ಏಷ್ಯಾಕಪ್‌ನಲ್ಲಿ ಆಡದಿದ್ದರೆ..? ವಿಶ್ವಕಪ್‌ಗೂ ಮುನ್ನ ಶ್ರೇಯಸ್, ರಾಹುಲ್‌ಗೆ ಎಚ್ಚರಿಕೆ?
* ಏಕದಿನ ವಿಶ್ವಕಪ್‌ಗೂ ಮುನ್ನ ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್‌ಗೆ ಎಚ್ಚರಿಕೆ?
* ಗಾಯದ ಸಮಸ್ಯೆಯಿಂದ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಉಭಯ ಆಟಗಾರರು
* ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 05ರಿಂದ ಆರಂಭ
ನವದೆಹಲಿ(ಆ.14): ಗಾಯದಿಂದ ಚೇತರಿಸಿಕೊಳ್ಳುತ್ತಿರುವ ತಾರಾ ಬ್ಯಾಟರ್‌ಗಳಾದ ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಏಷ್ಯಾಕಪ್‌ನಲ್ಲಿ ಆಡದಿದ್ದರೆ, ಏಕದಿನ ವಿಶ್ವಕಪ್ ತಂಡದಲ್ಲೂ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ವಿಶ್ವಕಪ್‌ನಲ್ಲಿ ಆಡಲಿರುವ ತಂಡವನ್ನೇ ರಿಹರ್ಸಲ್ ಎಂಬಂತೆ ಏಷ್ಯಾಕಪ್‌ನಲ್ಲಿ ಆಡಿಸಲು ಸದ್ಯ ಬಿಸಿಸಿಐ ಚಿಂತಿಸುತ್ತಿದೆ. ಅಲ್ಲದೇ, ವಿಶ್ವಕಪ್‌ಗೂ ಮುನ್ನ ಭಾರತ ಏಷ್ಯಾಕಪ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಏಕದಿನ ಪಂದ್ಯಗಳನ್ನಾಡಲಿದೆ.
ಹೀಗಾಗಿ ಏಷ್ಯಾಕಪ್‌ಗೂ ಮುನ್ನ ರಾಹುಲ್, ಶ್ರೇಯಸ್ ಫಿಟ್ನೆಸ್ ಸಾಬೀತುಪಡಿಸಿ ತಂಡದಲ್ಲಿ ಸ್ಥಾನ ಪಡೆದರೆ ಮಾತ್ರ ವಿಶ್ವಕಪ್‌ಗೂ ಆಯ್ಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇವರಿಬ್ಬರೂ ಆಯ್ಕೆಯಾಗದಿದ್ದರೆ ಆಗ ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಸೂರ್ಯಕುಮಾರ್ ನಡುವೆ ಪೈಪೋಟಿ ಏರ್ಪಡಬಹುದು.
ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿದೆ. ಫೈನಲ್ ಪಂದ್ಯವು ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ವಿರಾಟ್ ಕೊಹ್ಲಿ ಬಳಿಯಿರುವ ಟಾಪ್ 10 ಕಾಸ್ಟ್ಲಿ ವಾಚ್‌ಗಳಿವು..! ಒಂದು ವಾಚ್ ಬೆಲೆ 100 ಕುಟುಂಬಗಳ ವರ್ಷದ ಆದಾಯ..!
ನಿವೃತ್ತಿ ತೊರೆದು ವಿಶ್ವಕಪ್ ಆಡಲು ಸ್ಟೋಕ್ಸ್‌ಗೆ ಮನವಿ!
ಲಂಡನ್: ಐಸಿಸಿ ಏಕದಿನ ವಿಶ್ವಕಪ್‌ಗೂ ಮುನ್ನ 2019ರ ವಿಶ್ವಕಪ್ ಹೀರೋ, ತಾರಾ ಆಲ್ರೌಂಡರ್ ಬೆನ್ ಸ್ಟೋಕ್ಸ್‌ರನ್ನು ತಂಡಕ್ಕೆ ಮರಳಿ ಕರೆತರಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪ್ರಯತ್ನಿಸುತ್ತಿದೆ. ಈ ಬಗ್ಗೆ ಇಂಗ್ಲೆಂಡ್ ಏಕದಿನ, ಟಿ20 ತಂಡದ ಕೋಚ್ ಮ್ಯಾಥ್ಯೂ ಮಾಟ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಏಕದಿನಕ್ಕೆ ಘೋಷಿಸಿರುವ ನಿವೃತ್ತಿಯನ್ನು ಹಿಂಪಡೆಯುವಂತೆ ಸ್ಟೋಕ್ಸ್ ಅವರಲ್ಲಿ ಜೋಸ್ ಬಟ್ಲರ್ ಮಾತುಕತೆ ನಡೆಸಲಿದ್ದಾರೆ ಎಂದಿದ್ದಾರೆ. ಬಟ್ಲರ್ 2019ರಲ್ಲಿ ಇಂಗ್ಲೆಂಡ್ ತವರಿನಲ್ಲಿ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕಳೆದ ವರ್ಷ ಟೆಸ್ಟ್‌ನತ್ತ ಗಮನ ಹರಿಸುವ ನಿಟ್ಟಿನಲ್ಲಿ ಏಕದಿನಕ್ಕೆ ನಿವೃತ್ತಿ ಘೋಷಿಸಿದ್ದರು.
ಏಕದಿನ ವಿಶ್ವಕಪ್ ಸಮರಕ್ಕೂ ಮೊದಲೇ ಸೋಲುಪ್ಪಿಕೊಂಡ್ರಾ ನಾಯಕ ರೋಹಿತ್ ಶರ್ಮಾ?
ಇಂಗ್ಲೆಂಡ್ ಒಂಡೇ ಕಪ್: ಪೃಥ್ವಿ ಶಾ ಮತ್ತೆ ಶತಕ
ನಾರ್ಥಾಂಪ್ಟನ್: ಭಾರತದ ಯುವ ಕ್ರಿಕೆಟಿಗ ಪೃಥ್ವಿ ಶಾ ಇಂಗ್ಲೆಂಡ್‌ನ ಒಂಡೇ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಮ್ಮೆ ಭರ್ಜರಿ ಶತಕ ಸಿಡಿಸಿದ್ದಾರೆ. ಇತ್ತೀಚೆಗಷ್ಟೇ 244 ರನ್ ಬಾರಿಸಿ ಗಮನ ಸೆಳೆದಿದ್ದ 23 ವರ್ಷದ ಪೃಥ್ವಿ, ಭಾನುವಾರ ಮತ್ತೆ ಅಬ್ಬರಿಸಿದರು. ಟೂರ್ನಿಯಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಆಡುತ್ತಿರುವ ಅವರು ಡರ್ಹಾಮ್ ತಂಡದ ವಿರುದ್ಧ ಕೇವಲ 76 ಎಸೆತಗಳಲ್ಲಿ ಔಟಾಗದೆ 125 ರನ್ ಸಿಡಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಇದರೊಂದಿಗೆ 199 ರನ್‌ಗಳ ಗುರಿ ಬೆನ್ನತ್ತಿದ್ದ ನಾರ್ಥಾಂಪ್ಟನ್‌ಶೈರ್ ತಂಡ ಕೇವಲ 25.4 ಓವರ್‌ಗಳಲ್ಲೇ ಗೆಲುವಿನ ದಡ ಸೇರಿತು.
ಕಮ್‌ಬ್ಯಾಕ್‌ಗೆ ಪ್ರಸಿದ್ಧ್ ಕೃಷ್ಣ ಉತ್ತಮ ತಯಾರಿ
ಬೆಂಗಳೂರು: ಬೆನ್ನು ನೋವಿನಿಂದ ಚೇತರಿಸಿಕೊಂಡು ಭಾರತ ತಂಡಕ್ಕೆ 1 ವರ್ಷಗಳ ಬಳಿಕ ಮರಳಲು ಸಿದ್ಧರಾಗಿರುವ ತಾರಾ ವೇಗಿ, ಕರ್ನಾಟಕದ ಪ್ರಸಿದ್ಧ್ ಕೃಷ್ಣ ಅವರು ಭಾನುವಾರ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಕಣಕ್ಕಿಳಿದರು. ಮೈಸೂರು ವಾರಿಯರ್ಸ್ ಪರ ಆಡುತ್ತಿರುವ ಅವರು ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ 2 ಓವರ್ ಬೌಲ್ ಮಾಡಿದ್ದು, 13 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ. ಪ್ರಸಿದ್ಧ್ ಅವರು ಐರ್ಲೆಂಡ್ ವಿರುದ್ಧ ಆ.18ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದು, ಆ.15ರಂದು ಮಹಾರಾಜ ಟ್ರೋಫಿ ತೊರೆದು ಐರ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ಏಷ್ಯಾಕಪ್, ವಿಶ್ವಕಪ್‌ಗೆ ಆಯ್ಕೆಯಾಗಬಹುದು.