ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಿರುವ ಕೆ.ಎಲ್.ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಅಕ್ಷರ್ ಪಟೇಲ್ ನಾಯಕತ್ವ ವಹಿಸಿಕೊಂಡಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ತಂಡದ ವೇಗಿಗಳು ಗಾಯದಿಂದ ಚೇತರಿಸಿಕೊಳ್ಳದ ಕಾರಣ ಸಂಕಷ್ಟದಲ್ಲಿದೆ. ಶಾರ್ದೂಲ್ ಠಾಕೂರ್ ಹಾಗೂ ಶಿವಂ ಮಾವಿಯನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ಚೊಚ್ಚಲ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ನವದೆಹಲಿ: ಈ ಬಾರಿ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರ್ಪಡೆಗೊಂಡಿರುವ ಕರ್ನಾಟಕದ ಕೆ.ಎಲ್.ರಾಹುಲ್ ಆರಂಭಿಕ ಸ್ಥಾನದ ಬದಲು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲೆಲ್ಲಾ ರಾಹುಲ್ ಎಲ್ಲಾ ಮಾದರಿಯಲ್ಲೂ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದರು.
ಕಳೆದ ವರ್ಷ ಲಖನೌ ತಂಡದಲ್ಲೂ ಆರಂಭಿಕನಾಗಿ ಆಡಿದ್ದರು. ಆದರೆ ಈ ಬಾರಿ ಡೆಲ್ಲಿ ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳಲು ಅವರು ಆರಂಭಿಕ ಸ್ಥಾನ ತ್ಯಜಿಸಲಿದ್ದಾರೆ ಎಂದು ತಿಳಿದುಬಂದಿದೆ. ಜೇಕ್ ಫ್ರೇಸರ್ ಹಾಗೂ ಫಾಫ್ ಡು ಪ್ಲೆಸಿಸ್ ಆರಂಭಿಕ ಬ್ಯಾಟರ್‌ಗಳಾಗಿದ್ದು, ನಂತರದ ಕ್ರಮಾಂಕಗಳಲ್ಲಿ ಅಭಿಷೇಕ್ ಪೊರೆಲ್, ಕೆ ಎಲ್ ರಾಹುಲ್, ಅಕ್ಷರ್ ಪಟೇಲ್, ಟ್ರಿಸ್ಟನ್ ಸ್ಟಬ್ಸ್ ಆಡಲಿದ್ದಾರೆ ಎಂದು ವರದಿಯಾಗಿದೆ.
ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಶತಾಯಗತಾಯ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸಾಕಷ್ಟು ಸಮತೋಲಿತವಾಗಿ ಕಂಡು ಬರುತ್ತಿದೆ. ಕಳೆದ 17 ಆವೃತ್ತಿಗಳಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಈ ಬಾರಿ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎದುರು ನೋಡುತ್ತಿದೆ.
ಇದನ್ನೂ ಓದಿ: ಐಪಿಎಲ್ 2025: 10 ತಂಡದ ನಾಯಕರ ಸಂಬಳ ಎಷ್ಟು? ಇಲ್ಲಿದೆ ಮಾಹಿತಿ
ಅಕ್ಷರ್ ಪಟೇಲ್ ಮೇಲೆ ಎಲ್ಲರ ಚಿತ್ತ: ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ತನ್ನ ತಂಡದ ಅನುಭವಿ ಆಲ್ರೌಂಡರ್ ಅಕ್ಷರ್ ಪಟೇಲ್‌ಗೆ ನಾಯಕತ್ವ ಪಟ್ಟ ಕಟ್ಟಿದೆ. ಇತ್ತೀಚೆಗಷ್ಟೇ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅಕ್ಷರ್ ಪಟೇಲ್ ಅದ್ಭುತ ಆಲ್ರೌಂಡ್ ಆಟದ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕನಾಗಿ ಹಾಗೂ ಆಟಗಾರನಾಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಮಹತ್ವದ ಜವಾಬ್ದಾರಿ ಅಕ್ಷರ್ ಮೇಲಿದೆ. ಹೀಗಾಗಿ ಅಕ್ಷರ್ ಪಟೇಲ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಚೇತರಿಸಿಕೊಳ್ಳದ ವೇಗಿಗಳು: ಲಖನೌ ಜೈಂಟ್ಸ್‌ಗೆ ಸಂಕಷ್ಟ
ನವದೆಹಲಿ: ಐಪಿಎಲ್ 18ನೇ ಆವೃತ್ತಿಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ತಂಡದಲ್ಲಿರುವ ಭಾರತೀಯ ವೇಗಿಗಳು ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಲಖನೌ ಸೂಪರ್ ಜೈಂಟ್ಸ್‌ಗೆ ಸಂಕಷ್ಟ ಎದುರಾಗಿದೆ. ಮೊಹ್ಸಿನ್ ಖಾನ್, ಆವೇಶ್ ಖಾನ್, ಮಯಾಂಕ್ ಯಾದವ್ ಹಾಗೂ ಆಕಾಶ್‌ದೀಪ್ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ.
ಅದರಲ್ಲೂ ಮೊಹ್ಸಿನ್ ಹಾಗೂ ಆಕಾಶ್‌ದೀಪ್ ಆರಂಭಿಕ ಕೆಲ ಪಂದ್ಯಗಳಿಗೆ ಗೈರಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಮಯಾಂಕ್, ಬೆಂಗಳೂರಿನ ಎನ್‌ಸಿಎನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರಾದರೂ ಪೂರ್ಣ ಪ್ರಮಾಣದಲ್ಲಿ ಫಿಟ್ನೆಸ್ ಕಂಡುಕೊಂಡಿಲ್ಲ. ಅವರಿಗೆ ಇನ್ನೂ ಬಿಸಿಸಿಐ ವೈದ್ಯಕೀಯ ತಂಡದಿಂದ ಐಪಿಎಲ್ ತಂಡ ಕೂಡಿಕೊಳ್ಳಲು ಅನುಮತಿ ಸಿಕ್ಕಿಲ್ಲ.
ಇದನ್ನೂ ಓದಿ: RCB Unbox Event: ಸಂಜಿತ್ ಹೆಗ್ಡೆಗೆ ಈ ಹಾಡು ಹಾಡದಂತೆ ಫ್ಯಾನ್ಸ್ ತಾಕೀತು!
ಹೀಗಾಗಿ, ಹರಾಜಿನಲ್ಲಿ ಬಿಕರಿಯಾಗದೆ ಉಳಿದಿದ್ದ ಶಾರ್ದೂಲ್ ಠಾಕೂರ್ ಹಾಗೂ ಶಿವಂ ಮಾವಿಯನ್ನು ಲಖನೌ ತಂಡ ತನ್ನ ಶಿಬಿರಕ್ಕೆ ಕರೆಸಿಕೊಂಡಿದ್ದು, ಅವರನ್ನೇ ತಂಡಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.
