ಮುಗಿಯಿತು ಮನೀಶ್ ಪಾಂಡೆಯ ಮಹೋನ್ನತ ಕರ್ನಾಟಕ ಕರಿಯರ್!

ಭಾರತೀಯ ಕ್ರಿಕೆಟ್ ಕಂಡ ಸ್ಪೆಷಲ್ ಟ್ಯಾಲೆಂಟ್ ಮನೀಶ್ ಪಾಂಡೆ. ಎಲ್ಲವೂ ಸರಿಯಾಗಿದ್ದಿದ್ದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನೇ ಮೀರಿಸಿ ಬಿಡುವಂಥಾ ಆಟ ಅವನಲ್ಲಿತ್ತು. ಆದರೆ..ಇದೀಗ ಕರ್ನಾಟಕ ರಣಜಿ ತಂಡದಿಂದ ಹೊರಹಾಕಲಾಗಿದೆ. ಕಾರಣವೇನು?
 

KSCA remove Manish pandey from Ranji squad question Raised talented cricketer career ckm

ಸುದರ್ಶನ್, ಕ್ರೀಡಾ ಪತ್ರಕರ್ತ

ಎಂಥಾ ಕ್ರಿಕೆಟರ್.. ಹೇಗಾಗಿ ಬಿಟ್ಟ..! ಅವನು ಅವನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದರೆ.. 2010ರಲ್ಲೇ ಅವನಿಗೆ ನ್ಯಾಯವಾಗಿ ಸಿಗಬೇಕಿದ್ದ ಅವಕಾಶ ಸಿಕ್ಕಿದ್ದರೆ.. ವಿರಾಟ್ ಕೊಹ್ಲಿ ಜೊತೆ ಅವನೂ ಇವತ್ತಿಗೆ ದಿಗ್ಗಜರ ಸಾಲಿನಲ್ಲಿರುತ್ತಿದ್ದನೋ ಏನೋ.. ಅಂಥಾ ಕ್ರಿಕೆಟಿಗನೀಗ ಕರ್ನಾಟಕ ತಂಡಕ್ಕೇ ಬೇಡವಾಗಿದ್ದಾನೆ.  

ಕರ್ನಾಟಕ ಕ್ರಿಕೆಟ್’ನೊಂದಿಗೆ ಮನೀಶ್ ಪಾಂಡೆಯ ಪಯಣ ಮುಗಿದಂತೆ ಕಾಣುತ್ತಿದೆ. ಅರ್ಧ ರಣಜಿ ಟ್ರೋಫಿ ಟೂರ್ನಿ, ಸೈಯದ್ ಮುಷ್ತಾಕ್ ಅಲಿ ಟಿ20 ಮುಗಿಯುತ್ತಿದ್ದಂತೆ ಮನೀಶ್ ಪಾಂಡೆ ಕರ್ನಾಟಕ ತಂಡದಿಂದ ಹೊರ ಬಿದ್ದಿದ್ದಾನೆ. ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗೆ ಆಯ್ಕೆ ಮಾಡಲಾಗಿರುವ 32 ಮಂದಿ ಸಂಭಾವ್ಯರ ತಂಡದಲ್ಲೂ ಪಾಂಡೆಗೆ ಸ್ಥಾನವಿಲ್ಲ.. ಮೊನ್ನೆ ಆ ಸಂಭಾವ್ಯರ ಪಟ್ಟಿಯನ್ನು ನೋಡಿದಾಗ ಮನೀಶ್ ಪಾಂಡೆಯ ಹೆಸರು ಕಾಣಲಿಲ್ಲ. ಗಾಯಗೊಂಡಿದ್ದಾನೋ ಏನೋ ಎಂಬ ಅನುಮಾನದಲ್ಲಿ ಅವನಿಗೆ ಮೆಸೇಜ್ ಮಾಡಿದೆ. ‘’ಅಂಥದ್ದೇನೂ ಇಲ್ಲ, I’m fine ಸುದರ್ಶನ್ ಭಾಯ್’’ ಎಂದು ಉತ್ತರಿಸಿದ. ಆಮೇಲೆ ಗೊತ್ತಾಗಿದ್ದು ಮನೀಶ್ ಪಾಂಡೆಯನ್ನು  ಕರ್ನಾಟಕ ತಂಡದಿಂದ ಹೊರ ಹಾಕಲಾಗಿದೆ ಎಂದು. 

ಕರ್ನಾಟಕವಷ್ಟೇ ಅಲ್ಲ.. ಭಾರತೀಯ ಕ್ರಿಕೆಟ್ ಕಂಡ ಸ್ಪೆಷಲ್ ಟ್ಯಾಲೆಂಟ್ ಮನೀಶ್ ಪಾಂಡೆ. ಎಲ್ಲವೂ ಸರಿಯಾಗಿದ್ದಿದ್ದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನೇ ಮೀರಿಸಿ ಬಿಡುವಂಥಾ ಆಟ ಅವನಲ್ಲಿತ್ತು. ಆದರೆ.. ಹಾಗಾಗಲಿಲ್ಲ. 

ಕಾರಣ, ಕೆಲವೊಮ್ಮೆ ಸಮಯ-ಸಂದರ್ಭ.. ಅದು ಅವನ ಕೈ ಮೀರಿದ್ದು. ಆದರೆ ತನ್ನ ನಿಯಂತ್ರಣದಲ್ಲೇ ಇದ್ದ ಕೆಲವೊಂದನ್ನು ನಿಭಾಯಿಸುವಲ್ಲಿ ಅವನು ಎಡವಿ ಬಿಟ್ಟ. ಕಳೆದ 2-3 ವರ್ಷಗಳಿಂದ ಆಟದಲ್ಲಿ ಹಳೆಯ ಖದರ್ ಮಾಯವಾಗಿತ್ತು. ಕ್ರಿಕೆಟ್ ಬದುಕು ಕಟ್ಟಿ ಕೊಟ್ಟ ಕರ್ನಾಟಕ ಪರ ಆಡುತ್ತಿದ್ದೇನೆ ಎಂಬ ಹೆಮ್ಮೆ ಅವನಲ್ಲಿ ಕಾಣುತ್ತಿರಲಿಲ್ಲ. ಹಿರಿಯ ಆಟಗಾರನೆಂಬ ಜವಾಬ್ದಾರಿಯಂತೂ ಕಾಣುತ್ತಲೇ ಇರಲಿಲ್ಲ. ಬೇಕಾಬಿಟ್ಟಿ ವಿಕೆಟ್ ಒಪ್ಪಿಸಿ ಪೆವಿಲಿಯನ್’ಗೆ ಬಂದು ಕೂರುತ್ತಿದ್ದ. ಹಾಗೆ ಕೂತಾಗ ‘ತಂಡವನ್ನು ಸಂಕಷ್ಟಕ್ಕೆ ತಳ್ಳಿ ಔಟಾಗಿದ್ದೇನೆ’ ಎಂಬ ಪಾಪಪ್ರಜ್ಞೆಯೂ ಅವನಿಗೆ ಕಾಡುತ್ತಿರಲಿಲ್ಲ. ಒಂದೇ ಮಾತಲ್ಲಿ ಹೇಳುವುದಾದರೆ, ಹಳೆಯ ಮನೀಶ್ ಪಾಂಡೆ ಅಲ್ಲ ಇವನು. 

ಅವನು ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ ರೋಮಾಂಚನವಾಗುತ್ತಿತ್ತು. ಅವನು ಬಾರಿಸುತ್ತಿದ್ದ ಹೊಡೆತಗಳನ್ನು ನೋಡಿ ನರನಾಡಿಗಳಲ್ಲಿ ಕರೆಂಟ್ ಹೊಡೆದ ಅನುಭವವಾಗುತ್ತಿತ್ತು. ಅವನು ಹೊಡೆದ ಕೆಲ ಸೆಂಚುರಿಗಳು.. ಅಬ್ಬಾ, ನೆನಪಿಕೊಂಡರೆ ಈಗಲೂ ಮೈಮನ ರೋಮಾಂಚನಗೊಳ್ಳುತ್ತದೆ. 2010ರ ರಣಜಿ ಫೈನಲ್’ನಲ್ಲಿ ಬಲಾಢ್ಯ ಮುಂಬೈ ವಿರುದ್ಧ ಮೈಸೂರಿನಲ್ಲಿ ಬಾರಿಸಿದ ಶತಕ, 2013ರಲ್ಲಿ ಅದೇ ಮುಂಬೈ ತಂಡವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಟ್ಟಾಡಿಸಿ ಹೊಡೆದು ಸಿಡಿಸಿದ ಸೆಂಚುರಿ.. 

ರಣಜಿ ಟ್ರೋಫಿಯಷ್ಟೇ ಇಲ್ಲ.. ವೈಟ್ ಬಾಲ್ ಕ್ರಿಕೆಟ್’ನಲ್ಲಿ ಆಡುತ್ತಿದ್ದ ಆ ವಿಧ್ವಂಸಕ ಆಟ.. ಕರ್ನಾಟಕ ತಂಡವನ್ನು ಗೆಲ್ಲಿಸಬೇಕೆಂದು ಟೊಂಕ ಕಟ್ಟಿ ನಿಂತು ಆಡುತ್ತಿದ್ದವನು ಮನೀಶ್ ಪಾಂಡೆ. ಕ್ಷೇತ್ರರಕ್ಷಣೆಯಲ್ಲಂತೂ ಅವನು ಚಿರತೆ. ಒಂದೊಂದು ಕ್ಯಾಚ್’ಗಳಿಂದ, ಒಂದೊಂದು ರನೌಟ್’ಗಳಿಂದ ಪಂದ್ಯದ ಗತಿಯನ್ನೇ ಬದಲಿಸಿ ಬಿಡುತ್ತಿದ್ದ ಫೀಲ್ಡರ್ ಅವನು. Out & out ಮ್ಯಾಚ್ ವಿನ್ನರ್. 

ಅವನ ಕೋಟ್ಯಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಅವನ ಆಟವನ್ನು ನೋಡಿ ಖುಷಿ ಪಟ್ಟವನು ನಾನು. ಅವನ ಕೆಲ ಅತ್ಯದ್ಭುತ ಇನ್ನಿಂಗ್ಸ್’ಗಳಿಗೆ ಸಾಕ್ಷಿಯಾದವನು ನಾನು.. ಅವನ ಜೊತೆ ನನಗೆ ವೈಯಕ್ತಿಕ ಬಾಂಧವ್ಯವಿದೆ. ಅವನು  ಕರ್ನಾಟಕ ಕ್ರಿಕೆಟ್’ನ ಗೋಲ್ಡನ್ ಬಾಯ್. ಕರ್ನಾಟಕ ತಂಡಕ್ಕೆ ಹತ್ತಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಪಾಂಡೆ, ಅದ್ಭುತ ನೆನಪುಗಳನ್ನು ಕಟ್ಟಿ ಕೊಟ್ಟ ಪಾಂಡೆ, ತನ್ನದೇ ಸ್ವಯಂಕೃತ ಪ್ರಮಾದಗಳಿಂದ ಕರ್ನಾಟಕ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾನೆ. 

ಈ ಬಾರಿಯ ರಣಜಿ ಟ್ರೋಫಿ ಟೂರ್ನಿಗೂ ಮೊದಲೇ ನಾನು ಹೇಳಿದ್ದೆ. ಕರ್ನಾಟಕ ತಂಡದ ಜೊತೆ ಮನೀಶ್ ಪಾಂಡೆಗೆ  ಇದೇ ಕೊನೆಯ ಪ್ರಯಾಣವೆಂದು. ದುರದೃಷ್ಟವಶಾತ್, ಆ ಮಾತೇ ನಿಜವಾಗಿದೆ. ಕರ್ನಾಟಕ ತಂಡದೊಂದಿಗೆ ಮನೀಶ್ ಪಾಂಡೆಯ ಸುವರ್ಣ ದಿನಗಳು ಇನ್ನು ನೆನಪು ಮಾತ್ರ  ಎಂಬುದು ನಿಜಕ್ಕೂ ಬೇಸರದ ಸಂಗತಿ. ಕರ್ನಾಟಕ ತಂಡದಲ್ಲಿ ಅವನ ಸ್ಥಾನಕ್ಕೆ ಮತ್ತೊಬ್ಬ ಬರಬಹುದು.. ಬಂದೇ ಬರುತ್ತಾನೆ. ಆದರೆ, ಯಾರೇ ಬಂದರೂ ಮತ್ತೊಬ್ಬ ಮನೀಶ್ ಪಾಂಡೆ ಆಗಲಾರ. ಏಕೆಂದರೆ ಕರ್ನಾಟಕಕ್ಕೊಬ್ಬನೇ ಮನೀಶ್ ಪಾಂಡೆ.
 

Latest Videos
Follow Us:
Download App:
  • android
  • ios