* ಲಾರ್ಡ್ಸ್‌ ಟೆಸ್ಟ್‌ನಲ್ಲಿ ಭಾರತಕ್ಕೆ ತಿರುಗೇಟು ನೀಡುವತ್ತ ಇಂಗ್ಲೆಂಡ್ ದಿಟ್ಟ ಹೆಜ್ಜೆ* ಶತಕದ ಜತೆಯಾಟವಾಡಿ ಮಿಂಚಿದ ಜಾನಿ ಬೇರ್‌ಸ್ಟೋವ್-ಜೋ ರೂಟ್ ಜೋಡಿ* 148 ರನ್‌ಗಳ ಹಿನ್ನೆಡೆಯಲ್ಲಿದೆ ಇಂಗ್ಲೆಂಡ್ ಕ್ರಿಕೆಟ್ ತಂಡ

ಲಾರ್ಡ್ಸ್‌(ಆ.14): ನಾಯಕ ಜೋ ರೂಟ್‌ ಹಾಗೂ ಜಾನಿ ಬೇರ್‌ಸ್ಟೋವ್‌ ಅಜೇಯ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್‌ ಮೂರನೇ ದಿನದಾಟದ ಮೊದಲ ಸೆಷನ್ ಅಂತ್ಯದ ವೇಳೆಗೆ 3 ವಿಕೆಟ್‌ ಕಳೆದುಕೊಂಡು 216 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲು ಇಡಲಾರಂಭಿಸಿದೆ. ಸದ್ಯ ಇಂಗ್ಲೆಂಡ್ ಕೇವಲ 148 ರನ್‌ಗಳ ಹಿನ್ನೆಡೆಯಲ್ಲಿದೆ.

119 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್ ಹಾಗೂ ಜಾನಿ ಬೆರ್‌ಸ್ಟೋವ್ ಆಕರ್ಷಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಲ್ಲೇ ಇಂಗ್ಲೆಂಡ್ ವಿಕೆಟ್‌ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ವಿರಾಟ್ ಕೊಹ್ಲಿ ಲೆಕ್ಕಾಚಾರ ತಲೆಕೆಳಗಾಯಿತು. ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿದ ಈ ಜೋಡಿ ಮೂರನೇ ವಿಕೆಟ್‌ಗೆ ಮುರಿಯದ 108 ರನ್‌ಗಳ ಜತೆಯಾಟವಾಡುವ ಮೂಲಕ ಭಾರತೀಯ ಬೌಲರ್‌ಗಳನ್ನು ಕಾಡಿದರು.

Scroll to load tweet…

INDvsENG 2ನೇ ಟೆಸ್ಟ್; ಬೃಹತ್ ಮೊತ್ತ ಪೇರಿಸಿ 3 ವಿಕೆಟ್ ಕಬಳಿಸಿದ ಟೀಂ ಇಂಡಿಯಾ!

ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್‌ 171 ಎಸೆತಗಳನ್ನು ಎದುರಿಸಿ 9 ಬೌಂಡರಿ ಸಹಿತ 89 ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದರೆ, ಜಾನಿ ಬೇರ್‌ಸ್ಟೋವ್‌ 91 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 51 ರನ್‌ ಬಾರಿಸಿ ನಾಯಕನಿಗೆ ಉತ್ತಮ ಸಾಥ್ ನೀಡಿದ್ದಾರೆ. ಲಂಚ್‌ ಬ್ರೇಕ್‌ ಬಳಿಕವಾದರೂ ಈ ಜೋಡಿಯನ್ನು ಭಾರತೀಯ ಬೌಲರ್‌ಗಳು ಆದಷ್ಟು ಬೇಗ ಬೇರ್ಪಡಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಸಂಕ್ಷಿಪ್ತ ಸ್ಕೋರ್:
ಭಾರತ: 364
ಇಂಗ್ಲೆಂಡ್‌: 216/3