Asianet Suvarna News Asianet Suvarna News

SA vs India ODI series : ಭಾರತ ತಂಡಕ್ಕೆ ಕೆಎಲ್ ರಾಹುಲ್ ನಾಯಕ, ರೋಹಿತ್ ಶರ್ಮ ಔಟ್!

3 ಪಂದ್ಯಗಳ ಸರಣಿಗೆ 18 ಸದಸ್ಯರ ತಂಡ ಪ್ರಕಟಿಸಿದ ಆಯ್ಕೆ ಸಮಿತಿ
ಗಾಯಾಳು ರೋಹಿತ್ ಶರ್ಮ ಔಟ್, ದಕ್ಷಿಣ ಆಫ್ರಿಕಾದಲ್ಲಿ ತಂಡ ಮುನ್ನಡೆಸಲಿರುವ ಕೆಎಲ್ ರಾಹುಲ್
ಏಕದಿನ ಸರಣಿಗೆ ಜಸ್ ಪ್ರೀತ್ ಬುಮ್ರಾ ಉಪನಾಯಕ
 

KL Rahul will lead the 18 member India ODI squad in Rohit Sharmas absence in South Africa san
Author
Bengaluru, First Published Dec 31, 2021, 10:49 PM IST

ಮುಂಬೈ (ಡಿ. 31): ದಕ್ಷಿಣ ಅಫ್ರಿಕಾ (South Africa) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ (Odi Series) ಭಾರತ (India) ತಂಡವನ್ನು ಪ್ರಕಟಿಸಲಾಗಿದ್ದು, ಸೀಮಿತ ಓವರ್ ಗಳ ತಂಡದ ನಾಯಕ ರೋಹಿತ್‌ ಶರ್ಮ (Rohit Sharma) ಗಾಯದ ಕಾರಣದಿಂದಾಗಿ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ (Kl Rahul) 18 ಸದಸ್ಯರ ಭಾರತ ತಂಡವನ್ನು ಮುನ್ನಡೆಸಲಿದ್ದು, ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ (Bumrah) ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಜನವರಿ 19 ರಿಂದ 23ರ ನಡುವೆ ಭಾರತ ತಂಡ ಮೂರು ಪಂದ್ಯಗಳ ಸರಣಿಯನ್ನು ಆಡಲಿದೆ.

ಟೆಸ್ಟ್ ಸರಣಿಯಲ್ಲಿ ಭರ್ಜರಿ ನಿರ್ವಹಣೆ ತೋರುತ್ತಿರುವ ವೇಗದ ಬೌಲರ್ ಮೊಹಮದ್ ಶಮಿಗೆ  (Shami) ವಿಶ್ರಾಂತಿ ನೀಡಲಾಗಿದ್ದರೆ, ಗಾಯಾಳುವಾಗಿರುವ ಸ್ಪಿನ್ ಬೌಲಿಂಗ್‌ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಹಾಗೂ ಅಕ್ಷರ್ ಪಟೇಲ್ ಸರಣಿಗೆ ಲಭ್ಯರಾಗಿಲ್ಲ.  ಸೀಮಿತ ಓವರ್ ಗಳ ಕ್ರಿಕೆಟ್ ಮಾದರಿಯಾಗಿರುವ ಏಕದಿನ ಹಾಗೂ ಟಿ20ಗೆ ಭಿನ್ನ ನಾಯಕರನ್ನು ಹೊಂದಲು ನಿರಾಸಕ್ತಿ ಹೊಂದಿದ್ದ ಬಿಸಿಸಿಐ, ಟಿ20 ತಂಡದ ನಾಯಕತ್ವವನ್ನು ತ್ಯಜಿಸಿದ್ದ ವಿರಾಟ್ ಕೊಹ್ಲಿಯನ್ನು (Virat Kohli) ಏಕದಿನ ತಂಡದ ನಾಯಕತ್ವದಿಂದ ವಜಾ ಮಾಡಿ, ರೋಹಿತ್ ಶರ್ಮ ಅವರನ್ನೇ ಎರಡೂ ಮಾದರಿಗೆ ನಾಯಕರನ್ನಾಗಿ ಪ್ರಕಟ ಮಾಡಿತ್ತು. ಟೆಸ್ಟ್ ಸರಣಿಗೆ ಅಭ್ಯಾಸ ನಡೆಸುತ್ತಿದ್ದ ವೇಳೆ ಸ್ನಾಯುಸೆಳೆತಕ್ಕೆ ತುತ್ತಾಗಿದ್ದ ರೋಹಿತ್ ಶರ್ಮ ಮೊದಲು ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರೆ, ಏಕದಿನ ಸರಣಿಗೆ ಫಿಟ್ ಆಗುವ ವಿಶ್ವಾಸ ಹೊಂದಿದ್ದರು. ಇದಕ್ಕಾಗಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಃಶ್ಚೇತನ ಶಿಬಿರದಲ್ಲಿ ಅವರು ಭಾಗಿಯಾಗಿದ್ದರು. ಆದರೆ, ಏಕದಿನ ಸರಣಿಯ ವೇಳೆಗೆ ಅವರು ಫಿಟ್ ಆಗುವುದು ಅನುಮಾನವಾಗಿರುವ ಕಾರಣ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರೋಹಿತ್ ಬದಲು ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ಸರಣಿಯನ್ನು ಅದ್ಭುತವಾಗಿ ಆರಂಭ ಮಾಡಿದ್ದು, ಸೆಂಚುರಿಯನ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದರು. ಆ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಭಾರತದ 2ನೇ ಆರಂಭಿಕ ಎನಿಸಿಕೊಂಡಿದ್ದರು. ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮ ಅವರ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಉಪನಾಯಕನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
 


ಐಪಿಎಲ್ ಸೇರಿದಂತೆ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಗಮನಸೆಳೆದಿರುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ( Ruturaj Gaikwad) ಹಾಗೂ ಆಲ್ರೌಂಡರ್ ವೆಂಕಟೇಶ್ ಅಯ್ಯರ್ (Venkatesh Iyer) ಇದೇ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ವಿಜಯ್ ಹಜಾರೆ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲೂ ಈ ಇಬ್ಬರು ಆಟಗಾರರು ಭರ್ಜರಿ ನಿರ್ವಹಣೆ ತೋರಿದ್ದರು. ವಿಜಯ್ ಹಜಾರೆಯಲ್ಲಿ ಆಡಿದ 5 ಪಂದ್ಯಗಳಿಂದ 150.75ರ ಸರಾಸರಿಯಲ್ಲಿ 603 ರನ್ ಬಾರಿಸಿದ್ದ ಗಾಯಕ್ವಾಡ್ 4 ಶತಕ ಸಿಡಿಸಿದ್ದರು. ಮಾಜಿ ನಾಯಕ ವಿರಾಟ್ ಕೊಹ್ಲಿ, ರಿಷಭ್ ಪಂತ್‌ ಹಾಗೂ ಜಸ್‌ ಪ್ರೀತ್ ಬುಮ್ರಾ 9 ತಿಂಗಳ ಬಳಿಕ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ.

India Tour Of South Africa : ಏಕದಿನ ಸರಣಿಗೆ ತಂಡ ಆಯ್ಕೆ ಮುಂದೂಡಿಕೆ?
ಇನ್ನು ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2017ರ ಬಳಿಕ ಮೊದಲ ಬಾರಿಗೆ ಭಾರತ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ. ಭಾರತ ಪರವಾಗಿ ಆಡಿ 111 ಪಂದ್ಯಗಳಿಂದ 150 ವಿಕೆಟ್ ಸಂಪಾದನೆ ಮಾಡಿರುವ ಅಶ್ವಿನ್, ಇದಕ್ಕೂ ಮುನ್ನ 2021ರ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದಿದ್ದರು. ಐಪಿಎಲ್ ನಲ್ಲಿ ಅವರ ಉತ್ತಮ ಪ್ರದರ್ಶನದ ಕಾರಣದಿಂದ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕದ ಆಟಗಾರರ ಪೈಕಿ ಮನೀಷ್ ಪಾಂಡೆ ಸ್ಥಾನ ಪಡೆಯಲು ವಿಫಲರಾಗಿದ್ದರೆ, ಯುವ ವೇಗಿ ಪ್ರಸಿದ್ಧ ಕೃಷ್ಣ ತಂಡದಲ್ಲಿ ಸ್ಥಾನ ಪಡೆಯಲು ಯಶ ಕಂಡಿದ್ದಾರೆ.

 

Follow Us:
Download App:
  • android
  • ios