ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಡಿಸೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಸಚಿನ್, ಕೊಹ್ಲಿ, ಧೋನಿ, ರೋಹಿತ್ ಮುಂತಾದ ಕ್ರಿಕೆಟ್ ದಿಗ್ಗಜರ ಜೊತೆ ಕ್ರಿಕೆಟ್ ಆಡುವ ಸಾಧ್ಯತೆಯಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಡಿಸೆಂಬರ್ 14 ರಂದು ಈ ವಿಶೇಷ ಪಂದ್ಯ ನಡೆಯುವ ಸಾಧ್ಯತೆ.
ಮುಂಬೈ: ದಿಗ್ಗಜ ಫುಟ್ಬಾಲ್ ಆಟಗಾರ, ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಈ ವರ್ಷ ಡಿಸೆಂಬರ್‌ನಲ್ಲಿ ಭಾರತಕ್ಕೆ ಆಗಮಿಸಲಿದ್ದು, ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ, ರೋಹಿತ್ ಶರ್ಮಾ ಸೇರಿ ಪ್ರಮುಖರ ಜೊತೆ ಕ್ರಿಕೆಟ್ ಆಡುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಮೆಸ್ಸಿ ಡಿಸೆಂಬರ್‌ನಲ್ಲಿ ಖಾಸಗಿ ಕಾರ್ಯಕ್ರಮ ನಿಮಿತ್ತ ಭಾರತಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ಡಿ.14ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೆಸ್ಸಿ ಜೊತೆ ಭಾರತದ ದಿಗ್ಗಜರನ್ನು ಒಟ್ಟುಗೂಡಿಸಿ ಕ್ರಿಕೆಟ್ ಪಂದ್ಯ ನಡೆಸಲು ಪ್ರಸಿದ್ಧ ಇವೆಂಟ್ ಏಜೆನ್ಸಿಯೊಂದು ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಮುಂಬೈ ಕ್ರಿಕೆಟ್ ಸಂಸ್ಥೆಗೂ ಮನವಿ ಮಾಡಿದ್ದು, ಡಿ.14ರಂದು ಪಂದ್ಯ ನಡೆಸಲು ಮೈದಾನ ಬಿಟ್ಟುಕೊಡಲು ಕೋರಿದೆ ಎಂದು ವರದಿಯಾಗಿದೆ.
ಮೆಸ್ಸಿ ಅಕ್ಟೋಬರ್‌ನಲ್ಲಿ ಕೇರಳಕ್ಕೆ ಆಗಮಿಸುವ ಬಗ್ಗೆ ಸುದ್ದಿಯಾಗಿತ್ತು. ಕೇರಳ ಕ್ರೀಡಾ ಸಚಿವರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಅವರ ಭೇಟಿ ಮಾತುಕತೆಗೆ ಸದ್ಯಕ್ಕೆ ತಡೆಬಿದ್ದಿದೆ ಎಂದು ಹೇಳಲಾಗುತ್ತಿದೆ.
ಭಾರತ ಫುಟ್ಬಾಲ್ ತಂಡಕ್ಕೆ ಖಾಲಿದ್ ಜಮೀಲ್ ಕೋಚ್
ನವದೆಹಲಿ: ಭಾರತ ಫುಟ್ಬಾಲ್ ತಂಡದ ನೂತನ ಕೋಚ್ ಆಗಿ ಖಾಲಿದ್ ಜಮೀಲ್ ನೇಮಕಗೊಂಡಿದ್ದಾರೆ. ಈ ಮೂಲಕ ಕಳೆದ 13 ವರ್ಷಗಳಲ್ಲೇ ರಾಷ್ಟ್ರೀಯ ತಂಡಕ್ಕೆ ಮುಖ್ಯ ಕೋಚ್ ಆದ ಮೊದಲ ಭಾರತೀಯ ಎನಿಸಿಕೊಂಡರು. ಸಾವಿಯೊ ಮೆಡೈರಾ 2011ರಿಂದ 2012 ರ ವರೆಗೆ ಕೋಚ್ ಆಗಿದ್ದರು.
ಕಳೆದ ವರ್ಷ ಭಾರತದ ಕೋಚ್ ಆಗಿ ಆಯ್ಕೆಯಾಗಿದ್ದ ಸ್ಪೇನ್‌ನ ಮನೋಲೋ ಮಾರ್ಕೆಜ್ ಇತ್ತೀಚೆಗೆ ಹುದ್ದೆ ತೊರೆದಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಮೂರು ಹೆಸರುಗಳು ಕೇಳಿಬಂದಿದ್ದವು. ಭಾರತದ ಮಾಜಿ ಆಟಗಾರ, 48 ವರ್ಷದ ಜಮೀಲ್ ಜೊತೆಗೆ ಭಾರತದ ಮಾಜಿ ಕೋಚ್ ಸ್ಟೀಫನ್ ಕಾನ್ಸ್‌ಟಾಂಟಿನ್(ಇಂಗ್ಲೆಂಡ್) ಹಾಗೂ ಸ್ಟೀಫನ್ ಟರ್ಕೋವಿಚ್ (ಸ್ಲೊವೇಕಿಯಾ) ರೇಸ್‌ನಲ್ಲಿದ್ದರು. ಆದರೆ ಭಾರತೀಯ ಫುಟ್ಬಾಲ್ ಫೆಡರೇಷನ್(ಎಐಎಫ್‌ಎಫ್) ಖಾಲಿದ್‌ಗೆ ಮಣೆ ಹಾಕಿದೆ. ಅವರು 2 ಅಥವಾ 3 ವರ್ಷ ಅವಧಿಗೆ ಕೋಚ್ ಆಗಿ ನೇಮಕಗೊಂಡಿದ್ದಾರೆ ಎನ್ನಲಾಗಿದ್ದು, ಇನ್ನೂ ಖಚಿತವಾಗಿಲ್ಲ.
2017ರಲ್ಲಿ ಐಜಾಲ್ ಫುಟ್ಬಾಲ್ ತಂಡವನ್ನು ಐ-ಲೀಗ್ ಚಾಂಪಿಯನ್ ಪಟ್ಟಕ್ಕೇರಿದ್ದ ಜಮೀಲ್, ಸದ್ಯ ಇಂಡಿಯನ್ ಸೂಪರ್ ಲೀಗ್‌ನ ಜಮ್ಶೆಡ್‌ಪುರ ಎಫ್‌ಸಿ ಕ್ಲಬ್‌ನ ಕೋಚ್ ಆಗಿದ್ದಾರೆ. ಅವರು 2023-24, 2024-25ರಲ್ಲಿ ಸತತ 2 ಬಾರಿ ಎಐಎಫ್‌ಎಫ್‌ನ ಶ್ರೇಷ್ಠ ಕೋಚ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೇನ್, ತರುಣ್ ಸೆಮೀಸ್‌ಗೆ, ಸಾತ್ವಿಕ್-ಚಿರಾಗ್ ಹೊರಕ್ಕೆ
ಮಕಾವ್: ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್ ಹಾಗೂ ಯುವ ಪ್ರತಿಭೆ ತರುಣ್ ಮನ್ನೇಪಲ್ಲಿ ಮಕಾವ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಸಾತ್ವಿಕ್-ಚಿರಾಗ್ ಶೆಟ್ಟಿ ಸೋತು ಹೊರಬಿದ್ದಿದೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ 2ನೇ ಶ್ರೇಯಾಂಕಿತ ಸೇನ್, ಚೀನಾದ ಕ್ಷುವಾನ್ ಚೆನ್ ಝು ವಿರುದ್ಧ 21-14, 18-21, 21-14ರಲ್ಲಿ ಜಯಗಳಿಸಿದರು. ಮತ್ತೊಂದು ಕ್ವಾರ್ಟರ್‌ನಲ್ಲಿ 23 ವರ್ಷದ ತರುಣ್, ಚೀನಾದ 87ನೇ ರ್‍ಯಾಂಕಿಂಗ್‌ನ ಹು ಝೆ ವಿರುದ್ಧ 21-12, 13-21, 21-18ರಲ್ಲಿ ಜಯಭೇರಿ ಬಾರಿಸಿ, ಬಿಡಬ್ಲ್ಯುಎಫ್ ಸೂಪರ್ 300 ಟೂರ್ನಿಯಲ್ಲಿ ಮೊದಲ ಬಾರಿ ಸೆಮಿಫೈನಲ್ ತಲುಪಿದರು.
ಪುರುಷರ ಡಬಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಸಾತ್ವಿಕ್-ಚಿರಾಗ್ ಜೋಡಿ ಮಲೇಷ್ಯಾದ ಚೂಂಗ್ ಹೊನ್ ಜಿಯಾನ್-ಹೈಕಲ್ ಮುಹಮ್ಮದ್ ವಿರುದ್ಧ 14-21, 21-13, 20-22ರಲ್ಲಿ ವೀರೋಚಿತ ಸೋಲು ಕಂಡಿತು.
