ಸಿಡ್ನಿ(ಡಿ.01): ಭಾರತ ವಿರುದ್ಧದ ಇನ್ನುಳಿದ ಸೀಮಿತ ಓವರ್‌ಗಳ ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಅವರ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಡೇವಿಡ್‌ ವಾರ್ನರ್‌ ಗಾಯಗೊಂಡು ತಂಡದಿಂದ ದೀರ್ಘಕಾಲ ಹೊರಬಿದ್ದಿರುವುದು ಟೀಂ ಇಂಡಿಯಾಗೆ ಹೆಚ್ಚಿನ ಲಾಭವಾಗಲಿದೆ ಎಂದು ಭಾರತ ತಂಡದ ಉಪನಾಯಕ ಕೆ.ಎಲ್‌. ರಾಹುಲ್‌ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. 

2ನೇ ಏಕದಿನ ಪಂದ್ಯದಲ್ಲಿ 51 ರನ್‌ಗಳ ಸೋಲಿನ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವೇಳೆ ರಾಹುಲ್‌ ಈ ವಿಷಯ ಹೇಳಿದರು. ವಾರ್ನರ್‌ ಗಾಯಗೊಂಡಿರುವುದು ಭಾರತಕ್ಕೆ ಲಾಭ ಎಂದು ಯೋಚಿಸುತ್ತಿರುವ ರಾಹುಲ್‌, ಮಾನವೀಯತೆ ತೋರಬೇಕಿದೆ. ಆಟಗಾರನಿಗೆ ಕ್ರೀಡಾ ಸ್ಪೂರ್ತಿ ಇರಬೇಕು. ಸ್ಪೂರ್ತಿ ಮರೆತು ಮಾತನಾಡಬಾರದು ಎಂದು ರಾಹುಲ್‌ರನ್ನು ಅಭಿಮಾನಿಗಳು ಟೀಕಿಸಿದ್ದಾರೆ.

ಹಾಟ್‌ ಸೀಟಲ್ಲಿ ಕ್ಯಾಪ್ಟನ್ ಕೊಹ್ಲಿ; ವಿರಾಟ್ ನಾಯಕತ್ವದ ಬಗ್ಗೆ ಅಸಮಾಧಾನ

ವಾರ್ನರ್‌ ಗಾಯದ ಸ್ವರೂಪ ಗಂಭೀರ ಆಗಿರುವ ಕಾರಣದಿಂದ, ಭಾರತ ವಿರುದ್ಧದ 3ನೇ ಏಕದಿನ ಪಂದ್ಯ ಹಾಗೂ ಡಿ. 4ರಿಂದ 8 ರವರೆಗೆ ನಡೆಯಲಿರುವ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ಸದ್ಯ ತಮ್ಮ ಗಾಯದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ವಾರ್ನರ್‌, ಮನೆಯಲ್ಲಿ ಕೆಲ ದಿನ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಆ ಬಳಿಕ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ನಂತರ ಫಿಟ್‌ ಆಗಿ ಡಿ.17 ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಸೀಸ್‌ ತಂಡಕ್ಕೆ ಸೇರಿಸಿಕೊಳ್ಳುವ ಯೋಜನೆ ಆಸ್ಪ್ರೇಲಿಯಾ ತಂಡದ್ದಾಗಿದೆ.