕೊಲಂಬೊ(ಡಿ.13): ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಏಂಜಲೋ ಮ್ಯಾಥ್ಯೂಸ್ ನೇತೃತ್ವದ ಕೊಲಂಬೊ ಕಿಂಗ್ಸ್‌ ತಂಡ ಅದ್ಭುತ ಪ್ರದರ್ಶನ ತೋರಿದೆ. ಲೀಗ್ ಹಂತದ ಆಡಿದ 8 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸುವ ಮೂಲಕ ಲೀಗ್ ಹಂತದಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. 

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಲಂಬೊ ಕಿಂಗ್ಸ್‌ ತಂಡವು ಗಾಲೆ ಗ್ಲಾಡಿಯೇಟರ್ಸ್‌ ವಿರುದ್ದ ಸೆಣಸಾಡಲು ರೆಡಿಯಾಗಿದೆ. ಹೀಗಿರುವಾಗಲೇ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್‌ ಗಿಬ್ಸ್‌ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕೊಲಂಬೊ ಕಿಂಗ್ಸ್‌ ತಂಡದ ನಾಯಕ ಏಂಜಲೋ ಮ್ಯಾಥ್ಯೂಸ್ ಈ ವಿಚಾರವನ್ನು ಖಚಿತ ಪಡಿಸಿದ್ದಾರೆ.

ನ್ಯೂಜಿಲೆಂಡ್ ಎದುರಿನ ಟಿ20 ಸರಣಿಯಿಂದ ಹೊರಬಿದ್ದ ಪಾಕ್ ನಾಯಕ..!

ವೈಯುಕ್ತಿಕ ಕಾರಣದಿಂದ ಹರ್ಷಲ್ ಗಿಬ್ಸ್‌ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ನಮ್ಮ ಮಾಲೀಕರು ನಮಗೆ ತಿಳಿಸಿದ್ದಾರೆ. ಇಂದು ರಾತ್ರಿಯೇ ಲಂಕಾದಿಂದ ದಕ್ಷಿಣ ಆಫ್ರಿಕಾಗೆ ತೆರಳಲಿದ್ದಾರೆ ಎಂದು ಮ್ಯಾಥ್ಯೂಸ್‌ ಹೇಳಿದ್ದಾರೆ.

ತಮ್ಮ ತಾಯಿಗೆ ಕೊರೋನಾ ಸೋಂಕು ತಗುಲಿದ್ದರಿಂದ ತಕ್ಷಣವೇ ಆಫ್ರಿಕಾಗೆ ಹೊರಟಿದ್ದಾಗಿ ಗಿಬ್ಸ್ ನಾಯಕ ಮ್ಯಾಥ್ಯೂಸ್‌ಗೆ ತಿಳಿಸಿದ್ದಾರೆ. ಅಲ್ಲದೇ ಗಿಬ್ಸ್‌ ಸಹೋದರ ಕೂಡಾ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಬ್ಬ ಸಹೋದರಿ ಈಗಷ್ಟೇ ಕೊರೋನಾದಿಂದ ಚೇತರಿಸಿಕೊಂಡಿದ್ದಾಗಿ ಗಿಬ್ಸ್‌ ಟ್ವೀಟ್ ಮೂಲಕ ತಿಳಿಸಿದ್ದಾರೆ.