ಕರಾಚಿ(ಆ.08): ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೊಯೇಬ್ ಅಖ್ತರ್ 2006ರಲ್ಲಿ ನಡೆದ ಫೈಸಲಾಬಾದ್ ಟೆಸ್ಟ್‌ನಲ್ಲಿ ಉದ್ದೇಶಪೂರ್ವಕವಾಗಿಯೇ ಮಹೇಂದ್ರ ಸಿಂಗ್ ಧೋನಿಗೆ ಬೀಮರ್ ಎಸೆದಿದ್ದೆ ಎಂದು ಸತ್ಯ ಒಪ್ಪಿಕೊಂಡಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಈ ರೀತಿ ಒಮ್ಮೆ ಮಾತ್ರ ಹೀಗೆ ಮಾಡಿರುವುದಾಗಿ ಅಖ್ತರ್ ಹೇಳಿದ್ದಾರೆ.

ಗಾಯದ ಸಮಸ್ಯೆ ಹೇಗೆ ತನ್ನ ಕ್ರಿಕೆಟ್ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರಿತು ಎನ್ನುವುದನ್ನು ಮಾಜಿ ಕ್ರಿಕೆಟಿಗ ಆಕಾಶ ಚೋಪ್ರಾ ಬಳಿ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಲಾಂಗ್ ರನ್‌ ಅಪ್‌ನಿಂದ ಹಿಂದೆ ಸರಿದ ಬಗ್ಗೆಯೂ ಮೆಲುಕು ಹಾಕಿದ್ದಾರೆ. 1997ರಲ್ಲಿ ನನಗೆ ಮಂಡಿ ನೋವು ಕಾಡಲಾರಂಭಿಸಿತು. ಕ್ರಿಕೆಟ್ ಆಡಬೇಕಿದ್ದರೆ ಒಂದು ನೋವು ನಿವಾರಕ ಇಂಜೆಕ್ಷನ್ ತೆಗೆದುಕೊಂಡು ಮೈದಾನಕ್ಕೆ ಇಳಿಯುತ್ತಿದ್ದೆ ಎಂದು ರಾವುಲ್‌ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಅಖ್ತರ್ ಹೇಳಿದ್ದಾರೆ.

ಕಳೆದ ವರ್ಷ ಅಂದರೆ 2019ರ ಆಗಸ್ಟ್‌ನಲ್ಲಿ ಅಖ್ತರ್ ಬಲಿಗಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಯಶಸ್ವಿ ಶಸ್ತ್ರ ಚಿಕಿತ್ಸೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

2006ರಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿತ್ತು. ಈ ವೇಳೆ ಅಖ್ತರ್ ಮೊಳಕಾಲಿನ ಮೂಳೆ ಮುರಿದುಹೋಗಿತ್ತು. ಇಂತಹ ನೋವಿನ ಸಂದರ್ಭದಲ್ಲೂ ಭಾರತ ವಿರುದ್ಧ ಕಣಕ್ಕಿಳಿದಿದ್ದೆ. ಅಸಾಧ್ಯವಾದ ನೋವನ್ನು ತಡೆದುಕೊಳ್ಳಲು ಆ ಕಾಲಿಗೆ ಪ್ರತಿದಿನ ಒಂದೊಂದು ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದೆ. ಅದೊಂದು ಮ್ಯಾಚ್ ಆಡು ಎಂದು ಕೇಳಿಕೊಂಡಿದ್ದರು. ಹೆಚ್ಚು ಕಡಿಮೆ ಮ್ಯಾಚ್ ಮುಗಿಯುವ ವೇಳೆಗೆ ನನ್ನ ಕಾಲು ನೇತಾಡುವಂತಾಗಿತ್ತು ಎಂದು ಅಖ್ತರ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಧೋನಿ ಮೇಲೆ ಬೇಕಂತಲೇ ಬೀಮರ್ ಪ್ರಯೋಗ:

ಫೈಸಲಾಬಾದ್ ಟೆಸ್ಟ್ ಪಂದ್ಯದಲ್ಲಿ ಧೋನಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದರು. ಬಲಿಷ್ಠ ಪಾಕಿಸ್ತಾನದ ಬೌಲಿಂಗ್ ಪಡೆಯನ್ನು ಧೋನಿ ಚಿಂದಿ ಉಡಾಯಿಸಿದ್ದರು. ನನಗಿನ್ನು ನಾವು 8-9 ಓವರ್‌ಗಳ ಚಿಕ್ಕ ಸ್ಪೆಲ್ ಮಾಡಿದ್ದೆ. ಧೋನಿ ಶತಕ ಬಾರಿಸಿದ್ದರು. ಈ ವೇಳೆ ನಾನು ಉದ್ದೇಶಪೂರ್ವಕವಾಗಿಯೇ ಧೋನಿ ಮೇಲೆ ಬೀಮರ್ ಎಸೆದಿದ್ದೆ. ಬಳಿಕ ಕ್ಷಮೆಯನ್ನು ಕೇಳಿದ್ದೆ ಎಂದು ಅಖ್ತರ್ ಹೇಳಿದ್ದಾರೆ.

ತವರಿನಲ್ಲಿ ಬ್ಯಾಟ್ ಹಿಡಿದು ಅಭ್ಯಾಸ ಆರಂಭಿಸಿದ ಧೋನಿ

ಆಗ ಆಕಾಶ್ ಚೋಪ್ರಾ. ಬೌಲರ್‌ಗಳು ಬೇಕಂತಲೇ ಬೀಮರ್ ಎಸೆಯುತ್ತಾರೋ ಅಥವಾ ಅಚಾತುರ್ಯದಿಂದ ಹೀಗೆ ಆಗುತ್ತದೆಯೇ ಎಂದು ಮಾಜಿ ವೇಗಿಯನ್ನು ಪ್ರಶ್ನಿಸಿದ್ದಾರೆ. ಆಗ ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಅದೇ ಮೊದಲು ಹಾಗೂ ಅದೇ ಕೊನೆಯದಾಗಿ ಉದ್ದೇಶಪೂರ್ವಕವಾಗಿ ಬೀಮರ್ ಎಸೆದಿದ್ದೆ. ಯಾಕೆಂದರೆ ಆ ಮಟ್ಟಿಗೆ ನಾನು ಹತಾಶೆಗೆ ಒಳಗಾಗಿದ್ದೆ. ನಾನು ಎಷ್ಟೇ ವೇಗವಾಗಿ ಬೌಲಿಂಗ್ ಮಾಡುತ್ತಿದ್ದರೂ ಧೋನಿ ಅಷ್ಟೇ ವೇಗವಾಗಿ ಬೌಂಡರಿ ಬಾರಿಸುತ್ತಿದ್ದರು ಎಂದು ಅಖ್ತರ್ ಹೇಳಿದ್ದಾರೆ.

ಫೈಸಲಾಬಾದ್ ಟೆಸ್ಟ್‌ನಲ್ಲಿ ಧೋನಿ ಅಜೇಯ 135 ರನ್ ಬಾರಿಸಿದ್ದಾಗ ಅಖ್ತರ್ ಭೀಮರ್ ಎಸೆದಿದ್ದರು. ಅದಾಗಲೇ ಧೋನಿ ಒಂದೇ ಓವರ್‌ನಲ್ಲಿ ಅಖ್ತರ್‌ಗೆ ಮೂರು ಬೌಂಡರಿ ಚಚ್ಚಿದ್ದರು. ಅಂತಿಮವಾಗಿ ಧೋನಿ ಆಲ್ರೌಂಡರ್ ಇರ್ಫಾನ್ ಪಠಾಣ್ ಜತೆಗೂಡಿ 210 ರನ್‌ಗಳ ಜತೆಯಾಟವಾಡಿದ್ದರು. ಧೋನಿ 148 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.

ಹೀಗಿತ್ತು ನೋಡಿ ಧೋನಿ ಬಾರಿಸಿದ ಮೊದಲ ಟೆಸ್ಟ್ ಶತಕ: