ಕುಲ್ದೀಪ್ ಯಾದವ್ ಮಾರಕ ದಾಳಿ; ಪೆವಿಲಿಯನ್ ಪೆರೇಡ್ ನಡೆಸಿದ ಆಂಗ್ಲರು..!
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭವಾದ ಟೆಸ್ಟ್ ಪಂದ್ಯದಲ್ಲಿಂದು ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದ ಬೆನ್ ಡಕೆಟ್ ಹಾಗೂ ಜಾಕ್ ಕ್ರಾಲಿ ಎಂದಿನಂತೆ ಮತ್ತೊಮ್ಮೆ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.
ಧರ್ಮಶಾಲಾ(ಮಾ.09): ಟೀಂ ಇಂಡಿಯಾ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಮಾರಕ ದಾಳಿಗೆ ತತ್ತರಿಸಿರುವ ಇಂಗ್ಲೆಂಡ್ ತಂಡವು 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಸಾಧಾರಣ ಮೊತ್ತಕ್ಕೆ ಆಲೌಟ್ ಆಗುವ ಭೀತಿಗೆ ಸಿಲುಕಿದೆ. ಚಹ ವಿರಾಮದ ಅಂತ್ಯದ ವೇಳೆಗೆ ಇಂಗ್ಲೆಂಡ್ ತಂಡವು 8 ವಿಕೆಟ್ ಕಳೆದುಕೊಂಡು ಕೇವಲ 194 ರನ್ ಬಾರಿಸಿದೆ.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭವಾದ ಟೆಸ್ಟ್ ಪಂದ್ಯದಲ್ಲಿಂದು ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದ ಬೆನ್ ಡಕೆಟ್ ಹಾಗೂ ಜಾಕ್ ಕ್ರಾಲಿ ಎಂದಿನಂತೆ ಮತ್ತೊಮ್ಮೆ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ ಮೊದಲ ವಿಕೆಟ್‌ಗೆ 64 ರನ್‌ಗಳ ಜತೆಯಾಟವಾಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು. ಡಕೆಟ್ 27 ರನ್ ಗಳಿಸಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
ಕುಲ್ದೀಪ್ ಯಾದವ್‌ಗೆ 5 ವಿಕೆಟ್ ಗೊಂಚಲು: ಎಡಗೈ ಲೆಗ್‌ಸ್ಪಿನ್ನರ್ ಧರ್ಮಶಾಲಾ ಮೈದಾನದಲ್ಲಿ ಮೊನಚಾದ ದಾಳಿ ನಡೆಸುವ ಮೂಲಕ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಇಂಗ್ಲೆಂಡ್ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಜಾಕ್ ಕ್ರಾಲಿ, ಓಲಿ ಪೋಪ್, ಜಾನಿ ಬೇರ್‌ಸ್ಟೋವ್, ಹಾಗೂ ಬೆನ್ ಸ್ಟೋಕ್ಸ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಈ ಮೂಲಕ 5 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿಯುವಲ್ಲಿ ಯಶಸ್ವಿಯಾದರು
ಇಂಗ್ಲೆಂಡ್ ಪರ ಜಾಕ್ ಕ್ರಾಲಿ ಭಾರತೀಯ ಬೌಲರ್‌ಗಳ ಮೇಲೆ ಕೊಂಚ ಪ್ರತಿರೋಧ ತೋರಿದರು. ಕ್ರಾಲಿ 108 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 79 ರನ್ ಸಿಡಿಸಿದರು. ಕ್ರಾಲಿ ಹೊರತುಪಡಿಸಿ ಇಂಗ್ಲೆಂಡ್‌ನ ಉಳಿದ್ಯಾವ ಬ್ಯಾಟರ್‌ಗಳು ಕೂಡಾ 30 ರನ್ ಗಡಿದಾಟಲು ಸಾಧ್ಯವಾಗಲಿಲ್ಲ.
ಇನ್ನು 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರವಿಚಂದ್ರನ್ ಅಶ್ವಿನ್ ಒಂದೇ ಓವರ್‌ನಲ್ಲಿ ಟಾಮ್ ಹಾರ್ಟ್ಲಿ ಹಾಗೂ ಮಾರ್ಕ್ ವುಡ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ರವೀಂದ್ರ ಜಡೇಜಾ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.