ಕನ್ನಡಿಗ ಕೆಎಲ್ ರಾಹುಲ್ ಅವರ ಸ್ಪೋಟಕ ಅಜೇಯ 152 ರನ್ ಮತ್ತು ನಿತೀಶ್ ರಾಣಾ ಅವರ 91 ರನ್‌ಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 264 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಮೂಲಕ ರಾಹುಲ್ ಐಪಿಎಲ್‌ನಲ್ಲಿ ಭಾರತೀಯ ಬ್ಯಾಟರ್‌ನ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಮುರಿದಿದ್ದಾರೆ.

ಡೆಲ್ಲಿ: ಕನ್ನಡಿಗ ಕೆ ಎಲ್ ರಾಹುಲ್ ಸ್ಪೋಟಕ ಶತಕ(152*) ಹಾಗೂ ನಿತೀಶ್ ರಾಣಾ(91) ಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಲಿಷ್ಠ ಪಂಜಾಬ್ ಕಿಂಗ್ಸ್ ಎದುರು ಬೃಹತ್ ಮೊತ್ತ ಕಲೆಹಾಕಿದೆ. ನಿಗದಿತ 20 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ ಎರಡು ವಿಕೆಟ್ ಕಳೆದುಕೊಂಡು 264 ರನ್ ಸಿಡಿಸಿದ್ದು, ಪಂಜಾಬ್‌ ಕಿಂಗ್ಸ್‌ಗೆ ಸವಾಲಿನ ಮೊತ್ತ ಕಲೆಹಾಕಿದೆ.

Add Asianetnews Kannada as a Preferred SourcegooglePreferred

ಸ್ಪೋಟಕ ಶತಕ ಸಿಡಿಸಿದ ಕನ್ನಡಿಗ ರಾಹುಲ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಪಥುಮ್ ನಿಸ್ಸಾಂಕ(11) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ನಡೆದದ್ದು ರಾಣಾ-ರಾಹುಲ್ ಆರ್ಭಟ. ಆರಂಭದಿಂದಲೇ ಪಂಜಾಬ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಕೇವಲ 95 ಎಸೆತಗಳಲ್ಲಿ 220 ರನ್‌ಗಳ ಜತೆಯಾಟವಾಡಿತು. ಪಂಜಾಬ್ ಬೌಲರ್‌ಗಳ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಕೆ ಎಲ್ ರಾಹುಲ್ ಕೇವಲ 67 ಎಸೆತಗಳಲ್ಲಿ 16 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ ಅಜೇಯ 152 ರನ್ ಸಿಡಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ಬಾರಿಸಿದ ಭಾರತೀಯ ಬ್ಯಾಟರ್ ಎನ್ನುವ ಹಿರಿಮೆಗೆ ರಾಹುಲ್ ಪಾತ್ರರಾದರು. ಇದಕ್ಕೂ ಮೊದಲು ಅಭಿಷೇಕ್ ಶರ್ಮಾ 141 ರನ್ ಸಿಡಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು.

ಇನ್ನು ಮತ್ತೊಂದು ತುದಿಯಲ್ಲಿ ರಾಹುಲ್‌ಗೆ ಉತ್ತಮ ಸಾಥ್ ನೀಡಿದ ನಿತೀಶ್ ರಾಣಾ ಕೇವಲ 44 ಎಸೆತಗಳಲ್ಲಿ 91 ರನ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಇದೀಗ ಈ ಗುರಿಯನ್ನು ಪಂಜಾಬ್ ಕಿಂಗ್ಸ್ ಯಾವ ರೀತಿ ಚೇಸ್ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಸತತ 9 ಬಾರಿ ಟಾಸ್ ಗೆದ್ದು ಅಪರೂಪದ ದಾಖಲೆ ಸರಿಗಟ್ಟಿದ ಡೆಲ್ಲಿ

ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವಿಗಿಂತ 'ಟಾಸ್ ಭಾಗ್ಯ'ವೇ ಹೆಚ್ಚಾಗಿ ಕೈ ಹಿಡಿಯುತ್ತಿದೆ. ಇಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆಲ್ಲುತ್ತಿದ್ದಂತೆ, ಅಕ್ಷರ್ ಪಟೇಲ್ ಬಳಗ ಐಪಿಎಲ್ ಇತಿಹಾಸದಲ್ಲೇ ಅಪರೂಪದ ದಾಖಲೆಯೊಂದನ್ನು ಸರಿಗಟ್ಟಿದೆ. ಸತತವಾಗಿ ಒಂಬತ್ತನೇ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಗೆದ್ದಿದೆ. ಈ ಮೂಲಕ, ಐಪಿಎಲ್‌ನಲ್ಲಿ ಸತತವಾಗಿ ಅತಿ ಹೆಚ್ಚು ಬಾರಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ದಾಖಲೆಯನ್ನು ಡೆಲ್ಲಿ ಕೂಡ ಸರಿಗಟ್ಟಿದೆ.

ಈ ಸೀಸನ್‌ನಲ್ಲಿ ಆಡಿದ ಎಲ್ಲಾ 7 ಪಂದ್ಯಗಳಲ್ಲೂ ಡೆಲ್ಲಿ ತಂಡವೇ ಟಾಸ್ ಗೆದ್ದಿದೆ. ಅಷ್ಟೇ ಅಲ್ಲ, ಕಳೆದ ಸೀಸನ್‌ನ (2025) ಕೊನೆಯ ಎರಡು ಪಂದ್ಯಗಳಲ್ಲೂ ಅವರೇ ಟಾಸ್ ಗೆದ್ದಿದ್ದರು. ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ನಾಯಕ ಅಕ್ಷರ್ ಪಟೇಲ್, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಈ ಸೀಸನ್‌ನಲ್ಲಿ ಟಾಸ್ ಗೆದ್ದ ನಾಯಕರೆಲ್ಲರೂ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಟ್ರೆಂಡ್‌ಗೆ ಇದು ತದ್ವಿರುದ್ಧವಾಗಿತ್ತು. ಬಿಸಿಲಿನ ತಾಪ ಹೆಚ್ಚಾಗಿರುವುದು ಮತ್ತು ಪಿಚ್ ನಿಧಾನವಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವುದಾಗಿ ಅಕ್ಷರ್ ಸ್ಪಷ್ಟಪಡಿಸಿದರು.