Asianet Suvarna News Asianet Suvarna News

ರೋಹಿತ್‌ ಶರ್ಮಾಗೆ ಟೆಸ್ಟ್ ನಾಯಕರಾಗಲು ಆಸಕ್ತಿಯಿರಲಿಲ್ಲ, ಈ ಇಬ್ಬರು ಸೇರಿ ಒಪ್ಪಿಸಿದ್ದು..!

ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವದ ರಹಸ್ಯ ಬಯಲು
ಟೆಸ್ಟ್‌ ನಾಯಕರಾಗಲು ರೋಹಿತ್‌ ಶರ್ಮಾಗಿರಲಿಲ್ಲ ಆಸಕ್ತಿ
ಬಿಸಿಸಿಐನ ಇಬ್ಬರು ವ್ಯಕ್ತಿಗಳ ಮನವೊಲಿಕೆಯ ಬಳಿಕ ಹಿಟ್‌ಮ್ಯಾನ್ ಸಮ್ಮತಿ

Rohit Sharma Was not Keen to become India test captain after Kohli Sourav Ganguly Jay Shah Convinced him says report kvn
Author
First Published Jun 14, 2023, 5:29 PM IST

ನವದೆಹಲಿ(ಜೂ.14): 2021-22ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 1-2 ಅಂತರದಲ್ಲಿ ಕೈಚೆಲ್ಲಿತ್ತು. ಇದರ ಬೆನ್ನಲ್ಲೇ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ 2022ರ ಫೆಬ್ರವರಿಯಲ್ಲಿ ರೋಹಿತ್ ಶರ್ಮಾ ಅವರನ್ನು ಭಾರತದ ಪೂರ್ಣಾವಧಿ ಟೆಸ್ಟ್ ತಂಡದ ನಾಯಕರನ್ನಾಗಿ ಪಟ್ಟ ಕಟ್ಟಲಾಯಿತು. 

ಇದಕ್ಕೂ ಮೊದಲು 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ವಿರಾಟ್ ಕೊಹ್ಲಿ, ಭಾರತ ಟಿ20 ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದರು. ಇದಾದ ಬಳಿಕ ಅದೇ ವರ್ಷದ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಸೀಮಿತ ಓವರ್‌ಗಳ ತಂಡವನ್ನು ಆಯ್ಕೆ ಮಾಡುವಾಗ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಯಿತು. ಇದರ ಬೆನ್ನಲ್ಲೇ 2022ರ ಜನವರಿಯಲ್ಲಿ ವಿರಾಟ್‌ ಕೊಹ್ಲಿ ಟೆಸ್ಟ್‌ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದರು. 

ವಿರಾಟ್ ಕೊಹ್ಲಿಯಿಂದ ತೆರವಾದ ಭಾರತ ಟೆಸ್ಟ್ ತಂಡದ ನಾಯಕ ಹುದ್ದೆಗೆ ರೋಹಿತ್ ಶರ್ಮಾ ಆಕಾಂಕ್ಷಿಯಾಗಿರಲಿಲ್ಲ. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್‌ ಶಾ ಇಬ್ಬರು ಸೇರಿ ರೋಹಿತ್ ಶರ್ಮಾ ಮನವೊಲಿಸಿ ನಾಯಕರಾಗುವಂತೆ ಮಾಡಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ. 

ಬಿಸಿಸಿಐ ಮೂಲಗಳ ಪ್ರಕಾರ, ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಳಿಕ 2022ರಲ್ಲಿ ರೋಹಿತ್ ಶರ್ಮಾ, ಭಾರತ ಟೆಸ್ಟ್ ತಂಡದ ನಾಯಕರಾಗಲು ಉತ್ಸುಕರಾಗಿರಲಿಲ್ಲ. ಆ ಸಂದರ್ಭದಲ್ಲಿ ಬಿಸಿಸಿಐನಲ್ಲಿ ಉನ್ನತ ಸ್ಥಾನದಲ್ಲಿದ್ದ ಇಬ್ಬರು(ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ) ರೋಹಿತ್ ಶರ್ಮಾ ಅವರ ಮನವೊಲಿಸಿ ಟೆಸ್ಟ್ ನಾಯಕರಾಗಲು ಒಪ್ಪಿಸಿದ್ದರು. ಯಾಕೆಂದರೆ ಅದೇ ಸಂದರ್ಭದಲ್ಲಿ ಕೆ ಎಲ್ ರಾಹುಲ್, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವೈಫಲ್ಯ ಅನುಭವಿಸಿದ್ದರು" ಎಂದು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ರಾಹುಲ್‌ ದ್ರಾವಿಡ್ ಬಳಿಕ ಈ ಐವರಲ್ಲಿ ಯಾರಾಗಬಹುದು ಟೀಂ ಇಂಡಿಯಾ ಹೆಡ್‌ ಕೋಚ್?

ರೋಹಿತ್ ಶರ್ಮಾ 2022ರಲ್ಲಿ ನಾಯಕರಾದ ಬಳಿಕ ಭಾರತ ತಂಡವು 10 ಟೆಸ್ಟ್ ಪಂದ್ಯಗಳನ್ನಾಡಿದ್ದು, ವಿವಿಧ ಕಾರಣಗಳಿಂದ ಮೂರು ಪಂದ್ಯಗಳಿಂದ ರೋಹಿತ್ ಶರ್ಮಾ, ಆಯ್ಕೆಗೆ ಅಲಭ್ಯರಾಗಿದ್ದರು. 7 ಟೆಸ್ಟ್ ಪಂದ್ಯಗಳ 11 ಇನಿಂಗ್ಸ್‌ಗಳಿಂದ ರೋಹಿತ್ ಶರ್ಮಾ ಕೇವಲ 35.45ರ ಬ್ಯಾಟಿಂಗ್ ಸರಾಸರಿಯಲ್ಲಿ 390 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಅವಧಿಯಲ್ಲಿ ರೋಹಿತ್ ಶರ್ಮಾ ಏಕೈಕ ಶತಕ ಸಿಡಿಸಿದ್ದು, ಯಾವುದೇ ಅರ್ಧಶತಕ ಬಾರಿಸಲು ಹಿಟ್‌ಮ್ಯಾನ್‌ಗೆ ಸಾಧ್ಯವಾಗಿಲ್ಲ.

ಇನ್ನು ನಾಯಕರಾಗಿ ರೋಹಿತ್ ಶರ್ಮಾ, ತವರಿನಲ್ಲಿ ಶ್ರೀಲಂಕಾ ವಿರುದ್ದ ಟೀಂ ಇಂಡಿಯಾ 2-0 ಅಂತರದಲ್ಲಿ ಭರ್ಜರಿ ಟೆಸ್ಟ್ ಸರಣಿ ಜಯಿಸಿತ್ತು. ಇನ್ನು ಕೋವಿಡ್‌ನಿಂದಾಗಿ ಪುನರ್‌ನಿಗದಿಯಾಗಿದ್ದ ಇಂಗ್ಲೆಂಡ್‌ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಂಡಿರಲಿಲ್ಲ. ಇನ್ನು ಬಾಂಗ್ಲಾದೇಶ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ವೇಳೆ ಕೈಬೆರಳಿನ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದರು. ಇನ್ನು ಇದಾದ ಬಳಿಕ ಈ ವರ್ಷ ತವರಿನಲ್ಲಿ ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ತಂಡ ಕೂಡಿಕೊಂಡಿದ್ದರು. 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಜಯಿಸಿತ್ತು. ಆದರೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಲಂಡನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು 209 ರನ್‌ಗಳ ಹೀನಾಯ ಸೋಲು ಅನುಭವಿಸಿತು.

Latest Videos
Follow Us:
Download App:
  • android
  • ios