Asianet Suvarna News Asianet Suvarna News

Ross Taylor Retirement ಆಟ ಮುಗಿಸಿದ ಟೇಲರ್‌ಗೆ ಗೆಲುವಿನ ವಿದಾಯ ನೀಡಿದ ಕಿವೀಸ್‌..!

* ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡಿದ ರಾಸ್ ಟೇಲರ್

* 450 ಅಂತಾರಾಷ್ಟ್ರೀಯ ಪಂದ್ಯವನ್ನಾಡಿ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ರಾಸ್ ಟೇಲರ್

* ರಾಸ್ ಟೇಲರ್‌ಗೆ ಸರಣಿ ಗೆಲುವಿನ ಉಡುಗೊರೆ ನೀಡಿದ ನ್ಯೂಜಿಲೆಂಡ್ ತಂಡ

Legendary Cricketer Ross Taylor plays last innings for New Zealand cricket team kvn
Author
Bengaluru, First Published Apr 4, 2022, 4:59 PM IST

ಹ್ಯಾಮಿಲ್ಟನ್‌(ಏ.04): ನ್ಯೂಜಿಲೆಂಡ್ ಕ್ರಿಕೆಟ್ ಕಂಡ ದಿಗ್ಗಜ ಬ್ಯಾಟರ್ ರಾಸ್ ಟೇಲರ್ (Ross Taylor) ತಮ್ಮ 16 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನಕ್ಕೆ ಇಂದು ತೆರೆ ಎಳೆದಿದ್ದಾರೆ. ಈ ಮೊದಲೇ ತಾವು ನಿವೃತ್ತಿಯಾಗುವ ದಿನವನ್ನು ರಾಸ್ ಟೇಲರ್ ಘೋಷಿಸಿದ್ದರು. ಹೀಗಾಗಿ ನೆದರ್‌ಲೆಂಡ್ಸ್‌ ವಿರುದ್ದ ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲಿಳಿದ ರಾಸ್‌ ಟೇಲರ್ ಅವರಿಗೆ ಮೈದಾನಕ್ಕಿಳಿದಾಗ ಹಾಗೂ ವಾಪಾಸ್ಸಾಗುವಾಗ ಗಾರ್ಡ್ ಆಫ್ ಆನರ್ ಗೌರವ ಸಲ್ಲಿಸುವ ಮೂಲಕ ರಾಸ್ ಕೊನೆಯ ಪಂದ್ಯವನ್ನು ಸ್ಮರಣೀಯವಾಗಿಸಿಕೊಟ್ಟರು. ಇನ್ನು ನೆದರ್‌ಲೆಂಡ್ ವಿರುದ್ದದ ಕೊನೆಯ ಪಂದ್ಯವನ್ನು ನ್ಯೂಜಿಲೆಂಡ್ 115 ರನ್‌ಗಳ ಅಂತರದಲ್ಲಿ ಜಯಿಸುವ ಮೂಲಕ ಕಿವೀಸ್ ಪಡೆ ದಿಗ್ಗಜ ಕ್ರಿಕೆಟಿಗನಿಗೆ ಗೆಲುವಿನ ಸಿಹಿ ಉಣಬಡಿಸಿದೆ.

ಇದು ರಾಸ್ ಟೇಲರ್ ನ್ಯೂಜಿಲೆಂಡ್ ಪರ ಆಡುತ್ತಿರುವ 450ನೇ ಹಾಗೂ ಕೊನೆಯ ಪಂದ್ಯ ಎನಿಸಿತ್ತು. ತಮ್ಮ ಕೊನೆಯ ಪಂದ್ಯದಲ್ಲಿ ರಾಸ್ ಟೇಲರ್ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.  38 ವರ್ಷದ ರಾಸ್ ಟೇಲರ್ ಈ ವರ್ಷಾರಂಭದಲ್ಲೇ ದಕ್ಷಿಣ ಆಫ್ರಿಕಾ ಎದುರು ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. ಇದೀಗ ತಮ್ಮ ತವರು ಮೈದಾನವೆನಿಸಿಕೊಂಡಿರುವ ಸೆಡನ್ ಪಾರ್ಕ್‌ನಲ್ಲಿ ರಾಸ್ ಟೇಲರ್ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿ, 16 ವರ್ಷಗಳ ವರ್ಣರಂಜಿತ ಕ್ರಿಕೆಟ್ ಬದುಕಿಗೆ ತೆರೆ ಎಳೆದಿದ್ದಾರೆ. ಈ ಸಂದರ್ಭದಲ್ಲಿ ರಾಸ್ ಟೇಲರ್ ಮಕ್ಕಳಾದ ಮೆಕೆಂಜಿ, ಜಾಂಟಿ, ಅಡಿಲೇಡ್‌, ಕಿವೀಸ್ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಜತೆಗಿದ್ದರು. ರಾಸ್ ಟೇಲರ್ ಕೊನೆಯ ಪಂದ್ಯದಲ್ಲಿ 16 ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್ ಸಹಿತ 14 ರನ್‌ ಬಾರಿಸಿ ವ್ಯಾನ್‌ ಬೀಕ್‌ಗೆ ವಿಕೆಟ್‌ ಒಪ್ಪಿಸಿದರು.

ರಾಸ್ ಟೇಲರ್ 2006ರಲ್ಲಿ ನ್ಯೂಜಿಲೆಂಡ್ ಪರ ಮೊದಲ ಏಕದಿನ ಪಂದ್ಯವನ್ನಾಡಿದ್ದರು. ಇದಾದ ಮರು ವರ್ಷವೇ ಟೆಸ್ಟ್‌ ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದ್ದರು. ನ್ಯೂಜಿಲೆಂಡ್ ಪರ ರಾಸ್ ಟೇಲರ್‌ 112 ಟೆಸ್ಟ್ ಪಂದ್ಯಗಳನ್ನಾಡಿ 19 ಶತಕ ಸಹಿತ 7,683 ರನ್ ಬಾರಿಸಿದ್ದಾರೆ. ಇನ್ನು 236 ಏಕದಿನ ಪಂದ್ಯಗಳಿಂದ 8,593 ರನ್ ಹಾಗೂ 102 ಟಿ20 ಪಂದ್ಯಗಳಿಂದ 1,909 ರನ್‌ ಬಾರಿಸಿದ್ದಾರೆ. ರಾಸ್ ಟೇಲರ್‌ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದು ಹಲವಾರು ಸ್ಮರಣೀಯ ಇನಿಂಗ್ಸ್‌ಗಳನ್ನಾಡಿದ್ದಾರೆ. ಇದಷ್ಟೇ ಅಲ್ಲದೇ ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ನಲ್ಲಿ ನ್ಯೂಜಿಲೆಂಡ್ ತಂಡವು ಚಾಂಪಿಯನ್ ಆಗುವಲ್ಲಿ ರಾಸ್ ಟೇಲರ್ ಮಹತ್ವದ ಪಾತ್ರ ವಹಿಸಿದ್ದರು.

Ross Taylor Announces Retirement: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ರಾಸ್ ಟೇಲರ್‌..!

ರಾಸ್ ಟೇಲರ್‌ ಅವರ ಕೊನೆಯ ಇನಿಂಗ್ಸ್ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ರಾಸ್ ಮೈದಾನಕ್ಕಿಳಿಯುವುದು ಕೊಂಚ ತಡವಾಯಿತು. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ಮಾರ್ಟಿನ್ ಗಪ್ಟಿಲ್ ಹಾಗೂ ವಿಲ್ ಯಂಗ್ 203 ರನ್‌ಗಳ ಜತೆಯಾಟವಾಡಿದ್ದರಿಂದ, ರಾಸ್ ಟೇಲರ್ 39ನೇ ಓವರ್‌ನಲ್ಲಿ ಬ್ಯಾಟಿಂಗ್‌ ಮಾಡಲು ಕ್ರೀಸ್‌ಗಿಳಿದರು. 

ಆರಂಭಿಕ ಬ್ಯಾಟರ್‌ ಮಾರ್ಟಿನ್‌ ಗಪ್ಟಿಲ್‌ 106 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಿಲ್ ಯಂಗ್ 120 ರನ್ ಬಾರಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ ತಂಡವು 8 ವಿಕೆಟ್ ಕಳೆದುಕೊಂಡು 333 ರನ್ ಬಾರಿಸಿತ್ತು. ಈ ಕಠಿಣ ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್ ತಂಡವು ಮ್ಯಾಟ್ ಹೆನ್ರಿ(4-36) ಮಾರಕ ದಾಳಿಗೆ ತತ್ತರಿಸಿ ಕೇವಲ 218 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್‌ವಾಶ್ ಮುಖಭಂಗ ಅನುಭವಿಸಿತು.

Follow Us:
Download App:
  • android
  • ios