ಲೆಜೆಂಡ್ಸ್ ಲೀಗ್ ಕ್ರಿಕೆಟ್: ಚಾಂಪಿಯನ್ ಏಷ್ಯಾ ಲಯನ್ಸ್ ತಂಡಕ್ಕೆ ಸಿಕ್ಕ ಬಹುಮಾನವೆಷ್ಟು?
2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಏಷ್ಯಾ ಲಯನ್ಸ್ ಚಾಂಪಿಯನ್
ವರ್ಲ್ಡ್ ಜೈಂಟ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಏಷ್ಯಾ ಲಯನ್ಸ್
ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿದ ಉಪುಲ್ ತರಂಗಾ
ಕತಾರ್(ಮಾ.21): 2023ನೇ ಸಾಲಿನ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮಾಸ್ಟರ್ಸ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವರ್ಲ್ಡ್ ಜೈಂಟ್ಸ್ ತಂಡವನ್ನು ಮಣಿಸಿದ ಏಷ್ಯಾ ಲಯನ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶೇನ್ ವಾಟ್ಸನ್ ನೇತೃತ್ವದ ವರ್ಲ್ಡ್ ಜೈಂಟ್ಸ್ ತಂಡವು ಸತತ ಎರಡನೇ ಬಾರಿಗೆ ಕಪ್ ಗೆಲ್ಲುವ ಆಸೆಯನ್ನು ಏಷ್ಯಾ ಲಯನ್ಸ್ ತಂಡವು ನುಚ್ಚುನೂರು ಮಾಡಿತು.
ಮೊದಲು ಬ್ಯಾಟ್ ಮಾಡಿದ ವರ್ಲ್ಡ್ ಜೈಂಟ್ಸ್ ತಂಡದ ಪರ ಜಾಕ್ ಕಾಲೀಸ್ ಕೇವಲ 54 ಎಸೆತಗಳಲ್ಲಿ 78 ರನ್ ಹಾಗೂ ರಾಸ್ ಟೇಲ್ ಬಾರಿಸಿದ ಅಮೂಲ್ಯ 32 ರನ್‌ಗಳ ನೆರವಿನಿಂದ ವಾಟ್ಸನ್ ಪಡೆಯು 147 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಏಷ್ಯಾ ಲಯನ್ಸ್ ಪರ ಅಬ್ದುಲ್ ರಜಾಕ್ ಕೇವಲ 14 ರನ್ ನೀಡಿ ಪ್ರಮುಖ ಎರಡು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಇನ್ನು ಗುರಿ ಬೆನ್ನತ್ತಿದ ಏಷ್ಯಾ ಲಯನ್ಸ್ ತಂಡಕ್ಕೆ ಶ್ರೀಲಂಕಾದ ಆರಂಭಿಕ ಜೋಡಿಯಾದ ಉಪುಲ್ ತರಂಗಾ ಹಾಗೂ ತಿಲಕರತ್ನೆ ದಿಲ್ಶ್ಯಾನ್ ಭರ್ಜರಿ ಆರಂಭ ಒದಗಿಸಿಕೊಟ್ಟರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಎಡಗೈ ಬ್ಯಾಟರ್ ತರಂಗಾ, ಕೇವಲ 28 ಎಸೆತಗಳನ್ನು ಎದುರಿಸಿ ಚುರುಕಿನ 57 ರನ್ ಗಳಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ತಿಲಕರತ್ನೆ ದಿಲ್ಶ್ಯಾನ್ 58 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಫೈನಲ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಅಬ್ದುಲ್ ರಜಾಕ್, ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.
IPL ಟೂರ್ನಿಗಿಂತ ಪಾಕಿಸ್ತಾನ ಸೂಪರ್ ಲೀಗ್ ನೋಡಿದವರೆ ಹೆಚ್ಚು: ಪಿಸಿಬಿ ಅಧ್ಯಕ್ಷರ ಅಚ್ಚರಿಯ ಹೇಳಿಕೆ
2023ನೇ ಸಾಲಿನ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮಾಸ್ಟರ್ಸ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದ ಶಾಹಿದ್ ಅಫ್ರಿದಿ ನೇತೃತ್ವದ ಏಷ್ಯಾ ಲಯನ್ಸ್ ತಂಡವು ಎರಡು ಕೋಟಿ ರುಪಾಯಿ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು. ಇನ್ನು ರನ್ನರ್ ಅಪ್ ಸ್ಥಾನ ಪಡೆದ ವರ್ಲ್ಡ್ ಜೈಂಟ್ಸ್ ತಂಡವು ಒಂದು ಕೋಟಿ ರುಪಾಯಿಗಳನ್ನು ತಮ್ಮದಾಗಿಸಿಕೊಂಡಿತು.
ಫೈನಲ್‌ನಲ್ಲಿ ಆಕರ್ಷಕ ಅರ್ಧಶತಕ ಸಹಿತ ಟೂರ್ನಿಯಲ್ಲಿ 221 ರನ್ ಸಿಡಿಸಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡ ಶ್ರೀಲಂಕಾದ ಉಪುಲ್ ತರಂಗಾ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇನ್ನು ಇಂಡಿಯಾ ಮಹಾರಾಜಾಸ್ ತಂಡದ ನಾಯಕ ಗೌತಮ್ ಗಂಭೀರ್ 215 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು.
ಇನ್ನು ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಸೊಹೆಲ್ ತನ್ವೀರ್ 7 ವಿಕೆಟ್ ಕಬಳಿಸುವ ಮೂಲಕ ಮೊದಲ ಸ್ಥಾನ ಪಡೆದರೆ, ಅಬ್ದುಲ್ ರಜಾಕ್, ಬ್ರೆಟ್ ಲೀ, ಕ್ರಿಸ್ ಮೊಫೂ ಹಾಗೂ ಟಿನೊ ಬೆಸ್ಟ್ ತಲಾ 6 ವಿಕೆಟ್ ಕಬಳಿಸಿದರು.