ಮುಂಬೈ(ಜೂ.22): ರಣಜಿ ಟ್ರೋಫಿ ಗರಿಷ್ಠ ವಿಕೆಟ್ ಸರದಾರ, ಮಾಜಿ ಎಡಗೈ ಸ್ಪಿನ್ನರ್ ರಾಜೀಂದರ್ ಗೋಯೆಲ್(77) ಭಾನುವಾರ(ಜೂ.21) ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲಿಕ ಕಾಯಿಲೆಯಿಂದ ಬಳಲುತ್ತಿದ್ದ ಗೋಯೆಲ್ ತಮ್ಮ 77ನೇ ವಯಸ್ಸಿಗೆ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅತ್ಯದ್ಭುತ ಎಡಗೈ ಸ್ಪಿನ್ನರ್ ರಾಜೀಂದರ್ ಗೋಯೆಲ್ ನಿಧನಕ್ಕೆ ಬಿಸಿಸಿಐ ಕಂಬನಿ ಮಿಡಿದಿದೆ.    
 

27 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ರಾಜೀಂದರ್ ಗೋಯೆಲ್ 18.58ರ ಸರಾಸರಿಯಲ್ಲಿ 750 ಪ್ರಥಮ ದರ್ಜೆ ವಿಕೆಟ್ ಕಬಳಿಸಿದ್ದಾರೆ. ಗೋಯೆಲ್ ಪಟಿಯಾಲ, ಡೆಲ್ಲಿ, ದಕ್ಷಿಣ ಪಂಜಾಬ್ ಹಾಗೂ ಹರಿಯಾಣ ಪರ 44 ವರ್ಷದ ವರೆಗೂ ಕ್ರಿಕೆಟ್ ಆಡಿದ್ದರು. ಅನುಭವಿ ಸ್ಪಿನ್ನರ್ ಗೋಯೆಲ್ 59 ಬಾರಿ 5+ ಹಾಗೆಯೇ 18 ಬಾರಿ 10+ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ರಣಜಿ ಟೂರ್ನಿಯಲ್ಲೇ 637 ವಿಕೆಟ್ ಕಬಳಿಸಿರುವ ಗೋಯೆಲ್ 1984-85ರಲ್ಲಿ ಕೊನೆಯ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ಭಾರತೀಯ ದೇಸಿ ಕ್ರಿಕೆಟ್‌ನಲ್ಲಿ ಇಂದಿಗೂ ಗೋಯೆಲ್ ಹೆಸರು ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಅಂಡರ್ 19 ಕ್ರಿಕೆಟ್ ಆಟಗಾರ್ತಿ ಆತ್ಮಹತ್ಯೆಗೆ ಶರಣು..!

ಇಷ್ಟೆಲ್ಲಾ ವಿಕೆಟ್ ಕಬಳಿಸಿದ್ದರೂ ರಾಜೀಂದರ್ ಒಮ್ಮೆಯೂ ಟೀಂ ಇಂಡಿಯಾ ಪರ ಆಡಲು ಸಾಧ್ಯವಾಗದೇ ಇದ್ದಿದ್ದು ನಿಜಕ್ಕೂ ದುರಾದೃಷ್ಟಕರ. ಆ ವೇಳೆ ಬಿಷನ್ ಸಿಂಗ್ ಬೇಡಿ ಟೀಂ ಇಂಡಿಯಾದಲ್ಲಿ ಮಿಂಚುತ್ತಿದ್ದುದರಿಂದ ರಾಜೀಂದರ್ ಗೋಯೆಲ್‌ಗೆ ಅವಕಾಶ ಸಿಗಲಿಲ್ಲ. 

ರಾಜೀಂದರ್ ಗೋಯೆಲ್ ನಿಧನಕ್ಕೆ ಸಚಿನ್ ತೆಂಡುಲ್ಕರ್, ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಸುನಿಲ್ ಜೋಶಿ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಕಂಬನಿ ಮಿಡಿದಿದ್ದಾರೆ.