ಬೆಂಗಳೂರು[ಡಿ.19]: ಕರ್ನಾಟಕ ಪ್ರೀಮಿಯರ್ ಲೀಗ್[KPL] ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಇಂದು[ಗುರುವಾರ] ಬೆಳ್ಳಂಬೆಳಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ಮೆನನ್ ಮನೆ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿರುವ ಮೆನನ್ ಮನೆ ಮೇಲೆ ಕೋರ್ಟ್ ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಾಗಿದೆ.

ಈ ಮೊದಲು KSCA ಸಹಾಯಕ ಕಾರ್ಯದರ್ಶಿಯಾಗಿದ್ದ ಮೆನನ್, ಇತ್ತೀಚೆಗಷ್ಟೇ ನಡೆದ ರಾಜ್ಯ ಸಂಸ್ಥೆ ಚುನಾವಣೆಯಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಈ ಹಿಂದೆ 2019ರ ಕೆಪಿಎಲ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ರಣಜಿ ಆಟಗಾರರಾದ ಸಿ.ಎಂ. ಗೌತಮ್, ಅಬ್ರಾರ್ ಖಾಜಿ ಅವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಅಲ್ಲದೇ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಜಿ ಕೋಚ್ ಹಾಗೂ ಹಾಲಿ KSCA ಮ್ಯಾನೇಜಿಂಗ್ ಕಮಿಟಿ ಸದಸ್ಯ ಸುಧೀಂದ್ರ ಶಿಂಧೆ ಅವರನ್ನು ಬಂಧಿಸಲಾಗಿತ್ತು.

ಸಂತೋಷ್ ಮೆನನ್ ಮನೆ ಮೇಲಿನ ದಾಳಿಯ ಕುರಿತಂತೆ ಇನ್ನಷ್ಟು ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.