* ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಗೆ 20 ಆಟಗಾರರ ಕರ್ನಾಟಕ ತಂಡ ಪ್ರಕಟ* ಎಲೈಟ್‌ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಕ್ರಿಕೆಟ್ ತಂಡ* ಡಿಸೆಂಬರ್ 8ರಿಂದ ವಿಜಯ್‌ ಹಜಾರೆ ಟ್ರೋಫಿಗೆ ಚಾಲನೆ ದೊರೆಯಲಿದೆ.

ಬೆಂಗಳೂರು(ನ.27): ಮುಂದಿನ ತಿಂಗಳು ಆರಂಭವಾಗಲಿರುವ 20ನೇ ಆವೃತ್ತಿಯ ವಿಜಯ್‌ ಹಜಾರೆ ಟ್ರೋಫಿ (Vijay Hazare Trophy) ಏಕದಿನ ಕ್ರಿಕೆಟ್‌ ಟೂರ್ನಿಗೆ 20 ಮಂದಿಯ ಕರ್ನಾಟಕ ಕ್ರಿಕೆಟ್ ತಂಡವನ್ನು (Karnataka Cricket Team) ಪ್ರಕಟಿಸಲಾಗಿದೆ. ನಾಲ್ಕು ಬಾರಿಯ ಚಾಂಪಿಯನ್‌ ರಾಜ್ಯ ತಂಡವನ್ನು ಮನೀಶ್‌ ಪಾಂಡೆ (Manish Pandey) ಮುನ್ನಡೆಸಲಿದ್ದಾರೆ. ಆರ್‌.ಸಮರ್ಥ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಬಿ.ಆರ್‌. ಶರತ್‌ ಹಾಗೂ ಶರತ್‌ ಶ್ರೀನಿವಾಸ್‌ ವಿಕೆಟ್‌ ಕೀಪಿಂಗ್‌ ಹೊಣೆ ನಿಭಾಯಿಸಲಿದ್ದಾರೆ. ಎಲೈಟ್‌ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಡಿಸೆಂಬರ್ 8ರಂದು ಪುದುಚೇರಿ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

ಈ ಗುಂಪಿನಲ್ಲಿ ಮುಂಬೈ, ಬೆಂಗಾಲ್‌, ತಮಿಳುನಾಡು ಹಾಗೂ ಬರೋಡಾ ತಂಡಗಳು ಸ್ಥಾನ ಪಡೆದಿವೆ. ಕಳೆದ ವಾರ ಕೊನೆಗೊಂಡ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ರನ್ನರ್‌ ಅಪ್‌ ಆಗಿತ್ತು. ಡಿಸೆಂಬರ್ 8ರಿಂದ ವಿಜಯ್‌ ಹಜಾರೆ ಟ್ರೋಫಿಗೆ ಚಾಲನೆ ದೊರೆಯಲಿದೆ. ಕರ್ನಾಟಕ ತಂಡವು ಬ್ಯಾಟಿಂಗ್‌ನಲ್ಲಿ ಮನೀಶ್ ಪಾಂಡೆ. ಕರುಣ್ ನಾಯರ್, ರೋಹನ್ ಕದಂ ಹಾಗೂ ರವಿಕುಮಾರ್ ಸಮರ್ಥ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇನ್ನು ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಿಂಚಿರುವ ಅಭಿನವ್ ಮನೋಹರ್ ಯಾವ ರೀತಿಯ ಪ್ರದರ್ಶನ ತೋರಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.

Scroll to load tweet…

ಇನ್ನು ಮತ್ತೊಮ್ಮೆ ಕರ್ನಾಟಕ ತಂಡವು ಅನನುಭವಿ ಬೌಲಿಂಗ್ ಪಡೆಯನ್ನು ಹೊಂದಿದೆ. ಪ್ರಸಿದ್ಧ್ ಕೃಷ್ಣ ಅನುಪಸ್ಥಿತಿಯಲ್ಲಿ ವಿದ್ಯಾಧರ್ ಪಾಟೀಲ್, ವೈಶಾಕ್‌, ದರ್ಶನ್‌, ಪ್ರತೀಕ್ ಜೈನ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನ ತೋರಬೇಕಿದೆ

ಆಟಗಾರರ ಪಟ್ಟಿ: ಮನೀಶ್‌ ಪಾಂಡೆ(ನಾಯಕ), ರೋಹನ್‌ ಕದಂ, ಆರ್‌.ಸಮರ್ಥ್, ಕರುಣ್‌ ನಾಯರ್‌, ಸಿದ್ಧಾಥ್‌ರ್‍ ಕೆ.ವಿ., ಅಭಿನವ್‌ ಮನೋಹರ್‌, ಡಿ.ನಿಶ್ಚಲ್‌, ಬಿ.ಆರ್‌.ಶರತ್‌, ಶರತ್‌ ಶ್ರೀನಿವಾಸ್‌, ಜಗದೀಶ್‌ ಸುಚಿತ್‌, ಶ್ರೇಯಸ್‌ ಗೋಪಾಲ್‌, ಕೆ.ಸಿ.ಕರಿಯಪ್ಪ, ರಿತೇಶ್‌ ಭಟ್ಕಳ್‌, ಪ್ರವೀಣ್‌ ದುಬೆ, ವಿದ್ಯಾಧರ್‌ ಪಾಟಿಲ್‌, ವಿ.ಕೌಶಿಕ್‌, ಪ್ರತೀಕ್‌ ಜೈನ್‌, ಎಂ.ಬಿ.ದರ್ಶನ್‌, ವಿ.ವೈಶಾಕ್‌, ಎಂ.ವೆಂಕಟೇಶ್‌.

ಮುಂಬೈ ತಂಡಕ್ಕೆ ಶಂಸ್ ಮುಲಾನಿಗೆ ಒಲಿದ ನಾಯಕ ಪಟ್ಟ:

ಮುಂಬರುವ ವಿಜಯ್‌ ಹಜಾರೆ ಕ್ರಿಕೆಟ್‌ ಟೂರ್ನಿಗೆ ಮುಂಬೈ ಕ್ರಿಕೆಟ್ ಸಂಸ್ಥೆಯು 20 ಆಟಗಾರರನ್ನೊಳಗೊಂಡ ಮುಂಬೈ ತಂಡ ಪ್ರಕಟಗೊಂಡಿದ್ದು, ಆಲ್ರೌಂಡರ್ ಶಂಸ್ ಮುಲಾನಿಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ತಾರಾ ಆಟಗಾರರಾದ ಪೃಥ್ವಿ ಶಾ, ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ರಾಷ್ಟ್ರೀಯ ತಂಡದ ಸೇವೆಯಲ್ಲಿರುವುದರಿಂದ ಯುವ ಪ್ರತಿಭಾನ್ವಿತ ಆಟಗಾರರಿಗೆ ಮಣೆ ಹಾಕಲಾಗಿದೆ. 

ಮುಂಬೈ ತಂಡದಲ್ಲಿ ಯಶಸ್ವಿ ಜೈಸ್ವಾಲ್‌, ಅರ್ಮಾನ್ ಜಾಫರ್ ಅವರಂತಹ ಆಟಗಾರರ ಮೇಲೆ ಆಯ್ಕೆ ಸಮಿತಿ ವಿಶ್ವಾಸವಿರಿಸಿದೆ. ಉನ್ನು ಸಿದ್ದೇಶ್ ಲಾಡ್‌ ಲಭ್ಯತೆ ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಆದರೆ ಸ್ಪೋಟಕ ಬ್ಯಾಟರ್‌ ಸರ್ಫರಾಜ್ ಖಾನ್‌ ತಂಡದಿಂದ ಹೊರಬಿದ್ದಿದ್ದಾರೆ. ಸಯ್ಯದ್‌ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಶಿವಂ ದುಬೆ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದು, ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ದವಳ್ ಕುಲಕರ್ಣಿ ನೇತೃತ್ವದ ಬೌಲಿಂಗ್‌ ಪಡೆ ತಂಡಕ್ಕೆ ಆಸರೆಯಾಗಬೇಕಿದೆ.

New Covid 19 variant: ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಅತಂತ್ರ..?

ಹಾಲಿ ಚಾಂಪಿಯನ್ ಮುಂಬೈ ತಂಡವು ಎಲೈಟ್ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಡಿಸೆಂಬರ್ 08ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಬಲಿಷ್ಠ ತಮಿಳುನಾಡು ತಂಡವನ್ನು ಎದುರಿಸಲಿದೆ. ಇದೇ ಗುಂಪಿನಲ್ಲಿ ಬಲಿಷ್ಠ ಕರ್ನಾಟಕ, ಬರೋಡ, ಬೆಂಗಾಲ್ ಹಾಗೂ ಪಾಂಡಿಚೆರಿ ತಂಡಗಳು ಸ್ಥಾನ ಪಡೆದಿವೆ. ಯುವ ಆಟಗಾರರನ್ನೊಳಗೊಂಡ ಮುಂಬೈ ತಂಡವು ಮತ್ತೊಮ್ಮೆ ವಿಜಯ್ ಹಜಾರೆ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಎದುರು ನೋಡುತ್ತಿದೆ. ಈವರೆಗೂ ಮುಂಬೈ ಹಾಗೂ ಕರ್ನಾಟಕ ತಂಡಗಳು ಮಾತ್ರ ಸತತ ಎರಡು ಬಾರಿ ವಿಜಯ್ ಹಜಾರೆ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಇಲ್ಲಿಯವರೆಗೆ ಮುಂಬೈ ತಂಡವು 4 ಬಾರಿ ವಿಜಯ್ ಹಜಾರೆ ಟ್ರೋಫಿ ಜಯಿಸಿದ್ದು, ಕರ್ನಾಟಕದ ಜತೆ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಮುಂಬೈ ತಂಡ ಹೀಗಿದೆ ನೋಡಿ:
ಶಂಸ್ ಮುಲಾನಿ(ನಾಯಕ), ಯಶಸ್ವಿ ಜೈಸ್ವಾಲ್, ಅರ್ಮಾನ್ ಜಾಫರ್, ಅಕ್ಷರಿತ್ ಗೊಮೆಲ್, ಸಾಗರ್ ಮಿಶ್ರಾ, ಸಿದ್ದೇಶ್ ಲಾಡ್, ಶಿವಂ ದುಬೆ, ಹಾರ್ದಿಕ್‌ ಥೋಮರ್, ಪ್ರಸಾದ್ ಪವಾರ್, ತನುಷ್ ಕೊಟ್ಯಾನ್, ಪ್ರಶಾಂತ್ ಸೋಲಂಕಿ, ಸಾಯಿರಾಜ್ ಪಾಟೀಲ್, ಅಮಾನ್ ಖಾನ್, ಅಥರ್ವ ಅಂಕೋಲ್ಕರ್, ಧವಳ್ ಕುಲಕರ್ಣಿ, ಮೊಹಿತ್ ಅವಸ್ಥಿ, ತುಷಾರ್ ದೇಶಪಾಂಡೆ, ಅತಿಫ್ ಅಟ್ಟರ್‌ವಾಲಾ, ದೀಪಕ್ ಶೆಟ್ಟಿ ಹಾಗೂ ಪರೀಕ್ಷಿತ್ ವಾಲ್ಸಾಂಗ್‌ಕರ್.