ಮೆಲ್ಬರ್ನ್(ಫೆ.08): ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ನಿವೃತ್ತಿ ಹಿಂಪಡೆದು ಕ್ರಿಕೆಟ್ ಆಡಲು ಮುಂದಾಗಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ್ತಿ ಏಲಿಸಾ ಫೆರ್ರಿ ಮಾತಿಗೆ ಬೆಲೆಕೊಟ್ಟು ತೆಂಡುಲ್ಕರ್ ಒಂದು ಓವರ್ ಬ್ಯಾಟಿಂಗ್ ಮಾಡಲಿದ್ದಾರೆ.

ಹೌದು, ಭಾನುವಾರ(ಫೆ.09) ಮೆಲ್ಬೊರ್ನ್‌ನ ಜಂಕ್ಷನ್ ಓವಲ್ ಮೈದಾನದಲ್ಲಿ ಬುಶ್ ಫೈರ್ ಸಹಾಯಾರ್ಥ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಹಾಗೂ ಆಡಂ ಗಿಲ್‌ಕ್ರಿಸ್ಟ್ ನೇತೃತ್ವದ ತಂಡಗಳು ಮುಖಾಮುಖಿಯಾಗಲಿವೆ. ತೆಂಡುಲ್ಕರ್, ಪಾಂಟಿಂಗ್ ಪಡೆಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಸದ್ಯ ಭಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮಹಿಳಾ ತ್ರಿಕೋನ ಟಿ20 ಸರಣಿ ನಡೆಯುತ್ತಿದೆ. ಇನ್ನು ಭಾನುವಾರ ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದ ಇನಿಂಗ್ಸ್ ಬ್ರೇಕ್ ವೇಳೆ ಆಸೀಸ್ ಮಹಿಳಾ ವೇಗದ ಬೌಲರ್ ಎಲಿಸಾ ಫೆರ್ರಿ ಅವರ ಒಂದು ಓವರ್‌ನ್ನು ಸಚಿನ್ ತೆಂಡುಲ್ಕರ್ ಎದುರಿಸಲಿದ್ದಾರೆ.

ಬುಶ್ ಫೈರ್ ಮ್ಯಾಚ್: ಸಚಿನ್-ಯುವಿ ಮುಖಾಮುಖಿ

ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ವ್ಯಾಪಕ ಕಾಡ್ಗಿಚ್ಚು ಹರಡಿತ್ತು. ಈ ವೇಳೆ 35ಕ್ಕೂ ಅಧಿಕ ಮಂದಿ ಜೀವಂತ ದಹನವಾಗಿದ್ದರು. ಇನ್ನು ಲಕ್ಷಾಂತರ ಪ್ರಾಣಿ-ಪಕ್ಷಿಗಳು ಸುಟ್ಟು ಕರಕಲಾಗಿದ್ದವು. ಇನ್ನು ಸಾವಿರಾರು ಮಂದಿ ಮನೆ-ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. 

ಸಚಿನ್‌ಗೆ ಪೆರ್ರಿ ಮನವಿ:
ಸಚಿನ್, ನೀವು ಆಸ್ಟ್ರೇಲಿಯಾದಲ್ಲಿದ್ದುಕೊಂಡು ಬುಶ್ ಫೈರ್ ಪಂದ್ಯಕ್ಕೆ ಬೆಂಬಲ ಸೂಚಿಸಿರುವುದಕ್ಕೆ ಧನ್ಯವಾದಗಳು. ನೀವು ಪಾಂಟಿಂಗ್ ತಂಡಕ್ಕೆ ಕೋಚ್ ಆಗಿರುವುದು ನನಗೆ ಗೊತ್ತಿದೆ. ನಿನ್ನೆ ರಾತ್ರಿ ಹೀಗೆ ಮಾತನಾಡುವಾಗ ನಮಗೆಲ್ಲಾ ಒಂದು ಆಲೋಚನೆ ಬಂತು. ನೀವು ನಿವೃತ್ತಿ ವಾಪಾಸ್ ಪಡೆದು, ಇನಿಂಗ್ಸ್ ಬ್ರೇಕ್ ವೇಳೆ ಒಂದು ಓವರ್ ಬ್ಯಾಟಿಂಗ್ ನಡೆಸಿದರೆ ನಿಜಕ್ಕೂ ಅದ್ಭುತವಾಗಿರುತ್ತದೆ ಎಂದು ಟ್ವಿಟರ್ ಮೂಲಕ ಫೆರ್ರಿ ಮನವಿ ಮಾಡಿದ್ದಾರೆ.

ಫೆರ್ರಿ ಮನವಿ ಸ್ಪಂದಿಸಲು ತೆಂಡುಲ್ಕರ್ ಹೆಚ್ಚು ಹೊತ್ತು ಸಮಯ ತೆಗೆದುಕೊಳ್ಳಲಿಲ್ಲ. ಫೆರ್ರಿ ಸವಾಲನ್ನು ಒಪ್ಪಿಕೊಂಡ ಸಚಿನ್, ಇದು "ಅದ್ಭುತ ಆಲೋಚನೆಯಾಗಿದೆ ಎಲಿಸಾ" ಎಂದಿದ್ದಾರೆ. ಮುಂದುವರೆದು, ನಾನು ಭುಜದ ನೋವಿಗೆ ತುತ್ತಾಗಿದ್ದೇನೆ. ಆದರೂ ಮೈದಾನಕ್ಕಿಳಿಯುತ್ತೇನೆ ಎಂದಿದ್ದಾರೆ. ಡಾಕ್ಟರ್ ಸಲಹೆಯ ಹೊರತಾಗಿಯೂ ನಾನು ಒಂದು ಓವರ್ ಬ್ಯಾಟಿಂಗ್ ಮಾಡಲು ಇಷ್ಟಪಡುತ್ತೇನೆ. ಈ ಪಂದ್ಯದಿಂದ ಸಾಕಷ್ಟು ಹಣ ಸಿಗುವ ನಿರೀಕ್ಷೆಯಿದೆ. ಆ ಓವರ್‌ನಲ್ಲಿ ನನ್ನನ್ನು ಔಟ್ ಮಾಡಿ ಎಂದು ಫೆರ್ರಿಗೆ ತೆಂಡುಲ್ಕರ್ ಪ್ರತಿ ಸವಾಲು ಹಾಕಿದ್ದಾರೆ.

29  ವರ್ಷದ ಫೆರ್ರಿ, ವಿಶ್ವ ಮಹಿಳಾ ಕ್ರಿಕೆಟ್ ಕಂಡ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಭಾರತ ವಿರುದ್ಧ ಮೊನುಕಾ ಓವರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಫೆರ್ರಿ 4 ಓವರ್ ಮಾಡಿ ಕೇವಲ 13 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಇನ್ನು ಬ್ಯಾಟಿಂಗ್‌ನಲ್ಲೂ 47 ಎಸೆತಗಳಲ್ಲಿ 49 ರನ್ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

ಸಚಿನ್ ಕೋಚ್, ಪಾಂಟಿಂಗ್ ನಾಯಕ, ಬುಶ್‌ಫೈರ್ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ವಿದಾಯ ಹೇಳುವ ಮುನ್ನ ಗರಿಷ್ಠ ಟೆಸ್ಟ್ ಪಂದ್ಯ(200), ಟೆಸ್ಟ್ ರನ್(15,921), ಗರಿಷ್ಠ ಏಕದಿನ ಪಂದ್ಯ(463), ಗರಿಷ್ಠ ಏಕದಿನ ರನ್(18426) ಸೇರಿದಂತೆ ನೂರಾರು ದಾಖಲೆಗಳನ್ನು ನಿರ್ಮಿಸಿದ್ದರು. ಆ ದಾಖಲೆಗಳು ಇಂದಿಗೂ ಅಚ್ಚಳಿಯದೇ ಉಳಿದಿವೆ.