ಕೊಲಂಬೊ(ಆ.10): ಒಂದೂವರೆ ದಶಕಗಳ ಕಾಲ ಶ್ರೀಲಂಕಾ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕಾರ ಗುರುತಿಸಿಕೊಂಡಿದ್ದರು. ಈ ಅವಧಿಯಲ್ಲಿ ಸಂಗಕ್ಕಾರ ಸುಮಾರು 500ಕ್ಕೂ ಅಧಿಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದ್ವೀಪ ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಟೆಸ್ಟ್ ಹಾಗೂ ಏಕದಿನ ಈ ಎರಡು ಮಾದರಿಯಲ್ಲಿ 10,000+ ರನ್ ಬಾರಿಸಿದ ಕೆಲವೇ ಕೆಲವು ಎಡಗೈ ಬ್ಯಾಟ್ಸ್‌ಮನ್‌ಗಳಲ್ಲಿ ಸಂಗಕ್ಕಾರ ಕೂಡಾ ಒಬ್ಬರು.

2000ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಂಗಾ, ಲಂಕಾ ಪರ 134 ಟೆಸ್ಟ್, 404 ಏಕದಿನ ಹಾಗೂ 56 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಅವಧಿಯಲ್ಲಿ ಸಂಗಕ್ಕಾರ ಹಲವಾರು ವಿಶ್ವದರ್ಜೆಯ ಬೌಲರ್‌ಗಳನ್ನು ಎದುರಿಸಿದ್ದಾರೆ. ಇತ್ತೀಚೆಗೆ ಮೆರಿಲ್ಬೂನ್ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಪ್ರಶ್ನೋತ್ತರ ಕಾರ್ಯಕ್ರಮವೊಂದರಲ್ಲಿ ಕುಮಾರ ಸಂಗಕ್ಕಾರ ತಾವೆದುರಿಸಿದ ಕಠಿಣ ಬೌಲರ್‌ಗಳು ಯಾರು ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ಹೌದು, ಸಂಗಕ್ಕಾರ ಇಬ್ಬರು ಎಡಗೈ ವೇಗಿಗಳನ್ನು ಹೆಸರಿಸಿದ್ದು, ತಮ್ಮ ಕ್ರಿಕೆಟ್ ಜೀವನದಲ್ಲೇ ವಾಸೀಂ ಅಕ್ರಂ ಹಾಗೂ ಜಹೀರ್ ಖಾನ್ ಬೌಲಿಂಗ್ ಎದುರಿಸುದು ಸಾಕಷ್ಟು ಕಷ್ಟವಾಗುತಿತ್ತು. ಪಾಕ್ ಮಾಜಿ ವೇಗಿ ವಾಸೀಂ ಅಕ್ರಂ ತಮ್ಮ ಮಾರಕ ರಿವರ್ಸ್‌ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸುತ್ತಿದ್ದರು. ಹೀಗಾಗಿಯೇ ಅಕ್ರಂ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ. ಸ್ವಿಂಗ್ ಆಫ್ ಕಿಂಗ್ ಖ್ಯಾತಿಯ ಅಕ್ರಂ ಪಾಕಿಸ್ತಾನ ಪರ 104 ಟೆಸ್ಟ್ ಹಾಗೂ 356 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 414 ಹಾಗೂ 502 ವಿಕೆಟ್ ಕಬಳಿಸಿದ್ದಾರೆ.

ಧೋನಿಗೆ ಬೇಕಂತಲೇ ಬೀಮರ್ ಎಸೆದಿದ್ದೆ: ಸತ್ಯ ಒಪ್ಪಿಕೊಂಡ ಶೊಯೇಬ್ ಅಖ್ತರ್

ಇನ್ನು ಜಾವಗಲ್ ಶ್ರೀನಾಥ್ ಬಳಿಕ ಜಹೀರ್ ಖಾನ್ ಕೂಡಾ ಒಂದು ದಶಕಗಳ ಕಾಲ ಟೀಂ ಇಂಡಿಯಾ ವೇಗದ ಬೌಲಿಂಗ್ ಸಾರಥ್ಯ ವಹಿಸಿದ್ದರು. ಮೂರು ಮಾದರಿಯ ಕ್ರಿಕೆಟ್‌ನಲ್ಲೂ ತಂಡದ ಪ್ರಮುಖ ಬೌಲರ್‌ ಆಗಿ ಗುರುತಿಸಿಕೊಂಡಿದ್ದ ಜಹೀರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕಪಿಲ್ ದೇವ್ ಬಳಿಕ ಅತ್ಯಂತ ಯಶಸ್ವಿ ಭಾರತೀಯ ವೇಗಿ ಎನಿಸಿಕೊಂಡಿದ್ದರು. 92 ಟೆಸ್ಟ್, 200 ಏಕದಿನ ಹಾಗೂ 17 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ಜಹೀರ್ ಕ್ರಮವಾಗಿ 311, 282 ಮತ್ತು 17 ವಿಕೆಟ್ ಪಡೆದಿದ್ದಾರೆ. ಜಹೀರ್ ಖಾನ್ ಮೂರು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಮೂರು ಟೂರ್ನಿಗಳಲ್ಲೂ ಟೀಂ ಇಂಡಿಯಾ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು.

ವಾಸೀಂ ಅಕ್ರಂ ಯಾವಾಗಲೂ ದುಃಸ್ವಪ್ನವಾಗಿ ಕಾಡುತ್ತಿದ್ದರು. ನಾನು ಜಹೀರ್ ಖಾನ್ ಅವರನ್ನು ಸಾಕಷ್ಟು ಬಾರಿ ಎದುರಿಸಿದ್ದೇನೆ. ಆದರೆ ಅವರನ್ನು ಎದುರಿಸುವುದು ಸಾಕಷ್ಟು ಕಠಿಣವಾಗಿರುತ್ತಿತ್ತು ಎಂದು ಮಾಜಿ ಲಂಕಾ ನಾಯಕ ಸಂಗಕ್ಕಾರ ಹೇಳಿದ್ದಾರೆ.