SA vs India Boxing Day Test: ದಕ್ಷಿಣ ಆಫ್ರಿಕಾ ಬೌಲರ್ಸ್ ಗೆ "ವಾಲ್" ಆದ KL , ಟೆಸ್ಟ್ ನಲ್ಲಿ 7ನೇ ಶತಕ ಸಿಡಿಸಿದ ರಾಹುಲ್!
ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಆರಂಭಿಕ
ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಆರಂಭ
122 ರನ್ ಸಿಡಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ಕೆಎಲ್ ರಾಹುಲ್
ಸೆಂಚುರಿಯನ್ (ಡಿ.26): ದಕ್ಷಿಣ ಆಫ್ರಿಕಾ (South Africa) ಪ್ರವಾಸವನ್ನು ಭಾರತ ತಂಡ ಹಾಗೂ ಕೆಎಲ್ ರಾಹುಲ್ (KL Rahul) ಭರ್ಜರಿಯಾಗಿ ಆರಂಭಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯನ್ನು ಗಾಯದ ಕಾರಣದಿಂದಾಗಿ ತಪ್ಪಿಸಿಕೊಂಡಿದ್ದ ಕರ್ನಾಟಕದ ಬ್ಯಾಟ್ಸ್ ಮನ್ ಕೆಎಲ್ ರಾಹುಲ್, ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test)ಪಂದ್ಯದ ಮೊದಲ ದಿನ ಎದುರಾಳಿ ಬೌಲಿಂಗ್ ಗೆ ಗೋಡೆಯ ರೀತಿ ನಿಂತು ಟೆಸ್ಟ್ ಕ್ರಿಕೆಟ್ (Test Cricket) ನಲ್ಲಿ 7ನೇ ಶತಕ ಬಾರಿಸಿದರು. ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಶತಕ ಬಾರಿಸಿದ ಭಾರತದ ಆರಂಭಿಕ ಆಟಗಾರ ಎನಿಸಿಕೊಂಡ ಕೆಎಲ್ ರಾಹುಲ್ ಅವರ ಭರ್ಜರಿ ಇನ್ನಿಂಗ್ಸ್ ನಿಂದ ಭಾರತ ತಂಡ 3 ವಿಕೆಟ್ ಗೆ 272 ರನ್ ಬಾರಿಸಿ ಮೊದಲ ದಿನದಾಟ ಮುಗಿಸಿದೆ.
ಸೂಪರ್ ಸ್ಪೋರ್ಟ್ಸ್ ಪಾರ್ಕ್ (SuperSport Park) ಮೈದಾನದಲ್ಲಿ ಭಾನುವಾರ ಆರಂಭಗೊಂಡ ಮುಖಾಮುಖಿಯಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೆಎಲ್ ರಾಹುಲ್ (122 * ರನ್, 248 ಎಸೆತ, 16 ಬೌಂಡರಿ, 1 ಸಿಕ್ಸರ್), ಮಯಾಂಕ್ ಅಗರ್ವಾಲ್ (60 ರನ್, 123 ಎಸೆತ, 9 ಬೌಂಡರಿ) ಭರ್ಜರಿ ಇನ್ನಿಂಗ್ಸ್ ನಿಂದಾಗಿ ಪ್ರಭುತ್ವ ಸಾಧಿಸುವಲ್ಲಿ ಯಶ ಕಂಡಿತು. ನಾಯಕ ವಿರಾಟ್ ಕೊಹ್ಲಿ(Virat Kohli) ಮತ್ತೊಮ್ಮೆ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದರೆ, ವಿದೇಶದ ಪಿಚ್ ಗಳಲ್ಲಿ ಭಾರತದ ನೆರವಿಗೆ ನಿಲ್ಲುವ ಅಜಿಂಕ್ಯ ರಹಾನೆ (40*ರನ್, 81 ಎಸೆತ, 8 ಬೌಂಡರಿ) ರಾಹುಲ್ ಜೊತೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಡದ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಗೆ (Mayank Agarwal) ಮೊದಲ ಒಂದು ಗಂಟೆಯ ಆಟ ಬಹಳ ಕಠಿಣವಾಗಿತ್ತು. ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ಜೋಡಿ ಕಗಿಸೋ ರಬಾಡ (Kagiso Rabada) ಹಾಗೂ ಲುಂಜಿ ಎನ್ ಗಿಡಿ (Lungi Ngidi) ಭಾರತದ ಆರಂಭಿಕರ ತಾಳ್ಮೆಯನ್ನು ಪರೀಕ್ಷೆ ಮಾಡಿದರು. ಆದರೆ, ರನ್ ಗಳಿಸುವ ಅವಕಾಶ ಇದ್ದಾಗಲೆಲ್ಲಾ, ಆಕ್ರಮಣಕಾರಿ ಆಟವಾಡುವ ಮೂಲಕ ಸ್ಕೋರ್ ಬೋರ್ಡ್ ಚಾಲ್ತಿಯಲ್ಲಿಟ್ಟಿದ್ದರು. ಈ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದ ಮಾರ್ಕೋ ಜಾನ್ಸೆನ್ ರನ್ನು ಗುರಿಯಾಗಿಸಿಕೊಂಡು ಮಯಾಂಕ್ ರನ್ ಗಳಿಸಿದರು. ಮೊದಲ ಅವಧಿಯಲ್ಲಿ ಎಚ್ಚರಿಕೆಯ ಆಟವಾಡಿದ ಜೋಡಿ ಮೊದಲ ವಿಕೆಟ್ ಗೆ 117 ರನ್ ಜೊತೆಯಾಟವಾಡಿದರು. ಇದು ಏಷ್ಯಾದ ಹೊರಗೆ ಹಾಲಿ ವರ್ಷದಲ್ಲಿ ಭಾರತದ ಆರಂಭಿಕರ 7ನೇ ಶತಕದ ಜೊತೆಯಾಟವಾಡಿದೆ. ಇದು ದಾಖಲೆ ಕೂಡ ಹೌದು.
ಡುವಾನ್ನೆ ಒಲಿವರ್ ಅವರನನ್ನು ಕೈಬಿಟ್ಟು ದಕ್ಷಿಣ ಆಫ್ರಿಕಾ ತಪ್ಪು ಮಾಡಿತು ಎಂದು ಅಂದುಕೊಳ್ಳುವ ಹೊತ್ತಿಗೆ ದಾಳಿಗಿಳಿದ ಎನ್ ಗಿಡಿ ಮಯಾಂಕ್ ಅಗರ್ವಾಲ್ ವಿಕೆಟ್ ಉರುಳಿಸಿದರೆ, ಮರು ಎಸೆತದಲ್ಲೇ ಚೇತೇಶ್ವರ ಪೂಜಾರ (Cheteshwar Pujara)ಗೋಲ್ಡನ್ ಡಕ್ ಗೆ ವಿಕೆಟ್ ಒಪ್ಪಿಸಿದರು. ಇದು ಪೂಜಾರ ಟೆಸ್ಟ್ ಜೀವನದ 2ನೇ ಗೋಲ್ಡನ್ ಡಕ್ ಆಗಿದ್ದೂ, ಎರಡೂ ಗೋಲ್ಡನ್ ಡಕ್ ಸೆಂಚುರಿಯನ್ ನಲ್ಲೇ ಬಂದಿವೆ. ದಕ್ಷಿಣ ಆಫ್ರಿಕಾ ಭಾರತದ ಬ್ಯಾಟಿಂಗ್ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದ ಹಂತದಲ್ಲಿ ಜೊತೆಯಾದ ಕೆಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ 3ನೇ ವಿಕೆಟ್ ಗೆ 82 ರನ್ ಜೊತೆಯಾಟವಾಡಿದರು. ಆದರೆ, ಒಂದು ಅಪಾಯಕಾರಿ ಡ್ರೈವ್ ಬಾರಿಸುವ ಯತ್ನದಲ್ಲಿ ಎಡವಿದ ಕೊಹ್ಲಿ ತಂಡದ ಮೊತ್ತ 199 ರನ್ ಆಗಿದ್ದಾಗ ವಿಕೆಟ್ ಒಪ್ಪಿಸಿದರು.
Vijay Hazare Trophy 2021 : ಚೊಚ್ಚಲ ದೇಶೀಯ ಪ್ರಶಸ್ತಿ ಗೆದ್ದ ಹಿಮಾಚಲ ಪ್ರದೇಶ!
ಕಳಪೆ ಫಾರ್ಮ್ ನಲ್ಲಿದ್ದ ಅಜಿಂಕ್ಯ ರಹಾನೆ (Ajinkya Rahane)ತಾವು ಎದುರಿಸಿದ 2ನೇ ಎಸೆತದಲ್ಲಿಯೇ ಔಟ್ ಆಗುವ ಅಪಾಯ ಎದುರಿಸಿದರೂ, ಸ್ವಲ್ಪದರಲ್ಲಿಯೇ ಬಚಾವ್ ಆದರು. ಕೆಎಲ್ ರಾಹುಲ್ ಹಾಗೂ ಅಜಿಂಕ್ಯ ರಹಾನೆ ನಾಲ್ಕನೇ ವಿಕೆಟ್ ಗೆ ಮುರಿಯದ 73 ರನ್ ಜೊತೆಯಾಟವಾಡಿದ್ದಾರೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದು, ಸೋಮವಾರ ಆಡಲಿರುವ ಆಟ ಪ್ರಮುಖವಾಗಲಿದೆ. ಭಾರತದ ಇನ್ನಿಂಗ್ಸ್ ನಲ್ಲಿ ಉರುಳಿದ ಮೂರೂ ವಿಕೆಟ್ ಗಳನ್ನು ಲುಂಜಿ ಎನ್ ಗಿಡಿ ಪಡೆದರು.
ಭಾರತ: 90 ಓವರ್ ಗಳಲ್ಲಿ 3 ವಿಕೆಟ್ ಗೆ 272 (ಕೆಎಲ್ ರಾಹುಲ್ 122, ಮಯಾಂಕ್ ಅಗರ್ವಾಲ್ 60, ಚೇತೇಶ್ವರ ಪೂಜಾರ 0, ವಿರಾಟ್ ಕೊಹ್ಲಿ 35, ಅಜಿಂಕ್ಯ ರಹಾನೆ 40, ಲುಂಜಿ ಎನ್ ಗಿಡಿ 45ಕ್ಕೆ 3).