Test Rankings: ಲಬುಶೇನ್-ಸ್ಮಿತ್-ಹೆಡ್, ಆಸೀಸ್ ಬ್ಯಾಟರ್‌ಗಳು ಟಾಪ್-3!
ವಿಶ್ವ ಟೆಸ್ಟ್ ಬ್ಯಾಟರ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಲಬುಶೇನ್ ನಂ.1, ಸ್ಮಿತ್ ನಂ.2, ಹೆಡ್ ನಂ.3
ಒಂದೇ ದೇಶದ ಮೂವರು ಆಟಗಾರರಿಗೆ ಅಗ್ರ-3ರಲ್ಲಿ ಸ್ಥಾನ: 1984ರ ಬಳಿಕ ಇದೇ ಮೊದಲು
ದುಬೈ(ಜೂ.15): ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಪ್ರೇಲಿಯಾದ ಆಟಗಾರರೇ ಅಗ್ರ-3 ಸ್ಥಾನಗಳನ್ನು ಅಲಂಕರಿಸಿದ್ದು, 1984ರ ಬಳಿಕ ಒಂದೇ ದೇಶದ ಮೂವರು ಆಟಗಾರರು ಮೊದಲ 3 ಸ್ಥಾನ ಪಡೆದಿರುವ ಅಪರೂಪದ ಸಾಧನೆಗೆ ಟೆಸ್ಟ್ ಕ್ರಿಕೆಟ್ ಸಾಕ್ಷಿಯಾಗಿದೆ. ಟ್ರ್ಯಾವಿಸ್ ಹೆಡ್ 3 ಸ್ಥಾನ ಏರಿಕೆ ಕಂಡು 3ನೇ ಸ್ಥಾನ ಪಡೆದರೆ, ಒಂದು ಸ್ಥಾನ ಏರಿಕೆ ಕಂಡ ಸ್ಟೀವ್ ಸ್ಮಿತ್ 2ನೇ ಸ್ಥಾನ ಗಳಿಸಿದ್ದಾರೆ. ಮಾರ್ನಸ್ ಲಬುಶೇನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಭಾರತ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ಮೊದಲ ಇನ್ನಿಂಗ್‌್ಸನಲ್ಲಿ ಟ್ರಾವಿಸ್ ಹೆಡ್ 163 ರನ್ ಸಿಡಿಸಿದ್ದರು. ಸ್ಟೀವ್ ಸ್ಮಿತ್ ಕೂಡ ಶತಕ ಬಾರಿಸಿ, ಆಸ್ಪ್ರೇಲಿಯಾ ಮೊದಲ ಇನ್ನಿಂಗ್ಸಲ್ಲಿ ದೊಡ್ಡ ಮೊತ್ತ ಕಲೆಹಾಕಲು ನೆರವಾಗಿದ್ದರು.
ಮಾರ್ನಸ್ ಲಬುಶೇನ್ 903 ರೇಟಿಂಗ್ ಅಂಕ ಹೊಂದಿದ್ದರೆ, ಸ್ಟೀವ್ ಸ್ಮಿತ್ 885 ಹಾಗೂ ಹೆಡ್ 884 ಅಂಕ ಪಡೆದಿದ್ದಾರೆ. ಈ ಮೂವರ ನಡುವೆ ಶುಕ್ರವಾರದಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಆಷಸ್ ಸರಣಿಯಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.
ರೋಹಿತ್ ಶರ್ಮಾಗೆ ಟೆಸ್ಟ್ ನಾಯಕರಾಗಲು ಆಸಕ್ತಿಯಿರಲಿಲ್ಲ, ಈ ಇಬ್ಬರು ಸೇರಿ ಒಪ್ಪಿಸಿದ್ದು..!
ವಿಂಡೀಸರ ದಾಖಲೆ ಸಮ: ಕೊನೆ ಬಾರಿಗೆ ಒಂದೇ ದೇಶದ ಮೂವರು ಆಟಗಾರರು ಅಗ್ರ-3 ಸ್ಥಾನಗಳನ್ನು ಪಡೆದಿದ್ದು 1984ರ ಡಿಸೆಂಬರ್‌ನಲ್ಲಿ. ವೆಸ್ಟ್‌ಇಂಡೀಸ್‌ನ ದಿಗ್ಗಜ ಬ್ಯಾಟರ್‌ಗಳಾದ ಗ್ರಾರ್ಡನ್ ಗ್ರೀನಿಡ್ಜ್(810 ರೇಟಿಂಗ್ ಅಂಕ), ಕ್ಲೈವ್ ಲಾಯ್ಡ್(787) ಹಾಗೂ ಲ್ಯಾರಿ ಗೋಮ್ಸ್(773) ಕ್ರಮವಾಗಿ ಮೊದಲ ಸ್ಥಾನಗಳಲ್ಲಿದ್ದರು.
ರ‍್ಯಾಂಕಿಂಗ್ ಪಟ್ಟಿಗೆ ಮರಳಿದ ರಹಾನೆ!
ಆಸೀಸ್ ವಿರುದ್ಧ ಫೈನಲ್‌ನಲ್ಲಿ ಕ್ರಮವಾಗಿ 89 ಹಾಗೂ 46 ರನ್ ಗಳಿಸಿದ ಅಜಿಂಕ್ಯ ರಹಾನೆ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಗೆ ಮರಳಿದ್ದು, 37ನೇ ಸ್ಥಾನ ಪಡೆದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅವರು 2022ರ ಜನವರಿಯಲ್ಲಿ ದ.ಆಫ್ರಿಕಾ ವಿರುದ್ಧ ಟೆಸ್ಟ್ ಆಡಿದ್ದರು. ಆಗ ಅವರು 26ನೇ ಸ್ಥಾನದಲ್ಲಿದ್ದರು. ಇದೇ ವೇಳೆ ಶಾರ್ದೂಲ್ ಠಾಕೂರ್ 6ನೇ ಸ್ಥಾನ ಏರಿಕೆ ಕಂಡು ಬ್ಯಾಟರ್‌ಗಳ ಪಟ್ಟಿಯಲ್ಲಿ 94ನೇ ಸ್ಥಾನ ಪಡೆದಿದ್ದಾರೆ. ಫೈನಲ್‌ನಲ್ಲಿ ಆಡದಿದ್ದರೂ ಬೌಲರ್‌ಗಳ ಪಟ್ಟಿಯಲ್ಲಿ ಆರ್.ಅಶ್ವಿನ್ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ.
ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರಕ್ಕೆ ಕೆ.ಎಲ್.ರಾಹುಲ್
ಬೆಂಗಳೂರು: ಐಪಿಎಲ್ ವೇಳೆ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತಾರಾ ಕ್ರಿಕೆಟಿಗ ಕೆ.ಎಲ್.ರಾಹುಲ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ನಲ್ಲಿ ಪುನಶ್ಚೇತನ ಶಿಬಿರಕ್ಕೆ ಹಾಜರಾಗಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್, ತಾವು ಚೇತರಿಕೆಯ ಹಾದಿಯಲ್ಲಿ ಇರುವುದಾಗಿ ತಿಳಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಭಾರತ ತಂಡಕ್ಕೆ ವಾಪಸಾಗಲು ರಾಹುಲ್ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.