ದುಬೈ(ಮಾ.11): ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ನಲ್ಲಿ ಒಟ್ಟು 8 ವಿಕೆಟ್‌ ಕಬಳಿಸಿದ ಭಾರತದ ಆರ್‌.ಅಶ್ವಿನ್‌, ಐಸಿಸಿ ಟೆಸ್ಟ್‌ ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. 2017ರ ನಂತರ ಮೊದಲ ಬಾರಿಗೆ ಅಗ್ರ 2ರಲ್ಲಿ ಸ್ಥಾನ ಪಡೆದಿದ್ದಾರೆ.  ಇದೇ ವೇಳೆ ಅಕ್ಷರ್‌ ಪಟೇಲ್‌ ಮತ್ತೆ 8 ಸ್ಥಾನಗಳ ಜಿಗಿತ ಕಂಡು 30ನೇ ಸ್ಥಾನ ಪಡೆದಿದ್ದಾರೆ. 

ಇನ್ನು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ವಿರುದ್ದ 4ನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಚಚ್ಚಿದ ರಿ‍‍‍ಷಭ್‌ ಪಂತ್‌ ತಮ್ಮ ವೃತ್ತಿಬದುಕಿನ ಶ್ರೇಷ್ಠ 7ನೇ ಸ್ಥಾನಕ್ಕೆ ತಲುಪಿದ್ದಾರೆ. ರೋಹಿತ್‌ ಶರ್ಮಾ ಹಾಗೂ ನ್ಯೂಜಿಲೆಂಡ್‌ನ ಹೆನ್ರಿ ನಿಕೋಲ್ಸ್‌ ಜೊತೆ 7ನೇ ಸ್ಥಾನವನ್ನು ಪಂತ್‌ ಹಂಚಿಕೊಂಡಿದ್ದಾರೆ. ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸ್‌ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, ಆನಂತರ ಸ್ಟೀವ್ ಸ್ಮಿತ್, ಮಾರ್ನಸ್‌ ಲಬುಶೇನ್‌, ಜೋ ರೂಟ್‌ ಹಾಗೂ ವಿರಾಟ್ ಕೊಹ್ಲಿ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್‌ ಕಮಿನ್ಸ್‌ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, ಅಶ್ವಿನ್ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ನೀಲ್‌ ವ್ಯಾಗ್ನರ್‌ ಒಂದು ಸ್ಥಾನ ಕುಸಿದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಆಂಡರ್‌ಸನ್‌ ಎರಡು ಸ್ಥಾನ ಮೇಲೇರಿ 4ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ರವಿಚಂದ್ರನ್‌ ಅಶ್ವಿನ್‌ಗೆ ಒಲಿದ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಇನ್ನು ಆಲ್ರೌಂಡ್ ವಿಭಾಗದಲ್ಲಿ ಜೇಸನ್‌ ಹೋಲ್ಡರ್‌ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಇದಾದ ಬಳಿಕ ಬೆನ್ ಸ್ಟೋಕ್ಸ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್‌ ಹಾಗೂ ಶಕೀಬ್ ಅಲ್‌ ಹಸನ್‌ ಟಾಪ್ 5 ಪಟ್ಟಿಯೊಳಗೆ ಸ್ಥಾನ ಉಳಿಸಿಕೊಂಡಿದ್ದಾರೆ.