ದುಬೈ(ಆ.24): ದಕ್ಷಿಣ ಆಫ್ರಿ​ಕಾದ ದಿಗ್ಗಜ ಆಲ್ರೌಂಡರ್‌ ಜಾಕ್‌ ಕಾಲಿಸ್‌, ಪಾಕಿ​ಸ್ತಾ​ನದ ದಿಗ್ಗಜ ಬ್ಯಾಟ್ಸ್‌ಮನ್‌ ಜಹೀರ್‌ ಅಬ್ಬಾ​ಸ್‌, ಭಾರತ ಮೂಲದ ಆಸ್ಪ್ರೇ​ಲಿ​ಯಾದ ಮಾಜಿ ನಾಯಕಿ ಲೀಸಾ ಸ್ತಾಲೇ​ಕರ್‌ರನ್ನು ಭಾನು​ವಾರ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಭಾಜನರಾಗಿದ್ದಾರೆ.. 

ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾದ ದಕ್ಷಿಣ ಆಫ್ರಿಕಾದ ನಾಲ್ಕನೇ ಕ್ರಿಕೆಟ್ ಆಟಗಾರ ಎನ್ನುವ ಗೌರವಕ್ಕೆ ಜಾಕ್ ಕಾಲಿಸ್ ಪಾತ್ರರಾಗಿದ್ದಾರೆ. ಜಹೀರ್ ಅಬ್ಬಾಸ್ ಪಾಕಿಸ್ತಾನದ ಆರನೇ ಆಟಗಾರ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಇನ್ನು ಲೀಸಾ ಸ್ತಾಲೇ​ಕರ್‌ ಆಸ್ಟ್ರೇಲಿಯಾದ 27ನೇ ಹಾಗೂ 9ನೇ ಮಹಿಳಾ ಆಟಗಾರ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. 

ಇದುವರೆಗೂ ಒಟ್ಟು 93 ಆಟಗಾರರು ಹಾಲ್‌ ಆಫ್ ಫೇಮ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ 5 ವರ್ಷಗಳ ಬಳಿಕ ಹಾಲ್‌ ಆಫ್ ಫೇಮ್ ಗೌರವಕ್ಕೆ ಭಾಜನರಾಗಲು ಅರ್ಹತೆಗಿಟ್ಟಿಸಿಕೊಳ್ಳಲಿದ್ದಾರೆ. 

1995ರಿಂದ 2014ರ ಅವಧಿಯಲ್ಲಿ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಲ್ರೌಂಡರ್‌ಗಳ ಪೈಕಿ ಜಾಕ್ ಕಾಲಿಸ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಈ ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಕಾಲಿಸ್ 166 ಟೆಸ್ಟ್, 328 ಏಕದಿನ ಹಾಗೂ 25 ಟಿ20 ಪಂದ್ಯಗಳನ್ನಾಡಿದ್ದಾರೆ. 44 ವರ್ಷದ ಕಾಲಿಸ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ  ಕ್ರಮವಾಗಿ 13289 ಹಾಗೂ 11579 ರನ್ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ ಪರ ಗರಿಷ್ಠ ರನ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದರ ಜತೆಗೆ 292 ಟೆಸ್ಟ್ ಹಾಗೂ 273 ಏಕದಿನ ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಜಾವಲಿನ್ ಪಟು ನೀರಜ್‌ಗಿಲ್ಲ ಖೇಲ್‌ ರತ್ನ: ನೆಟ್ಟಿ​ಗರ ಆಕ್ಷೇಪ..!

ಲೀಸಾ ಸ್ತಾಲೇ​ಕರ್‌ ಆಸ್ಟ್ರೇಲಿಯಾ ಪರ 8 ಟೆಸ್ಟ್, 125 ಏಕದಿನ ಹಾಗೂ 54 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನು ಏಷ್ಯಾದ ಬ್ರಾಡ್‌ಮನ್ ಎಂದೇ ಗುರುತಿಸಲ್ಪಡುವ ಜಹೀರ್ ಅಬ್ಬಾಸ್ ಪಾಕಿಸ್ತಾನ ಪರ 78 ಟೆಸ್ಟ್ ಹಾಗೂ 62 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 5062 ಹಾಗೂ 2572 ರನ್ ಬಾರಿಸಿದ್ದಾರೆ.   ಕೊರೋನಾ ಭೀತಿ​ಯಿಂದಾಗಿ ಕಾರ್ಯ​ಕ್ರ​ಮ​ವನ್ನು ಆನ್‌ಲೈನ್‌ ಮೂಲಕ ನಡೆ​ಸ​ಲಾ​ಯಿತು.